Advertisement

ಕಾಂಗ್ರೆಸ್‌-ಬಿಜೆಪಿಯತ್ತ ಗುಳೇ ತಡೆಗೆ ಜೆಡಿಎಸ್‌ ತಂತ್ರ

11:54 PM Feb 24, 2020 | Team Udayavani |

ಬೆಂಗಳೂರು: ಭವಿಷ್ಯ ಅರಸಿ ಬೇರೆ ಪಕ್ಷಗಳತ್ತ ಮುಖ ಮಾಡಿರುವ ಶಾಸಕರು, ಪರಿಷತ್‌ ಸದಸ್ಯರು, ಪ್ರಮುಖ ಮುಖಂಡರನ್ನು ಹಿಡಿದಿಟ್ಟುಕೊಳ್ಳಲು ಮುಂದಾಗಿರುವ ಜೆಡಿಎಸ್‌, ಪಕ್ಷ ಸಂಘಟನೆಗೆ ಒತ್ತು ನೀಡಿ ಸಮುದಾಯವಾರು ಸಮಾವೇಶಗಳ ಮೂಲಕ ಮತಬ್ಯಾಂಕ್‌ ಗಟ್ಟಿಗೊಳಿಸಿಕೊಳ್ಳಲು ಕಾರ್ಯತಂತ್ರ ರೂಪಿಸಿದೆ.

Advertisement

ಮುಂದಿನ ಮೂರು ವರ್ಷಗಳ ನಂತರ ಎದುರಾಗುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ಆರಂಭಿಸಿ ವರ್ಷಕ್ಕೆ ಮುಂಚೆಯೇ ಅಭ್ಯರ್ಥಿಗಳ ಘೋಷಣೆ ಮಾಡಲು ತೀರ್ಮಾನಿಸಲಾಗಿದ್ದು, ಬಜೆಟ್‌ ಅಧಿವೇಶನ ಮುಗಿಯುತ್ತಿದ್ದಂತೆ ರಾಜ್ಯ ಪ್ರವಾಸಕ್ಕೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ರಾಜ್ಯ ಪ್ರವಾಸದ ಜತೆ ಜತೆಗೆ ಬೆಂಗಳೂರು, ಹುಬ್ಬಳ್ಳಿ, ಗುಲ್ಬರ್ಗಾ, ಬೆಳಗಾವಿ, ಮೈಸೂರಿನಲ್ಲಿ ಮಹಿಳಾ, ಹಿಂದುಳಿದ, ಆಲ್ಪಸಂಖ್ಯಾತರ, ಎಸ್‌ಸಿ-ಎಸ್‌ಟಿ, ರೈತರ ಸಮಾವೇಶ ಸಹ ನಡೆಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷ ಬಿಡಲು ಮುಂದಾಗಿರುವ ಹಾಗೂ ಆ ಚಿಂತನೆಯಲ್ಲಿರುವವರ ಹತ್ತು ಕ್ಷೇತ್ರಗಳಲ್ಲಿ ಪರ್ಯಾಯ ನಾಯಕತ್ವ ಬೆಳೆಸುವುದು, ಸದಸ್ಯತ್ವ ನೋಂದಣಿ ಟಾರ್ಗೆಟ್‌ ನೀಡುವುದು, ತಾಲೂಕು, ಜಿಲ್ಲಾ ಘಟಕಗಳಿಂದ ಹಿಡಿದು ರಾಜ್ಯ ಘಟಕದವರೆಗೂ ಪುನರ್‌ ರಚನೆ ಮಾಡಲು, ಜತೆಗೆ, ಪಕ್ಷದ ಪ್ರಮುಖರನ್ನೊಳಗೊಂಡ ಹತ್ತು ಮಂದಿ ಸದಸ್ಯರ ತಂಡದ ಕೋರ್‌ ಕಮಿಟಿ ರಚಿಸಿ ಪಕ್ಷದ ಪ್ರಮುಖ ನಿರ್ಧಾರಗಳನ್ನು ಅಲ್ಲಿ ಚರ್ಚಿಸಿ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ.

ಸವಾಲು: ಉಪ ಚುನಾವಣೆಯಲ್ಲಿ ಬಿಜೆಪಿ ಹಳೇ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಜಯಗಳಿಸಿರು ವುದು. ಒಕ್ಕಲಿಗರ ಪ್ರಾಬಲ್ಯದ ಕ್ಷೇತ್ರಗಳು ಕೈ ಬಿಡುತ್ತಿರುವ ಮುನ್ಸೂಚನೆಯಾಗಿದೆ. ಈ ವೇಳೆಯಲ್ಲಿ ಪಕ್ಷ ಸಂಘಟನೆ ಮಾಡದಿದ್ದರೆ ಭವಿಷ್ಯ ಕಷ್ಟ. ಪಕ್ಷಕ್ಕೆ ಮತ್ತೆ ನೆಲೆ ಕಲ್ಪಿಸುವುದು ದೊಡ್ಡ ಸವಾಲೂ ಆಗಿದೆ. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮೈಸೂರು, ಮಂಡ್ಯ, ಹಾಸನ, ಚಿಕ್ಕಮಗಳೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಪಕ್ಷದ ಅಸ್ತಿತ್ವ ಇದ್ದು ಅದನ್ನು ಗಟ್ಟಿಗೊಳಿಸಬೇಕಾಗಿದೆ.

ಯುವಕರನ್ನು ಹೆಚ್ಚು ಪಕ್ಷಕ್ಕೆ ಸೆಳೆಯಬೇಕಾಗಿದೆ ಎಂದು ಹಿರಿಯ ನಾಯಕರು ಇತ್ತೀಚೆಗೆ ದೇವೇಗೌಡರ ಮುಂದೆ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯಬೇಕಿರುವ ಬಿಬಿಎಂಪಿ ಚುನಾವಣೆಯಲ್ಲಿ ಹೆಚ್ಚು ವಾರ್ಡ್‌ಗಳಲ್ಲಿ ಗೆಲ್ಲಬೇಕು ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರು ನಗರದ ನಾಯಕರಿಗೆ ತಾಕೀತು ಮಾಡಿದ್ದಾರೆ.

Advertisement

ಮನಸ್ಸಿಲ್ಲದವರು ಪಕ್ಷ ಬಿಟ್ಟು ಹೋಗಲಿ: ಪಕ್ಷ ಸಂಘಟನೆಗೆ ಒತ್ತು ನೀಡುತ್ತಿಲ್ಲ ಎಂಬ ಕಾರಣಕ್ಕೆ ಕೆಲವರು ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್‌ ಹಾಗೂ ಬಿಜೆಪಿಯತ್ತ ಮುಖ ಮಾಡಿರುವುದರಿಂದ ಎಚ್ಚೆತ್ತುಕೊಂಡಿರುವ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಪಕ್ಷದಲ್ಲಿರಲು ಮನಸ್ಸಿಲ್ಲದವರು ಹೋಗುವುದಾದರೆ ಹೋಗಲಿ, ಆದರೆ, ನಾವಾಗಿಯೇ ಪಕ್ಷ ಬಿಡುವ ಸ್ಥಿತಿ ನಿರ್ಮಾಣ ಮಾಡುವುದು ಬೇಡ. ಆದಷ್ಟು ಎಲ್ಲ ಶಾಸಕರು, ವಿಧಾನಪರಿಷತ್‌ ಸದಸ್ಯರ ಜತೆ ಖುದ್ದಾಗಿ ನಾನೇ ಮಾತನಾಡುತ್ತೇನೆಂದು ಆಪ್ತರ ಬಳಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next