Advertisement
ಜೆಡಿಎಸ್ ಅಧಿಕಾರದಲ್ಲಿರುವುದರಿಂದ ಮೈತ್ರಿ ಪಕ್ಷದ ಭಾಗವಾಗಿ ಮೂರನೇ ಎರಡರಷ್ಟು ಲೋಕಸಭಾ ಸ್ಥಾನಗಳನ್ನು ಬಿಟ್ಟುಕೊಡುವಂತೆ ಜೆಡಿಎಸ್ ಪಟ್ಟು ಹಿಡಿದಿದ್ದು, ಅದರಂತೆ ಕನಿಷ್ಠ ಹತ್ತು ಸೀಟುಗಳನ್ನಾದರೂ ಬಿಟ್ಟು ಕೊಡಬೇಕು ಎಂಬ ಬೇಡಿಕೆ ಇಟ್ಟಿದೆ. ಆದರೆ, ವಾಸ್ತವದಲ್ಲಿ ಜೆಡಿಎಸ್ ಶಕ್ತಿ ಇರುವುದು ಕೇವಲ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಮಾತ್ರ ಎನ್ನುವುದು ಕಾಂಗ್ರೆಸ್ ವಾದ. ಅದಕ್ಕೆ ಪುಷ್ಟಿ ನೀಡುವಂತೆ ಕಾಂಗ್ರೆಸ್ 2018ರಲ್ಲಿ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶದ ಆಧಾರದಲ್ಲಿ ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಶಕ್ತಿ ಎಷ್ಟಿದೆ ಎಂಬ ಮಾಹಿತಿ ಸಂಗ್ರಹಿಸಿದೆ. ಅದರಂತೆ ಹಾಸನ, ಮಂಡ್ಯ, ತುಮಕೂರು, ಕೋಲಾರ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಜೆಡಿಎಸ್ ಕಾಂಗ್ರೆಸ್‌ಗಿಂತ ಹೆಚ್ಚು ಮತಗಳನ್ನು ಪಡೆದಿದೆ.
Related Articles
Advertisement
ಕೋಲಾರದಲ್ಲಿ ಜೆಡಿಎಸ್ ಕಡಿಮೆ ಶಾಸಕರನ್ನು ಹೊಂದಿದ್ದರೂ, ಕಾಂಗ್ರೆಸ್‌ಗಿಂತ ಹೆಚ್ಚು ಮತ ಪಡೆದಿದೆ. ಕೋಲಾರದಲ್ಲಿ 5.03 ಲಕ್ಷ (38%) ಮತ ಜೆಡಿಎಸ್ ಪಾಲಾಗಿದ್ದರೆ, ಕಾಂಗ್ರೆಸ್ 4.28 ಲಕ್ಷ (32 %) ರಷ್ಟು ಮತವನ್ನಷ್ಟೇ ಪಡೆಯಲು ಯಶಸ್ವಿಯಾಗಿದೆ. ಇನ್ನು ಜೆಡಿಎಸ್ ಭದ್ರಕೋಟೆ ಹಾಸನದಲ್ಲಿ ಜೆಡಿಎಸ್ 6.16 ಲಕ್ಷ (46% ) ಮತ, ಕಾಂಗ್ರೆಸ್ 4.02 ಲಕ್ಷ (30.11%) ರಷ್ಟು ಮತಗಳಿಸಿದೆ. ಹಾಸನದಲ್ಲಿ ಬಿಜೆಪಿ ಕೂಡ 2.86 ಲಕ್ಷ (21%)ಮತಗಳಿಸಿ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆ ಮೂಡಿಸಿದೆ.
ಈ ನಾಲ್ಕು ಕ್ಷೇತ್ರಗಳ ಹೊರತಾಗಿ ಜೆಡಿಎಸ್ ಬೇಡಿಕೆ ಇಟ್ಟಿರುವ ಚಿಕ್ಕಬಳ್ಳಾಪುರ, ಮೈಸೂರು, ಬೆಂಗಳೂರು ಉತ್ತರ, ಚಿತ್ರದುರ್ಗ, ಶಿವಮೊಗ್ಗ, ವಿಜಯಪುರ, ಬೀದರ್ ಕ್ಷೇತ್ರಗಳಲ್ಲಿ ಜೆಡಿಎಸ್ ಶಕ್ತಿ ಹೇಳಿಕೊಳ್ಳುವಷ್ಟಿಲ್ಲ.
ಮೈಸೂರು, ಚಿಕ್ಕಬಳ್ಳಾಪುರ, ವಿಜಯಪುರ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗಿಂತ ಜೆಡಿಎಸ್ ಶೇ. 10ರಿಂದ ಶೇ. 35ರಷ್ಟು ಕಡಿಮೆ ಮತ ಪಡೆದಿದೆ.
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಹಾವೇರಿ, ಧಾರವಾಡ. ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಮತಗಳಿಕೆ ಶೇ. 10ಕ್ಕಿಂತ ಕಡಿಮೆ ಇದ್ದು, ಕೆಲವು ಕ್ಷೇತ್ರಗಳಲ್ಲಿ ಶೇ. 1 ರಷ್ಟು ಇರುವುದರಿಂದ ಮೈತ್ರಿಯಾದರೂ ಜೆಡಿಎಸ್‌ನಿಂದ ಹೆಚ್ಚಿನ ಪ್ರಯೋಜನವಾಗುವುದಿಲ್ಲ ಎನ್ನುವುದು ಕಾಂಗ್ರೆಸ್‌ನ ನಾಯಕರ ವಾದವಾಗಿದೆ.
ಅದೇ ಕಾರಣಕ್ಕೆ ಜೆಡಿಎಸ್ ಶಕ್ತಿ ಹೆಚ್ಚಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಕೂಡ ಪ್ರಬಲವಾಗಿರುವುದರಿಂದ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದರೆ ಜೆಡಿಎಸ್‌ಗೆ ಅನುಕೂಲವಾಗುತ್ತದೆ.
ಹೀಗಾಗಿ ಅವರು ಸ್ಪರ್ಧೆ ಮಾಡಿದ ಕ್ಷೇತ್ರಗಳಲ್ಲೆಲ್ಲಾ ಜೆಡಿಎಸ್ ಗೆಲ್ಲಲು ಅವಕಾಶಗಳು ಹೆಚ್ಚಿವೆ. ಆದರೆ, ಜೆಡಿಎಸ್ ಸ್ಫರ್ಧೆಗೆ ಅವಕಾಶ ಕೇಳದಿರುವ ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳು ಜಂಟಿಯಾಗಿ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಸಿದರೂ, ಆ ಕ್ಷೇತ್ರಗಳಲ್ಲಿ ಬಿಜೆಪಿ ಪ್ರಬಲವಾಗಿರುವುದರಿಂದ ಕಾಂಗ್ರೆಸ್ ಸ್ಪರ್ಧೆ ಮಾಡಿದ ಎಲ್ಲ ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಿಲ್ಲದ ಕಾರಣ ಅವರಿಗೆ ಹೆಚ್ಚಿನ ಸೀಟು ಬಿಟ್ಟುಕೊಟ್ಟರೆ ಕಾಂಗ್ರೆಸ್‌ಗೆ ನಷ್ಟವಾಗಲಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿ ಬರುತ್ತಿವೆ.
ಆದರೆ, ಜೆಡಿಎಸ್ ಕನಿಷ್ಠ 10 ಸ್ಥಾನಗಳಿಗೆ ಬೇಡಿಕೆ ಇಟ್ಟಿರುವುದರಿಂದ ಕಾಂಗ್ರೆಸ್‌ನ ‘ಶಕ್ತಿ ಸೂತ್ರ’ ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಯಾವ ಪಕ್ಷಕ್ಕೆ ಎಲ್ಲಿ ಗೆಲ್ಲುವ ಶಕ್ತಿ ಇದೆ ಎನ್ನುವುದನ್ನು ಗಮನದಲ್ಲಿರಿಸಿಕೊಂಡು ಸೀಟು ಹಂಚಿಕೆಯಾಗಬೇಕು. . ಹೆಚ್ಚು ಸೀಟು ಗೆಲ್ಲುವುದು ಮುಖ್ಯವಾಗಬೇಕು. ಅದೇ ಆಧಾರದಲ್ಲಿ ಸೀಟು ಹಂಚಿಕೆಯಾಗಬೇಕು. • ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ಶಂಕರ ಪಾಗೋಜಿ