Advertisement

ಟಾರ್ಗೆಟ್‌ 50ರತ್ತ ಜೆಡಿಎಸ್‌ ಚಿತ್ತ; ಗೆಲ್ಲಲು ಅವಕಾಶ ಇರುವ ಕ್ಷೇತ್ರಗಳಲ್ಲಿ ಕಾರ್ಯತಂತ್ರ

01:18 AM Feb 19, 2023 | Team Udayavani |

ಬೆಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಸೆಡ್ಡು ಹೊಡೆದು ಅಧಿಕಾರ ಹಿಡಿಯುವ ಕನಸು ಕಾಣುತ್ತಿರುವ ಜೆಡಿಎಸ್‌ ಗೆಲ್ಲಲು ಅವಕಾಶವಿರುವ 50 ಕ್ಷೇತ್ರಗಳಲ್ಲಿ ವಿಶೇಷ ಕಾರ್ಯತಂತ್ರ ರೂಪಿಸಲು ಮುಂದಾಗಿದೆ.

Advertisement

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪರ್ಧಿಸುವುದಾಗಿ ಘೋಷಿಸಿರುವ ಕೋಲಾರ, ಬಿಜೆಪಿ ಸಚಿವರು ಪ್ರತಿನಿಧಿಸುವ ಚಿಕ್ಕಬಳ್ಳಾಪುರ, ಚಿಕ್ಕನಾಯಕನಹಳ್ಳಿ, ಪದ್ಮನಾಭನಗರ, ಯಶವಂತಪುರ ಸೇರಿದಂತೆ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಗೆಲುವು ಸಾಧಿಸದ ಐವತ್ತು ಕ್ಷೇತ್ರಗಳು ಟಾರ್ಗೆಟ್‌ -50 ಪಟ್ಟಿಯಲ್ಲಿ ಸೇರಿವೆ.

ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಮೈಸೂರು, ಹಾಸನ, ಬೆಳಗಾವಿ, ಕೊಡಗು, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಬೀದರ್‌, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಬಳ್ಳಾರಿ ಜಿಲ್ಲೆಗಳಲ್ಲಿ ಐವತ್ತು ಕ್ಷೇತ್ರಗಳನ್ನು ಗುರುತಿಸಲಾಗಿದೆ. ಆ ಕ್ಷೇತ್ರಗಳತ್ತ ಹೆಚ್ಚು ಗಮನಹರಿಸಿ ಶ್ರಮ ಹಾಕಲು ತೀರ್ಮಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

50 ಕ್ಷೇತ್ರಗಳ ಪೈಕಿ ಹಲವು ಕ್ಷೇತ್ರಗಳಲ್ಲಿ ಈಗಾಗಲೇ ಅಭ್ಯರ್ಥಿಗಳನ್ನು ಜೆಡಿಎಸ್‌ ಘೋಷಿಸಿದೆಯಾದರೂ ಅಗತ್ಯಬಿದ್ದರೆ ಬದಲಾವಣೆ ಮಾಡುವ ಸಾಧ್ಯತೆಯೂ ಇದೆ .ಕಾಂಗ್ರೆಸ್‌ ಮತ್ತು ಬಿಜೆಪಿಯಲ್ಲಿ ಟಿಕೆಟ್‌ ಆಕಾಂಕ್ಷಿಗಳಾಗಿರುವವರು ಎಚ್‌.ಡಿ.ಕುಮಾರಸ್ವಾಮಿ ಸಂಪರ್ಕದಲ್ಲಿದ್ದು ಆ ಪೈಕಿ ಸ್ಥಳೀಯವಾಗಿ ಪ್ರಭಾವ ಇರುವ ಹಾಗೂ ಗೆಲ್ಲುವ ಸಾಮರ್ಥ್ಯ ಇರುವವರ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಹೇಳಲಾಗಿದೆ.

ಸಮೀಕ್ಷೆ ಸುಳಿವು
ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿಯವರು ಪಂಚರತ್ನ ಯಾತ್ರೆ ನಡೆಸಿದ ಕ್ಷೇತ್ರಗಳಲ್ಲಿ ಜೆಡಿಎಸ್‌ ಸಮೀಕ್ಷೆ ಮಾಡಿಸಿದೆ. ಅದರಲ್ಲಿ ಗೆಲ್ಲುವ ಅವಕಾಶ ಇರುವ ಬಗ್ಗೆ ವರದಿ ನೀಡಲಾಗಿದೆ. ಈಗಾಗಲೇ ಘೋಷಿಸಿರುವ ಅಭ್ಯರ್ಥಿ ಸಕ್ರಿಯರಾಗದಿರುವುದು ಹಾಗೂ ಕ್ಷೇತ್ರದಲ್ಲಿ ಓಡಾಟ, ಸಂಘಟನೆಯಲ್ಲಿ ಹಿಂದಿರುವುದರ ಬಗ್ಗೆಯೂ ಅದರಲ್ಲಿ ತಿಳಿದು ಬಂದಿದೆ. ಅಂತಹ ಅಭ್ಯರ್ಥಿಗಳನ್ನು ಬದಲಾಯಿಸಲು ನಿರ್ಧರಿಸಲಾಗಿದೆ. ಪಂಚರತ್ನ ಯಾತ್ರೆಯ ನಂತರ ಕೆಲವು ಕ್ಷೇತ್ರಗಳಲ್ಲಿ ಟಿಕೆಟ್‌ಗೆ ಪೈಪೋಟಿಯೂ ಪ್ರಾರಂಭವಾಗಿದೆ ಎಂದು ಹೇಳಲಾಗಿದೆ.

Advertisement

ಸಿದ್ದು ಕಟ್ಟಿ ಹಾಕಲು ತಂತ್ರ
ಹತ್ತು ದಿನ ಪ್ರಚಾರ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡಿದರೆ ಅವರನ್ನು ಬೇರೆ ಯವುದೇ ಕ್ಷೇತ್ರಗಳತ್ತ ಗಮನಕೊಡದೆ, ಕೋಲಾರದಲ್ಲೇ ಅವರನ್ನು ಕಟ್ಟಿಹಾಕಲು ಜೆಡಿಎಸ್‌ ಕಾರ್ಯತಂತ್ರ ರೂಪಿಸಿದೆ. ಎಚ್‌.ಡಿ.ದೇವೇಗೌಡರ ಹಾಗೂ ಎಚ್‌.ಡಿ.ಕುಮಾರಸ್ವಾಮಿಯವರು ಹತ್ತುದಿನ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಪ್ರಚಾರ ಮಾಡುವುದು. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಸ್ಪರ್ಧೆಗೆ ವಿರೋಧ ಇರುವ ಕಾಂಗ್ರೆಸ್‌ ನಾಯಕರನ್ನು ಜೆಡಿಎಸ್‌ಗೆ ಸೆಳೆಯಲು ಸಿದ್ಧತೆ ನಡೆಸಲಾಗಿದೆ.

ಮುಸ್ಲಿಂ ಸಮುದಾಯದ ಮತವನ್ನು ಸೆಳೆಯಲು ಎರಡನೇ ಹಂತದಲ್ಲಿ ಸಿ.ಎಂ.ಇಬ್ರಾಹಿಂ ಅವರ ನೇತೃತ್ವದಲ್ಲಿ ತಂಡ ರಚಿಸಿ ಒಂದು ವಾರ ಕಾಲ ಎರಡೂ ಜಿಲ್ಲೆಗಳಲ್ಲಿ ಪ್ರಚಾರಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ. ಇತ್ತೀಚೆಗೆ ನಿಖೀಲ್‌ ಕುಮಾರಸ್ವಾಮಿ ಕೋಲಾರ ಪ್ರವಾಸ ಸಂದರ್ಭದಲ್ಲಿ ಈ ಬಗ್ಗೆ ಸ್ಥಳೀಯ ಮುಖಂಡರ ಜತೆ ಸಮಾಲೋಚಿಸಿದ್ದು ಮಾರ್ಚ್‌ ಮೊದಲ ವಾರ ಈ ಬಗ್ಗೆಯೇ ದೇವೇಗೌಡರ ನಿವಾಸದಲ್ಲಿ ವಿಶೇಷ ಸಭೆ ಸಹ ಆಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

-ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next