ಹಾಸನ: ಜಿಲ್ಲಾ ಪಂಚಾಯಿತಿ ಸಭೆ ನಡೆಯಲು ಜೆಡಿಎಸ್ ಸದಸ್ಯರು ಅವಕಾಶ ಕೊಡದೇ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ ಮತ್ತು ದಲಿತ ಮಹಿಳೆ ಎಂಬ ಕಾರಣಕ್ಕೆ ತಮಗೆ ಕಿರುಕುಳ ಕೊಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಅಧ್ಯಕ್ಷೆ ಬಿ.ಎಸ್.ಶ್ವೇತಾ ಅವರು ಕ್ಷಮೆ ಕೇಳಬೇಕು ಎಂದು ಜೆಡಿಎಸ್ ಸದಸ್ಯರು ಹಾಗೂ ಶಾಸಕರು ಪಟ್ಟು ಹಿಡಿದಿದ್ದರಿಂದ ಜಿಪಂ ಸಾಮಾನ್ಯ ಸಭೆ ಇಡೀ ದಿನ ಗದ್ದಲ, ಗೊಂದಲದಲ್ಲೇ ಮುಳುಗಿತು. ಜೆಡಿಎಸ್‌ನ ಪಟ್ಟಿಗೆ ಮಣಿದ ಅಧ್ಯಕ್ಷೆ ಶ್ವೇತಾ ಅವರು ಅಂತಿಮವಾಗಿ ಕ್ಷಮೆ ಯಾಚಿಸಿದ ರಲ್ಲದೇ, ಸ್ವಪಕ್ಷೀಯ ಸದಸ್ಯರೂ ಕ್ಷಮೆ ಕೇಳ ಬೇಕೆಂದು ಸಲಹೆ ನೀಡಿ ತಮ್ಮ ಬೆಂಬಲಕ್ಕೆ ನಿಲ್ಲದಿದ್ದರಿಂದ ಬೇಸತ್ತು ಕಣ್ಣೀರಿಟ್ಟು ಸಭೆಯಿಂದ ಹೊರ ನಡೆದರು.
ಆರೋಪ ಸತ್ಯಕ್ಕೆ ದೂರ: ಸಭೆ ಪ್ರಾರಂಭ ವಾಗುತ್ತಿದ್ದಂತೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಲೋಕೇಶ್ ಮಾತನಾಡಿ, ಜೆಡಿಎಸ್ ಸದಸ್ಯರು ಅಧ್ಯಕ್ಷರನ್ನು ಗೌರವದಿಂದ ಕಂಡು ಆಡಳಿತ ನಡೆಸಲು ಸಹಕಾರ ನೀಡುತ್ತಿದ್ದರೂ ತಾವು ದಲಿತ ಮಹಿಳೆ ಎಂದು ಜೆಡಿಎಸ್ ಸದಸ್ಯರು ಕಿರುಕುಳ ಕೊಡುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಅಧ್ಯಕ್ಷರು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಜೆಡಿಎಸ್ ಸದಸ್ಯರು ಹಾಗೂ ಶಾಸ ಕರೂ ದನಿಗೂಡಿಸಿದರು. ಆದರೆ ಕಾಂಗ್ರೆಸ್‌ನ ಕೆಲ ಸದಸ್ಯರು ಆಕ್ಷೇಪ ಎತ್ತಿದ್ದರಿಂದ ಸಭೆ ಯಲ್ಲಿ ಗದ್ದಲ ಆರಂಭವಾಯಿತು.
ವಿಶೇಷ ಅನುದಾನದ ಬಗ್ಗೆ ಚರ್ಚೆ: ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ,15ನೇ ಹಣಕಾಸು ಆಯೋಗ ಅನುದಾನ 6.20 ಕೋಟಿ ರೂ. ಬಿಡುಗಡೆಯಾಗಿದ್ದನ್ನು ಮೇ 23 ರಂದು ನಡೆದ ವಿಶೇಷ ಸಭೆಯ ಕಾರ್ಯ ಸೂಚಿಯಲ್ಲಿ ಸೇರಿಸಿರಲಿಲ್ಲ. ಕೊರೊನಾ ನಿಯಂ ತ್ರಣಕ್ಕೆ ಕರೆದಿದ್ದ ವಿಶೇಷ ಸಭೆಗೆ ಜೆಡಿಎಸ್ ಸದಸ್ಯರು ಗೈರಾಗಿದ್ದಕ್ಕೆ ಸಭೆಗೆ ಬಾರದೇ ಅಭಿವೃದ್ಧಿಗೆ ಅಡಚಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅನುದಾನ ಯಾವಾಗ ಬಂತು ಎಂದು ಸಿಇಒ ಮಾಹಿತಿ ನೀಡಬೇಕು ಎಂದು ಪಟ್ಟು ಹಿಡಿದರು.
ಈ ಮಧ್ಯೆ ಪ್ರತಿಕ್ರಿಯಿಸಲು ಮುಂದಾದ ಅಧ್ಯಕ್ಷರಿಗೆ ನಿನ್ನನ್ನು ಕೇಳಲಿಲ್ಲ, ಸಿಇಒ ಮಾಹಿತಿ ನೀಡಲಿ ಎಂದು ರೇವಣ್ಣ ಅವರು ರೇಗಾಡಿ ದರು. ಆನಂತರ ಸಿಇಒ ಪರಮೇಶ್ ಮಾಹಿತಿ ನೀಡಿ, ಮೇ 13ರಂದು 6.20 ಕೋಟಿ ರೂ.15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಯಿತು. ಮೇ 15ರಂದು ಅಧ್ಯಕ್ಷರ ಗಮನಕ್ಕೆ ತಂದೆ. ಆದರೆ ಸರ್ಕಾರ ಮಾರ್ಗ ಸೂಚಿ ನೀಡದಿದ್ದರಿಂದ ವಿಶೇಷ ಸಭೆಯ ಕಾರ್ಯಸೂಚಿಯಲ್ಲಿ ಅನುದಾನದ ವಿಷಯ ವನ್ನು ಸೇರಿಸಲಿಲ್ಲ ಎಂದು ಸ್ಪಷ್ಟಪಡಿಸಿದರು.
ಸುಳ್ಳು ಆರೋಪಕ್ಕೆ ಖಂಡನೆ: ಸಭೆಯ ಕಾರ್ಯಸೂಚಿಯಲ್ಲಿ 6.20 ಕೋಟಿ ರೂ. ಅನುದಾನದ ವಿಷಯ ಪ್ರಸ್ತಾಪವಾಗದಿದ್ದರೂ ಸಭೆಗೆ ಜೆಡಿಎಸ್ ಸದಸ್ಯರು ಬಾರದೇ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಅನುದಾನ ವಾಪಸ್ ಹೋಗುತ್ತಿದೆ ಎಂದು ಜತೆಗೆ 112 ಕೋಟಿ ರೂ. ಅನುದಾನ ಜಿಪಂಗೆ ಬಾರದಿದ್ದರೂ ಅನುದಾನ ಬಂದಿದೆ. ಅದೂ ವಾಪಸ್ ಹೋಗುತ್ತಿದೆ ಎಂದು ಅಧ್ಯಕ್ಷರು ಸುಳ್ಳು ಆರೋಪ ಮಾಡಿದ್ದಾರೆ. ಅವರು ಕ್ಷಮೆ ಕೇಳದಿದ್ದರೆ ಖಂಡನಾ ನಿರ್ಣಯ ಮಂಡಿಸಿ ಅಂಗೀಕರಿಸು ತ್ತೇವೆ ಎಂದು ರೇವಣ್ಣ ಗುಡುಗಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ ಹಾಗೂ ಕಾಂಗ್ರೆಸ್ ಸದಸ್ಯ ಪಟೇಲ್ ಶಿವಪ್ಪ ಅವರು ಅಧ್ಯಕ್ಷರು ಕ್ಷಮೆ ಕೇಳಿ ಜಿಪಂ ಆಡಳಿತ ಸುಸೂತ್ರವಾಗಿ ನಡೆಯಲು ಸಹಕರಿಸಬೇಕು ಎಂದರು. ಜೆಡಿಎಸ್ ಶಾಸಕರು, ಸದಸ್ಯರ ಪಟ್ಟಿಗೆ ಮಣಿದ ಅಧ್ಯಕ್ಷೆ ಬಿ.ಎಸ್.ಶ್ವೇತಾ ಅವರು, ಜಿಪಂಗೆ 112 ಕೋಟಿ ರೂ.ಅನುದಾನ ಬಂದಿದೆ ಎಂದು ನಾನು ಮಾಧ್ಯಮಗಳಿಗೆ ಹೇಳಿರಲಿಲ್ಲ. 6.20 ಕೋಟಿ ರೂ. 15ನೇ ಹಣಕಾಸು ಆಯೋಗದ ಅನುದಾನದ ಬಗ್ಗೆ ಮಾತ್ರ ಪ್ರಸ್ತಾಪಿಸಿದ್ದೆ. ನಾನು ಪರಿಶಿಷ್ಟ ಪಂಗಡದ ಮಹಿಳೆಯಾದ್ದರಿಂದ ಆಡಳಿತ ನಡೆಸಲು ಜೆಡಿಎಸ್ ಅವಕಾಶ ನೀಡುತ್ತಿಲ್ಲ ಎಂದು ಹೇಳಿದ್ದಕ್ಕೆ ನಾನು ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು. ಆನಂತರ ಜೆಡಿಎಸ್ ಸದಸ್ಯರು ಸಮಾಧಾನಗೊಂಡರು.