Advertisement

ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ 28 ರಂದು ಜೆಡಿಎಸ್‌ ಪ್ರತಿಭಟನೆ

08:25 PM Dec 24, 2019 | Team Udayavani |

ಹಾಸನ: ಪೌರತ್ವ ತಿದ್ದುಪಡಿ ಕಾಯಿದೆ ಜಾರಿಗೆ ವಿರೋಧಿಸಿ ಹಾಗೂ ಮಂಗಳೂರಿನ ಗೋಲಿಬಾರ್‌ ಘಟನೆಯನ್ನು ನ್ಯಾಯಾಂಗ ತನಿಖೆಗೆ ವಹಿಸುವಂತೆ ಒತ್ತಾಯಿಸಿ ಜೆಡಿಎಸ್‌ ವತಿಯಿಂದ ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡಿ.28ರಂದು ಶಾಂತಿಯುತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಮುಖಂಡ, ಮಾಜಿ ಸಚಿವ ಎಚ್‌.ಡಿ. ರೇವಣ್ಣ ಅವರು ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯಿದೆಯನ್ನು ಕೇಂದ್ರ ಸರ್ಕಾರ ತುರ್ತಾಗಿ ಜಾರಿಗೆ ತರುವ ಅಗತ್ಯವಿರಲಿಲ್ಲ. ಯಾವ ಉದ್ದೇಶದಿಂದ ಕೇಂದ್ರ ಸರ್ಕಾರ ಆತುರವಾಗಿ ಜಾರಿಗೆ ತರುತ್ತಿದೆಯೋ ಗೊತ್ತಿಲ್ಲ. ದೇಶದ ವಿರೋಧ ಪಕ್ಷದ ನಾಯಕರು, ವಿವಿಧ ಪಕ್ಷಗಳ ಮುಖಂಡರೊಂದಿಗೆ ಚರ್ಚಿಸಿ ಜನರಿಗೆ ಮನವರಿಕೆ ಮಾಡಿಕೊಟ್ಟ ನಂತರ ಅಗತ್ಯವಿದ್ದರೆ ಕಾಯಿದೆಯನ್ನು ಜಾರಿಗೆ ತರಬಹುದಿತ್ತು. ಆದರೆ ಕೇಂದ್ರ ಸರ್ಕಾರ ಬಹುಮತವಿದೆ ಎಂದು ಸರ್ವಾಧಿಕಾರಿ ಧೋರಣೆ ಅನುಸರಿಸಿದ ಪರಿಣಾಮವಾಗಿ ದೇಶಾದ್ಯಂತ ಉಗ್ರ ಪ್ರತಿಭಟನೆಗಳು ನಡೆಯುತ್ತಿವೆ. ಅಮಾಯಕರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

ನ್ಯಾಯಾಂಗ ತನಿಖೆ ನಡೆಸಲಿ: ಮಂಗಳೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗೋಲಿಬಾರ್‌ ನಡೆಸಿದ್ದರಿಂದ ಅಲ್ಪ ಸಂಖ್ಯಾತ ಸಮುದಾಯದ ಇಬ್ಬರು ಅಮಾಯಕರು ಬಲಿಯಾಗಿದ್ದಾರೆ. ಪೊಲೀಸರು ಉದ್ದೇಶಪೂರ್ವಕವಾಗಿಯೇ ಗೋಲಿಬಾರ್‌ ನಡೆಸಿ ಇಬ್ಬರನ್ನು ಕೊಂದಿದ್ದಾರೆ ಎಂದು ಆರೋಪಿಸಿದರು.

ಪೊಲೀಸ್‌ ಇನ್‌ಸ್ಪೆಕ್ಟರ್‌ ಒಬ್ಬರ ಆಡಿಯೋ ವೈರಲ್‌ ಆಗಿದ್ದು, ಅದರಲ್ಲಿ ಅವರಾಡಿರುವ ಮಾತುಗಳಿಂದ ಉದ್ದೇಶಪೂರ್ವಕವಾಗಿಯೇ ಗೋಲಿಬಾರ್‌ ನಡೆಸಿದಂತಿದೆ. ಇಬ್ಬರು ಬಲಿಯಾಗುವುದರ ಜೊತೆಗೆ ಸುಮಾರು 9 ಜನರು ಗಾಯಗೊಂಡಿದ್ದು, ಪಿಎಚ್‌ಡಿ ಮಾಡುತ್ತಿದ್ದ ಯುವಕನ ಸ್ಥಿತಿ ಗಂಭೀರವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಿಐಡಿ ತನಿಖೆ ಬೇಡ: ಗೋಲಿಬಾರ್‌ ಘಟನೆಯನ್ನು ಸರ್ಕಾರ ಸಿಐಡಿ ತನಿಖೆಗೆ ವಹಿಸುವುದಾಗಿ ಹೇಳಿದೆ. ಪೊಲೀಸರ ಮೇಲಿನ ಆರೋಪವನ್ನು ಪೊಲೀಸರೇ ತನಿಖೆ ನಡೆಸಿದರೆ ಸತ್ಯ ಹೊರಬರುವುದಿಲ್ಲ. ನ್ಯಾಯಾಂಗ ತನಿಖೆ ನಡೆಸಿದರೆ ಮಾತ್ರ ಸತ್ಯಾಂಶ ಹೊರಬರುತ್ತದೆ. ಹೈ ಕೋರ್ಟಿನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಸರ್ಕಾರಕ್ಕೆ ನ್ಯಾಯಾಂಗದ ಬಗ್ಗೆ ಗೌರವ ಇದ್ದರೆ ನ್ಯಾಯಾಂಗ ತನಿಖೆ ನಡೆಸಲಿ ಎಂದು ಹೇಳಿದರು.

Advertisement

ಕಾಯ್ದೆ ಪುನರ್‌ ಪರಿಶೀಲಿಸಿ: ದೇಶದ 10 ರಾಜ್ಯಗಳಲ್ಲಿ ಪೌರತ್ವ ತಿದು³ಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ಜಾರಿಗೆ ತರುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಹಾಗಾಗಿ ಕರ್ನಾಟಕದಲ್ಲಿ ಜಾರಿ ಮಾಡಬಾರದು ಎಂದು ಒತ್ತಾಯಿಸಿದ ರೇವಣ್ಣ ಅವರು, ಕೇಂದ್ರ ಸರ್ಕಾರ ಪೌರತ್ವ ಕಾಯ್ದೆಯನ್ನ ಮತ್ತೆ ಪುನರ್‌ ಪರಿಶೀಲಿಸಬೇಕು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದಗಲೆಲ್ಲ ಗೋಲಿಬಾರ್‌ ಆಗಿ ಜನರು ಸಾಯುತ್ತಾರೆ.

ಅಲ್ಪ ಸಂಖ್ಯಾತರು ಬಿಜೆಪಿಗೆ ಮತ ಹಾಕುವುದಿಲ್ಲ ಎನ್ನುವ ಕಾರಣಕ್ಕೆ ಗುಂಡು ಹೊಡಿಸೋದಾ ಯಾವ ನ್ಯಾಯ ? ಪರಿಸ್ಥಿತಿ ನಿಭಾಯಿಸುವ ಅವಕಾಶವಿದ್ಯಾಗ್ಯೂ 144 ಸೆಕ್ಷನ್‌ ಜಾರಿ ಮಾಡುವುದು, ಗೋಲಿಬಾರ್‌ ನಡೆಸುವುದು ಬಿಜೆಪಿ ಸರ್ಕಾರದ ಚಾಳಿಯಾಗಿದೆ. ಈಗ ಮಾಜಿ ಸಚಿವ ಯು.ಟಿ.ಖಾದರ್‌ ಅವರ ಮೇಲೆ ಎಫ್ಐಆರ್‌ ಹಾಕಲಾಗಿದೆ. ಈ ಸರ್ಕಾರ 144 ಸೆಕ್ಷನ್‌ ಸರ್ಕಾರ, ಎಫ್ಐಆರ್‌ ಹಾಕುವ ಸರ್ಕಾರ ಎಂದು ಟೀಕಿಸಿದರು.

ಮಾಜಿ ಶಾಸಕ ಬಿ.ವಿ. ಕರೀಗೌಡ, ಹುಡಾ ಮಾಜಿ ಅಧ್ಯಕ್ಷ ಕೆ.ಎಂ.ರಾಜೇಗೌಡ, ಹಾಸನ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಸ್‌.ದ್ಯಾವೇಗೌಡ, ಎಪಿಎಂಸಿಯ ಮಾಜಿ ಅಧ್ಯಕ್ಷ ಲಕ್ಷ್ಮಣಗೌಡ, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್‌. ಶಂಕರ್‌, ಮಾಜಿ ಉಪಾಧ್ಯಕ್ಷ ಇರ್ಷಾದ್‌ ಪಾಷಾ, ಜಿಪಂ ಉಪಾಧ್ಯಕ್ಷ ಎಚ್‌.ಪಿ. ಸ್ವರೂಪ್‌, ಮಾಜಿ ಅಧ್ಯಕ್ಷ ಸ್ವಾಮಿಗೌಡ, ಜೆಡಿಎಸ್‌ ಹಾಸನ ತಾಲೂಕು ಅಧ್ಯಕ್ಷ ಎಸ್‌. ದ್ಯಾವೇಗೌಡ, ಎಚ್‌.ಡಿ.ಸಿ.ಸಿ. ಬ್ಯಾಂಕಿನ ಚಂದ್ರೇಗೌಡ, ನಗರಸಭೆ ಮಾಜಿ ಅಧ್ಯಕ್ಷ ಸಯ್ನಾದ್‌ ಅಕºರ್‌ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪೊಲೀಸರ ಲೋಪ ಮುಚ್ಚಲು ಯತ್ನ: ಪೊಲೀಸ್‌ ಠಾಣೆ ಧ್ವಂಸಕ್ಕೆ ಪ್ರತಿಭಟನಾಕಾರರು ಯತ್ನಿಸಿದ್ದರು. ಕಲ್ಲುಗಳನ್ನು ಲಾರಿಯಲ್ಲಿ ತಂದು ತೂರುತ್ತಿದ್ದರು ಎಂದು ಪೊಲೀಸರು ಈಗ ವಿಡಿಯೋ ವೈರಲ್‌ ಮಾಡಿದ್ದಾರೆ. ಆದರೆ ಇದುವರೆಗೂ ಏಕೆ ಸುಮ್ಮನಿದ್ದರು ? ಪೊಲೀಸರು ತಮ್ಮ ಲೋಪವನ್ನು ಮುಚ್ಚಿಕೊಳ್ಳಲು ಈಗ ಚಿತ್ರೀಕರಿಸಿದ ವಿಡಿಯೋ ಬಿಡುಗಡೆ ಮಾಡಿರಬಹದು. ಈ ಎಲ್ಲ ಆರೋಪಗಳ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕಾಗಿದೆ. ಹಾಗಾಗಿ ನ್ಯಾಯಾಂಗ ತನಿಖೆ ನಡೆಸಲಿ ಎಂದು ರೇವಣ್ಣ ಒತ್ತಾಯಿಸಿದರು.

ಬಲಿಯಾದ ಜೀವ ವಾಪಸ್‌ ತರಲು ಸಾಧ್ಯವೇ?: ಗೋಲಿಬಾರ್‌ನಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಎಚ್‌.ಡಿ.ಕುಮಾರಸ್ವಾ ಮಿ ಅವರು ತಲಾ 7.5 ಲಕ್ಷ ರೂ. ಪರಿಹಾರ ನೀಡುವವರೆಗೂ ಸರ್ಕಾರ ಮೃತರ ಕುಟುಂಬದವರಿಗೆ ಪರಿಹಾರ ಘೋಷಣೆ ಮಾಡಲೇ ಇಲ್ಲ. ಈಗ 10 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಸರ್ಕಾರ 10 ಲಕ್ಷ ರೂ. ಪರಿಹಾರ ನೀಡಬಹುದು. ಆದರೆ ಜೀವಗಳನ್ನು ವಾಪಸ್‌ ತರಲು ಸಾಧ್ಯವೇ ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next