ಮಂಡ್ಯ: ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಾಗುವುದು ಖಾತ್ರಿಯಾಗಿದೆ. ಇದರ ಬಗ್ಗೆ ಎರಡು ಪಕ್ಷಗಳು ಸಹ ಘೋಷಣೆ ಮಾಡಿವೆ. ಆದರೆ, ಮಂಡ್ಯ ಲೋಕಸಭಾ ಕ್ಷೇತ್ರದ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಗೊಂದಲ ಮುಂದುವರಿದಿದೆ. ಜಿಲ್ಲೆಯಲ್ಲಿ ಕಮಲ ಪಾಳೇಯ ಭದ್ರ ನೆಲೆಯೂರುತ್ತಿರುವ ಸಂದರ್ಭದಲ್ಲಿ ಮತ್ತೆ ಜೆಡಿಎಸ್ ಜೊತೆ ಮೈತ್ರಿಯಾಗಿರುವುದು ನಿಷ್ಠಾವಂತ ಕಾರ್ಯಕರ್ತರಲ್ಲಿ ಆತಂಕ ಶುರುವಾಗಿದೆ.
ಹಿಂದೆ ಬಿಜೆಪಿ ಜೆಡಿಎಸ್‌ನೊಂದಿಗೆ ಒಳ ಮೈತ್ರಿ ಮಾಡಿಕೊಳ್ಳುತ್ತಿದ್ದ ಗುಟ್ಟು ಬಹಿರಂಗವಾಗಿದ್ದು, ಈ ನಡುವೆ ಈಗ ಅಧಿ ಕೃತವಾಗಿ ಮೈತ್ರಿಯಾಗಿರುವುದು ಕಾರ್ಯಕರ್ತ ರಲ್ಲಿ ಇರಿಸು ಮುರಿಸು ಉಂಟಾಗುವಂತೆ ಮಾಡಿದೆ.
ಬಿಜೆಪಿ ಮತ ಬ್ಯಾಂಕ್ ಕಳೆದುಕೊಳ್ಳುವ ಭೀತಿ: ಜೆಡಿಎಸ್‌ನೊಂದಿಗೆ ಬಹಿರಂಗವಾಗಿ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಬಿಜೆಪಿ ತನ್ನ ಮತ ಬ್ಯಾಂಕ್ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕಳೆದ 2020ರ ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಗೆಲುವು ಸಾಧಿಸುವ ಮೂಲಕ ಕಮಲ ಅರಳಿಸಿದ ಖ್ಯಾತಿ ಪಡೆದಿದ್ದರು. ಅಲ್ಲಿಂದ ಇಡೀ ಜಿಲ್ಲೆಯಲ್ಲಿ ಮತ ಬ್ಯಾಂಕ್ ಹೆಚ್ಚಲು ಕಾರಣವಾಗಿತ್ತು. ಅಲ್ಲದೆ, ವಿಧಾನಸಭೆ ಚುನಾವಣೆಯಲ್ಲೂ ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ನಿರೀಕ್ಷೆ ಮೀರಿ ಮತ ಪಡೆದಿದ್ದರು. ಅದು ಮೈತ್ರಿಯಲ್ಲಿ ಕಳೆದು ಹೋಗುವ ಭೀತಿ ಆರಂಭವಾಗಿದೆ.
ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿಗೆ ಹೆಚ್ಚು ಮತ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳಿಗೆ ಟಕ್ಕರ್ ನೀಡಿದ್ದರು. ಶ್ರೀರಂಗಪಟ್ಟಣ, ಮದ್ದೂರು, ಕೆ.ಆರ್.ಪೇಟೆ ಹಾಗೂ ಮಂಡ್ಯ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಮತ ಪಡೆದಿದ್ದರು. ಅದರಲ್ಲೂ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಅತಿ ಹೆಚ್ಚು ಮತಗಳಿಕೆಯಲ್ಲಿ ಮುಂದಿದೆ. ಅಲ್ಲದೆ, ಉಳಿದ ಕ್ಷೇತ್ರಗಳಲ್ಲಿ ಕಳೆದ ವಿಧಾನ ಸಭೆ ಚುನಾವಣೆಗೆ ಹೋಲಿಸಿದರೆ, ಗಣನೀಯ ಮತ ಏರಿಕೆಯಲ್ಲಿ ಬಿಜೆಪಿ ಸಾಧನೆ ಸಮಾಧಾನಕರವಾಗಿದೆ.
ಜೆಡಿಎಸ್‌ಗೆ ಕ್ಷೇತ್ರ ಸಿಗುವ ಸಾಧ್ಯತೆ: ಜಿಲ್ಲೆಯಲ್ಲಿ ಜೆಡಿಎಸ್ ಪ್ರಬಲ ಪಕ್ಷವಾಗಿ ಬೆಳೆದಿದೆ. ಇದೀಗ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರ ಜೆಡಿಎಸ್ ಸಿಗುವ ನಿರೀಕ್ಷೆ ಹೆಚ್ಚಿದೆ. ಮೈತ್ರಿಯಾಗಿರುವುದರಿಂದ ಬಿಜೆಪಿ ಮತಗಳು ಜೆಡಿಎಸ್ ಅಭ್ಯರ್ಥಿಗೆ ಮತ ಹಾಕುವುದು ಅನಿವಾರ್ಯವಾಗಲಿದೆ. ಆಗ ಬಿಜೆಪಿ ಮತಗಳು ಇಬ್ಭಾಗವಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹಿಂದೆ 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ನಿಖೀಲ್ ಕುಮಾರ ಸ್ವಾಮಿ ಸೋಲಿನ ಉದಾಹರಣೆ ಕಣ್ಣಮುಂದೆಯೇ ಇದೆ.
ಜೆಡಿಎಸ್‌ಗೆ ಕಂಟಕವಾಗಿದ ಕಾಂಗ್ರೆಸ್ ಮೈತ್ರಿ: 2019ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್‌ನೊಂದಿಗಿನ ಮೈತ್ರಿ ಕಂಟಕವಾಗಿ ಪರಿಣಮಿಸಿತ್ತು. ಮೇಲ್ಮಟ್ಟದ ನಾಯಕರೊಂದಿಗೆ ಮಾಡಿಕೊಂಡಿದ್ದ ಮೈತ್ರಿ ಮಂಡ್ಯ ಜಿಲ್ಲೆಯಲ್ಲಿ ವಕೌìಟ್ ಆಗಲಿಲ್ಲ. ಇಲ್ಲಿನ ಕಾಂಗ್ರೆಸ್ ಸ್ಥಳೀಯ ನಾಯಕರು ಮೈತ್ರಿ ಅಭ್ಯರ್ಥಿ ಬಿಟ್ಟು ಪಕ್ಷೇತರ ಅಭ್ಯರ್ಥಿ ಸುಮ ಲತಾ ಪರ ಕೆಲಸ ಮಾಡಿದ್ದು, ಬಹಿರಂಗವಾಗಿದೆ. ಇದೇ ಪರಿಸ್ಥಿತಿ ಮುಂದೆ ಬರುವ ಸಾಧ್ಯತೆಯೇ ಹೆಚ್ಚಿದೆ ಎನ್ನುತ್ತಾರೆ ಹೆಸರೇಳದ ಕಾರ್ಯಕರ್ತರು.
ಮೈತ್ರಿಗೆ ನಾರಾಯಣಗೌಡ, ಸುಮಲತಾ ವಿರೋಧ: ಜೆಡಿಎಸ್ ಜೊತೆ ಮೈತ್ರಿಗೂ ಮುನ್ನ ಜಿಲ್ಲೆಯಲ್ಲಿ ಸಂಸದೆ ಸುಮಲತಾ ಬಿಜೆಪಿಗೆ ಬೆಂಬಲವಾಗಿ ನಿಂತಿದ್ದರು. ಅಲ್ಲದೆ, ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಕೂಡ ಬಿಜೆಪಿ ಕಟ್ಟುವ ನಿಟ್ಟಿನಲ್ಲಿ ಹೋರಾಟ ಮಾಡಿದ್ದರು. ಆದರೆ, ಇದೀಗ ಮೈತ್ರಿಯಾಗಿರುವುದರಿಂದ ಇದಕ್ಕೆ ಇಬ್ಬರೂ ವಿರೋಧ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಇಬ್ಬರೂ ಭೇಟಿಯಾಗಿ ಮುಂದಿನ ರಾಜಕೀಯದ ಬಗ್ಗೆ ಚರ್ಚೆ ನಡೆಸಿದ್ದಾರೆ. ಅದರಲ್ಲೂ ಸುಮಲತಾ ಹಾಗೂ ದಳಪತಿಗಳ ನಡುವಿನ ರಾಜಕೀಯ ವೈರತ್ವ ಬೂದಿ ಮುಚ್ಚಿದ ಕೆಂಡದಂತಿದೆ. ಆದ್ದರಿಂದಲೇ ಸುಮಲತಾ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೂಂದೆಡೆ ಕೆ.ಸಿ.ನಾರಾಯಣಗೌಡ ಕೂಡ ಜೆಡಿಎಸ್ ಮೈತ್ರಿ ಬಗ್ಗೆ ಅಪಸ್ವರ ಎತ್ತಿದ್ದಾರೆ. ಮೈತ್ರಿ ಅಭ್ಯರ್ಥಿಯಾಗಿ ಸುಮಲತಾ ಅವರನ್ನೇ ಕಣಕ್ಕಿಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನಿಸಲಾಗುವುದು ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಇದು ಜಿಲ್ಲೆಯಲ್ಲಿ ಮುಂದಿನ ಮೈತ್ರಿ ರಾಜಕಾರಣಕ್ಕೆ ಪೆಟ್ಟು ಬೀಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
–ಎಚ್.ಶಿವರಾಜು