ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಜೆಡಿಎಸ್ ಕೋಟಾದಲ್ಲಿರುವ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಗಳಿಗೆ ಸಂಬಂಧಿಸಿದಂತೆ ಮಾಜಿ ಶಾಸಕರು ಅವಕಾಶ ಕೋರಿ ಪಕ್ಷದ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹಾಲಿ 10 ಮಂದಿ ಶಾಸಕರಿಗೆ ಮೊದಲ ಕಂತಿನಲ್ಲಿ ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಲು ಪಕ್ಷದ ವರಿಷ್ಠರು ತೀರ್ಮಾನಿಸಿ ಪಟ್ಟಿ ಸಿದ್ಧ ಪಡಿಸಿಕೊಂಡಿದ್ದರಾದರೂ, ಮಾಜಿ ಶಾಸಕರು ಹಾಗೂ ಕಳೆದ ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳು ತಮ್ಮನ್ನು ಪರಿಗಣಿಸುವಂತೆ ಪಟ್ಟು ಹಿಡಿದಿದ್ದಾರೆ.
ಈ ಮಧ್ಯೆ, ಶಾಸಕರಾದ ಶಿವಲಿಂಗೇಗೌಡ, ಮಾಗಡಿ ಮಂಜು, ನಿಸರ್ಗ ನಾರಾಯಣಸ್ವಾಮಿ, ಸುರೇಶ್‌ಗೌಡ, ಮಹದೇವು, ಗೌರಿ ಶಂಕರ್, ಅಶ್ವಿನ್‌ಕುಮಾರ್. ವಿಧಾನಪರಿಷತ್ ಸದಸ್ಯರಾದ ಬೆಮೆಲ್ ಕಾಂತರಾಜ್, ತೂಪಲ್ಲಿ ಚೌಡರೆಡ್ಡಿ, ಅಪ್ಪಾಜಿಗೌಡ ಅವರನ್ನು ನೇಮಕ ಮಾಡಲು ಪಟ್ಟಿ ಸಿದಟಛಿಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಆದರೆ, ಈ ಪಟ್ಟಿಗೆ ಇನ್ನೂ ಸಿಎಂ ಸಹಿ ಬಿದ್ದಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಶಾಸಕರು ಸಕ್ರಿಯವಾಗಿ ಕೆಲಸ ಮಾಡಲು ನಿಗಮ-ಮಂಡಳಿಗಳ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವುದು ಉತ್ತಮ ಎಂದು ಎಚ್.ಡಿ. ದೇವೇಗೌಡ ಹಾಗೂ ಎಚ್.ವಿಶ್ವನಾಥ್ ಅಭಿಪ್ರಾಯಪಟ್ಟಿದ್ದು, ಇದನ್ನು ಸಿಎಂ ಕುಮಾರಸ್ವಾಮಿ ಅವರಿಗೂ ತಿಳಿಸಿದ್ದಾರೆ. ಹಾಗಾಗಿ, ಈ ವಾರದಲ್ಲಿ ಮೊದಲ ಕಂತಿನ ಪಟ್ಟಿಗೆ ಸಿಎಂ ಸಹಿ ಬೀಳುವ ಸಾಧ್ಯತೆಯಿದೆ. ಮಾಜಿ ಶಾಸಕರಾದ ವೆಂಕಟ ಶಿವಾರೆಡ್ಡಿ, ಮಂಜುನಾಥಗೌಡ ಸೇರಿ ಹಲವರು ನಿಗಮ-ಮಂಡಳಿಗಳಿಗೆ ಆಕಾಂಕ್ಷಿಗಳಾಗಿದ್ದಾರೆ.
ಈ ನಡುವೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿ ತಿಪ್ಪೇಸ್ವಾಮಿ ಅವರನ್ನು ನೇಮಿಸಲು ತೀರ್ಮಾನಿಸಲಾಗಿತ್ತು. ಆದರೆ, ಇದೀಗ ಮಾಜಿ ಶಾಸಕರಾದ ಕೋನರೆಡ್ಡಿ, ಸುರೇಶ್‌ಬಾಬು ಸಹ ರಾಜಕೀಯ ಕಾರ್ಯದರ್ಶಿ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.