Advertisement

ಜೆಡಿಎಸ್‌ ಮೊದಲ ಪಟ್ಟಿ ಪರಿಷ್ಕರಣೆ: ಸಿ.ಎಂ. ಇಬ್ರಾಹಿಂ

12:43 AM Feb 06, 2023 | Team Udayavani |

ಹುಬ್ಬಳ್ಳಿ: ಈಗಾಗಲೇ ಜೆಡಿಎಸ್‌ ಬಿಡುಗಡೆ ಮಾಡಿರುವ ಮೊದಲ ಪಟ್ಟಿಯಲ್ಲಿ ಒಂದಿಷ್ಟು ಬದಲಾವಣೆಯಾಗುವ ಸಾಧ್ಯತೆಗಳಿದ್ದು, ಶೀಘ್ರದಲ್ಲೇ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರಿಗೆ ಟಿಕೆಟ್‌ ನೀಡಬೇಕು, ಯಾರಿಗೆ ನೀಡಬಾರದು ಎಂಬುದನ್ನು ಪಕ್ಷ ನಿರ್ಧರಿಸಲಿದೆ. ಭವಾನಿ ರೇವಣ್ಣ ಅವರಿಗೆ ಟಿಕೆಟ್‌ ಬಗ್ಗೆ ಇತರ ನಾಯಕರು ತಲೆಕೆಡಿಸಿಕೊಳ್ಳುವುದು ಬೇಡ. ಎ. ಮಂಜು ಪಕ್ಷಕ್ಕೆ ಆಗಮಿಸಿದ್ದು, ಪ್ರಸಕ್ತ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ.

ಹುಮನಾಬಾದ್‌ನಲ್ಲಿ ನನ್ನ ಮಗ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ನೇರ ಪೈಪೋಟಿಯಿದ್ದು, ಮಗನ ಗೆಲುವು ನಿಶ್ಚಿತ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಸಹೋದರ ಬ್ಯಾಂಕ್‌ನಲ್ಲಿ ಮಾಡಿದ ಅವ್ಯವಹಾರ ಕುರಿತು ಯಾಕೆ ಸುಮ್ಮನಿದ್ದಾರೆ.

ನಮ್ಮ ಪಕ್ಷದ ತಂಟೆಗೆ ಬಂದರೆ ಅವರ ಕುಟುಂಬದ ಬಗ್ಗೆ ನಾವು ಮಾತನಾಡಬೇಕಾಗುತ್ತದೆ. ಪ್ರಹ್ಲಾದ ಜೋಷಿ, ಜಗದೀಶ ಶೆಟ್ಟರ ಎಷ್ಟು ಆಸ್ತಿ ಮಾಡಿದ್ದಾರೆ ಎಂಬುದು ಗೊತ್ತಿದೆ. ನಮ್ಮ ಸರಕಾರ ಬರಲಿ, ಇವರದ್ದು ಎಲ್ಲ ಹೊರಗಡೆ ಬರುತ್ತದೆ. 13 ಜನರನ್ನು ಮಂಚದ ಮೇಲೆ ಮಲಗಿಸಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಇಂದಿನ ಪರಿಸ್ಥಿತಿ ನೋಡಿದರೆ ಬಿಜೆಪಿಗರು ಪರಸತಿ, ಪರಧನದ ಹೆಸರಲ್ಲಿ ಮಹಾಸಂಗಮದಂತಹ ಕಾರ್ಯಕ್ರಮಗಳನ್ನು ಮಾಡುವುದು ಉತ್ತಮ ಎಂದು ಹೇಳಿದರು.

ಜಮೀರ್‌ ವಿರುದ್ಧ ಕಿಡಿ
ಬೆಂಗಳೂರು: ಮಾಜಿ ಸಚಿವ ಜಮೀರ್‌ ಅಹಮದ್‌ ವಿರುದ್ಧ ಕಿಡಿ ಕಾರಿರುವ ಜೆಡಿಎಸ್‌, ಸದಾ ಕಂಡವರ ಎಂಜಲು ಚಪ್ಪರಿಸುವ ನಿಮಗೆ ಮುಸ್ಲಿಂ ಸಮುದಾಯದ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದೆ.
ಈ ಕುರಿತು ಟ್ವೀಟ್‌ ಮಾಡಿರುವ ಜೆಡಿಎಸ್‌, ರಾಜಕಾರಣಕ್ಕಾಗಿ ನೀವು ಆ ಸಮುದಾಯವನ್ನು ಹೇಗೆ ನಡೆಸಿಕೊಂಡಿದ್ದೀರಿ. ದೇವೇಗೌಡರ ಕುಟುಂಬ ಹೇಗೆ ನಡೆಸಿಕೊಳ್ಳುತ್ತಿದೆ ಎನ್ನುವುದು ದೇಶಕ್ಕೇ ಗೊತ್ತಿದೆ. ಭೂತದ ಬಾಯಲ್ಲಿ ಭಗವದ್ಗೀತೆ ಚೆನ್ನಾಗಿರದು ಎಂದು ಟಾಂಗ್‌ ನೀಡಿದೆ.

Advertisement

ಅರಮನೆಯಂಥ ವಿಲಾಸಿ ಭವನದಲ್ಲಿ ಐಷಾರಾಮಿ ಜೀವನ ನಡೆಸುವ ನಿಮಗೆ, ನಿಮ್ಮದೇ ಕ್ಷೇತ್ರದ ಗೌರಿಪಾಳ್ಯ, ಪಾದರಾಯನಪುರದ ಬಡ ಮುಸ್ಲಿಂ ಬಂಧುಗಳು ಎಂಥ ಕಷ್ಟದ ಸ್ಥಿತಿಯಲ್ಲಿ ಇದ್ದಾರೆ ಎನ್ನುವುದು ಗೊತ್ತಾ? ಕಾಮಾಲೆ ಕಣ್ಣಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ಮೊಸಳೆ ಕಣ್ಣೀರು ಹಾಕುವ ನಿಮಗೆ ಮುಸ್ಲಿಮರ ನೈಜಸ್ಥಿತಿಯ ಬಗ್ಗೆ ಅರಿವಿದೆಯಾ ಎಂದು ಕೇಳಿದೆ.

ಹರಕಲು ನಾಲಗೆಯ ಜಮೀರ್‌, ನಿಮಗೆ ರಾಜಕೀಯ ಜನ್ಮಕೊಟ್ಟಿದ್ದು ಇದೇ ಕುಮಾರಣ್ಣ. ವಿಧಾನಸಭೆಯ ಮಾರ್ಷಲ್‌ಗ‌ಳು ಕುತ್ತಿಗೆಪಟ್ಟಿ ಹಿಡಿದು ಹೊರದಬ್ಬಿದಾಗ ಇದೇ ಕುಮಾರಣ್ಣ ನಿಮ್ಮ ಮಾನ ಕಾಪಾಡಿದ್ದು. ಅಂದು ಶಪಥಗೈದ ಕುಮಾರಣ್ಣ ನಿಮ್ಮನ್ನು ಶಾಸಕರನ್ನಾಗಿ ಮಾಡಿದ್ದು ನೆನಪಿಲ್ಲವೇ ಎಂದು ಪ್ರಶ್ನಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next