ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಚುನಾವಣೆ ಅ.27ರಂದು ನಡೆಯಲಿದ್ದು, ಅಧ್ಯಕ್ಷ ಸ್ಥಾನಕ್ಕಾಗಿ ಮೈತ್ರಿ ಪಕ್ಷಗಳಾದ ಕಾಂಗ್ರೆಸ್ -ಜೆಡಿಎಸ್‌ನಲ್ಲಿ ಲಾಬಿ ಆರಂಭವಾಗಿದೆ. ಜತೆಗೆ ಈ ಬಾರಿ ಪ್ರಮುಖ ಸ್ಥಾಯಿ ಸಮಿತಿಗಳು ಜೆಡಿಎಸ್‌ಗೆ ದೊರೆಯುವ ಸಾಧ್ಯತೆಯಿದೆ.
ಪಾಲಿಕೆಯಲ್ಲಿ 3ನೇ ಅವಧಿಗೂ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಮುಂದುವರಿದಿದ್ದು, ಮೈತ್ರಿ ವೇಳೆ ಜೆಡಿಎಸ್ ವರಿಷ್ಠರು ಉಪಮೇಯರ್ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸೇರಿ ಒಟ್ಟು 4 ಸ್ಥಾಯಿ ಸಮಿತಿಗಳಿಗೆ ಬೇಡಿಕೆಯಿಟ್ಟಿತ್ತು. ಆ ಹಿನ್ನೆಲೆಯಲ್ಲಿ ಈ ಬಾರಿ ಪ್ರಮುಖ ಸ್ಥಾಯಿ ಸಮಿತಿಗಳು ಜೆಡಿಎಸ್‌ಗೆ ದೊರೆಯಲಿವೆ.
ಜತೆಗೆ 6 ಸ್ಥಾಯಿ ಸಮಿತಿಗಳು ಕಾಂಗ್ರೆಸ್ ಹಾಗೂ 2 ಪಕ್ಷೇತರರಿಗೆ ದೊರೆಯಲಿವೆ. ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್, ಕಾಂಗ್ರೆಸ ಹಾಗೂ ಪಕ್ಷೇತರರಲ್ಲಿ ಪೈಪೋಟಿ ಆರಂಭವಾಗಿದ್ದು, ಯಾರಿಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ದೊರೆಯಲಿದೆ ಎಂಬುದು ಈವರೆಗೆ ನಿಗದಿಯಾಗಿಲ್ಲ. ಗುರುವಾರ ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಕಾಂಗ್ರೆಸ್ ಸಭೆ ನಡೆಯುತ್ತಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ .ಡಿ.ಕುಮಾರಸ್ವಾಮಿ ಅವರು ಸಭೆ ಸ್ಥಾಯಿ ಸಮಿತಿ ಚುನಾವಣೆಯ ಕುರಿತು ಸಭೆ ನಡೆಯಲಿದ್ದು, ಸಭೆಯಲ್ಲಿ ಅಧ್ಯಕ್ಷ ಸ್ಥಾನ ಯಾರಿಗೆ ದೊರೆಯಲಿದೆ ಎಂಬುದು ನಿರ್ಧಾರವಾಗಲಿದೆ.
ಬೆಳಗ್ಗೆ ನಾಮಪತ್ರ ಸಲ್ಲಿಕೆ: ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆಗೆ ಸಂಬಂಧಿಸಿದಂತೆ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದ್ದು, ಶುಕ್ರವಾರ ಬೆಳಗ್ಗೆ 9.30ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಚುನಾವಣಾ ಸಭೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರ ನೇತೃತ್ವದಲ್ಲಿ ನಡೆಯಲಿದೆ.