ವಿಧಾನಪರಿಷತ್ತು: ಸದನದಲ್ಲಿ ರೈತರು, ಮಕ್ಕಳು, ಮಹಿಳೆಯರ ಬಗ್ಗೆ ಚರ್ಚೆ ನಡೆಯುವಾಗ ಘನತೆ ಗಾಂಭೀರ್ಯದೊಂದಿಗೆ ನಡೆದುಕೊಳ್ಳಬೇಕು.
ವೈಯುಕ್ತಿಕ ವಿಚಾರಗಳ ಬಗ್ಗೆ ಇಲ್ಲಿ ಮಾತನಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯೆ ಜಯಮಾಲ ಅವರು ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ “ನೀತಿಪಾಠ’ ಹೇಳಿದ ಪ್ರಸಂಗ ಬುಧವಾರ ಮೇಲ್ಮನೆಯಲ್ಲಿ
ನಡೆಯಿತು.
ಬರದ ಮೇಲಿನ ಚರ್ಚೆಯಲ್ಲಿ ಬಿಜೆಪಿಯ ತಾರಾ ಅನೂರಾಧ ಮಾತನಾಡುತ್ತಿದ್ದ ವೇಳೆ ಮಾತು ಮುಕ್ತಾಯಗೊಳಿಸುವಂತೆ ಉಪಸಭಾಪತಿ ಮರಿತಿಬ್ಬೇಗೌಡ ಹೇಳಿದರು. ಇದಕ್ಕೆ ಈ ಸದನಲ್ಲಿ ನಾವು ಮಹಿಳೆಯರು ಇರೋದೇ ಕಡಿಮೆ, ಹಾಗಾಗಿ ನಮಗೆ ಮಾತನಾಡಲು ಹೆಚ್ಚಿನ ಅವಕಾಶ ಸಿಗಬೇಕು ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಕೆ.ಎಸ್. ಈಶ್ವರಪ್ಪ, ನಮ್ಮ ಮನೆಗಳಲ್ಲಿ ನಮ್ಮ-ನಮ್ಮ ಹೆಂಡತಿಯರದ್ದೇ ನಡೆಯುತ್ತದೆ. ಹಾಗೇನೆ ಈ ಮನೆಯಲ್ಲೂ (ವಿಧಾಪರಿಷತ್) ತಾರಾ, ಮೋಟಮ್ಮ ಅವರದ್ದೇ ನಡೆಯತ್ತದೆ ಅದಕ್ಕಾಗಿ ಅವಕಾಶ ಕೊಡಿ ಎಂದರಲ್ಲದೇ, ಅಸಭ್ಯ ಪದವೊಂದನ್ನು ಬಳಸಿದರು. ಈಶ್ವರಪ್ಪ ಬಳಸಿದ ಪದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜಯಮಾಲ, ಸದನಲ್ಲಿ ರೈತರು, ಮಕ್ಕಳು ಹಾಗೂ ಮಹಿಳೆಯರ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಘನತೆ-ಗಾಂಭೀರ್ಯದೊಂದಿಗೆ ಮಾತನಾಡಬೇಕು.
ವೈಯುಕ್ತಿಕ ವಿಚಾರಗಳನ್ನು ಇಲ್ಲಿ ಪ್ರಸ್ತಾಪಿಸುವುದು ಸರಿಯಲ್ಲ ಎಂದು ಹೇಳುತ್ತ ತಮ್ಮ ಅಸಮಾಧಾನ ಹೊರಹಾಕಿದರು.