Advertisement

Congress; ಪರಿಷತ್‌ ನಾಮನಿರ್ದೇಶನಕ್ಕೆ ಆಕಾಂಕ್ಷಿಗಳಿಂದ ಲಾಬಿ

12:46 AM Jan 04, 2025 | Team Udayavani |

ಬೆಂಗಳೂರು: ವಿಧಾನ ಪರಿಷತ್ತಿನ 4 ನಾಮನಿರ್ದೇಶನ ಸ್ಥಾನಗಳಿಗೆ ಕಾಂಗ್ರೆಸ್‌ನಲ್ಲಿ ದಿನೇ ದಿನೆ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಿದ್ದು, ಈ ಅವಕಾಶಕ್ಕಾಗಿ ಆಕಾಂಕ್ಷಿಗಳು ತಿಂಗಳಿಗೂ ಹೆಚ್ಚು ಕಾಲ ಕಾಯಬೇಕಿದೆ. ಆದರೆ ಈ ಕುರಿತಾದ ಲಾಬಿಯಂತೂ ಈಗಲೇ ಆರಂಭವಾಗಿದೆ.

Advertisement

ಯು.ಬಿ. ವೆಂಕಟೇಶ್‌, ಪ್ರಕಾಶ್‌ ರಾಥೋಡ್‌ ಅವರ ನಿವೃತ್ತಿ, ಸಿ.ಪಿ. ಯೋಗೇಶ್ವರ್‌ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನದ ಜತೆಗೆ ಜ. 27ರಂದು ಜೆಡಿಎಸ್‌ನ ತಿಪ್ಪೇಸ್ವಾಮಿ ಅವರ ನಿವೃತ್ತಿಯಿಂದ ತೆರವಾಗುತ್ತಿರುವ ಸ್ಥಾನ ಸಹಿತ ಒಟ್ಟು 4 ಸ್ಥಾನಗಳಿಗೆ ನಾಮನಿರ್ದೇಶನ ಮಾಡಲು ಸರಕಾರಕ್ಕೆ ಅವಕಾಶವಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಕಾಂಗ್ರೆಸ್‌ನಲ್ಲಿ 4 ಸ್ಥಾನಗಳ ಮೇಲೆ ಒಂದೂವರೆ ಡಜನ್‌ಗೂ ಹೆಚ್ಚು ಮಂದಿ ಕಣ್ಣಿಟ್ಟಿದ್ದಾರೆ. ಯು.ಬಿ. ವೆಂಕಟೇಶ್‌, ಪ್ರಕಾಶ್‌ ರಾಥೋಡ್‌ ಮತ್ತೂಂದು ಅವಧಿಗೆ ಪ್ರಯತ್ನ ನಡೆಸಿದ್ದಾರೆ. ಜತೆಗೆ ಮೇಲ್ಮನೆಯ ಮಾಜಿ ಸಭಾಪತಿಗಳಾದ ಡಾ| ಬಿ.ಎಲ್‌. ಶಂಕರ್‌, ವಿ.ಆರ್‌. ಸುದರ್ಶನ, ಮಾಜಿ ಸಚಿವೆ ರಾಣಿ ಸತೀಶ್‌ ಸಹಿತ ಹಲವು ಮಾಜಿ ಸಚಿವರು, ಮಾಜಿ ಶಾಸಕರ ಹೆಸರು ಚಲಾವಣೆಯಲ್ಲಿವೆ.

ಈ ನೇಮಕಾತಿ ಸಂಬಂಧ ಈಗಾಗಲೇ ಸಚಿವ ಸಂಪುಟ ಸಭೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿವೇಚನೆಗೆ ಬಿಟ್ಟಿದ್ದರೂ ಜಾತಿ, ಜಿಲ್ಲೆ, ಪ್ರಾದೇಶಿಕ ಸಮತೋಲನ ಎಲ್ಲವನ್ನು ಪರಿಗಣಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ಉಪ ಮುಖ್ಯಮಂತ್ರಿಯೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಸಂಭವನೀಯ ಪಟ್ಟಿ ಸಿದ್ಧವಾಗುವ ಸಾಧ್ಯತೆಗಳಿವೆ. ಅನಂತರ ಇಬ್ಬರೂ ದಿಲ್ಲಿಗೆ ತೆರಳಿ ಪಕ್ಷದ ಹೈಕಮಾಂಡ್‌ ಜತೆ ಸಮಾಲೋಚನೆ ನಡೆಸಿದ ಬಳಿಕವೇ ಪಟ್ಟಿ ಬಿಡುಗಡೆ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next