ನವದೆಹಲಿ: ಚಂದ್ರಯಾನ 3ರ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಆ.26) ನಾಮಕರಣ ಮಾಡಿದ ಬೆನ್ನಲ್ಲೇ ಭಾರತೀಯ ಜನತಾ ಪಕ್ಷ “ಕಾಂಗ್ರೆಸ್ ನ ಕುಟುಂಬ ಮೊದಲು” ಎಂಬ ಧೋರಣೆ ಬಗ್ಗೆ ವಾಗ್ದಾಳಿ ನಡೆಸಿದೆ.
ಇದನ್ನೂ ಓದಿ:Wild Animal: ಹೃದಯ ಭಾಗಕ್ಕೆ ತಿವಿದ ಕಾಡುಕೋಣ… ವೃದ್ಧನ ಸ್ಥಿತಿ ಗಂಭೀರ
ಚಂದ್ರಯಾನ-2 ಇಳಿದ ಸ್ಥಳವನ್ನು ತಿರಂಗಾ ಎಂದು, ಚಂದ್ರಯಾನ-3ರ ಲ್ಯಾಂಡರ್ ಇಳಿದ ಸ್ಥಳವನ್ನು ಶಿವಶಕ್ತಿ ಎಂದು ಪ್ರಧಾನಿ ಮೋದಿ ನಾಮಕರಣ ಮಾಡಿದ್ದಾರೆ. ಚಂದ್ರಯಾನ -3ರ ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಯಶಸ್ವಿಯಾಗಿ ಇಳಿದ ಆಗಸ್ಟ್ 23 ಅನ್ನು ನ್ಯಾಷನಲ್ ಬಾಹ್ಯಾಕಾಶ ದಿನವನ್ನಾಗಿ ಆಚರಿಸುವುದಾಗಿ ಪ್ರಧಾನಿ ಘೋಷಿಸಿದ್ದರು.
ಬಿಜೆಪಿ ವಕ್ತಾರ ಶೆಷಝಾದ್ ಪೂನಾವಾಲಾ ಟ್ವೀಟ್ ನಲ್ಲಿ, ಭಾರತ ಮೊದಲು v/s ಕುಟುಂಬ ಮೊದಲು ಇದರ ಪರಿಣಾಮ ಏನೆಂದರೆ ಚಂದ್ರಯಾನ 1 ಇಳಿದ ಸ್ಥಳವನ್ನು ಜವಾಹರ್ ಪಾಯಿಂಟ್ ಎಂದು ನಾಮಕರಣ ಮಾಡಲಾಗಿತ್ತು. ಚಂದ್ರಯಾನ 2 ಇಳಿದ ಸ್ಥಳ ತಿರಂಗಾ ಪಾಯಿಂಟ್, ಚಂದ್ರಯಾನ-3 ಇಳಿದ ಸ್ಥಳ ಶಿವಶಕ್ತಿ ಪಾಯಿಂಟ್ ಎಂದು ನಾಮಕರಣ ಮಾಡಲಾಗಿದೆ. ವಿಕ್ರಮ್ ಲ್ಯಾಂಡರ್ ಅನ್ನು ವಿಕ್ರಮ್ ಸಾರಾಬಾಯಿ ಎಂದು ಕರೆಯಲಾಗಿದೆ. ಯುಪಿಎ ಅಧಿಕಾರದಲ್ಲಿ ಇದ್ದಿದ್ದರೆ ಚಂದ್ರಯಾನ-2 ಮತ್ತು ಚಂದ್ರಯಾನ 3 ಯಾವತ್ತೂ ನೆರವೇರುತ್ತಿರಲಿಲ್ಲ. ಒಂದು ವೇಳೆ ಅವರು ಕಳುಹಿಸಿದ್ದರೂ ಕೂಡಾ ಅದಕ್ಕೆ ಇಂದಿರಾ ಪಾಯಿಂಟ್ ಮತ್ತು ರಾಜೀವ್ ಪಾಯಿಂಟ್ ಎಂದು ಹೆಸರಿಡುತ್ತಿತ್ತು ಎಂದು ಉಲ್ಲೇಖಿಸಿದ್ದಾರೆ.
ಬಿಜೆಪಿ ಮುಖಂಡ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, 2008ರಲ್ಲಿ ಚಂದ್ರಯಾನ 1 ಇಳಿದ ಸ್ಥಳವನ್ನು ಜವಾಹರ್ ಪಾಯಿಂಟ್ ಎಂದು ನಾಮಕರಣ ಮಾಡಲಾಗಿದೆ. ಚಂದ್ರಯಾನ 3 ಇಳಿದ ಸ್ಥಳವನ್ನು ಶಿವಶಕ್ತಿ ಪಾಯಿಂಟ್ ಎಂದು ಇಡಲಾಗಿದೆ. ಇದು ವಂಶರಾಜಕಾರಣ ಮತ್ತು ರಾಷ್ಟ್ರೀಯವಾದಿಗಳ ನಡುವಿನ ವ್ಯತ್ಯಾಸವಾಗಿದೆ ಎಂದು ತಿಳಿಸಿದ್ದಾರೆ.
ಕಳೆದ 9 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಾಹ್ಯಾಕಾಶ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿರುವುದಾಗಿ ಬಿಜೆಪಿ ತಿಳಿಸಿದೆ. ಏತನ್ಮಧ್ಯೆ ಕಾಂಗ್ರೆಸ್ ಕೂಡಾ 1962ರಲ್ಲಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಇಸ್ರೋ ಸ್ಥಾಪನೆಗೆ ಶಂಕುಸ್ಥಾಪನೆ ಮಾಡಿರುವುದಾಗಿ ತಿರುಗೇಟು ನೀಡಿದೆ.