Advertisement

ಜನಾರ್ದನ ರೆಡ್ಡಿಗೆ ಮತ್ತೆ ಪುತ್ರಿ ಮದುವೆ ಸಂಕಷ್ಟ!

07:17 AM Nov 08, 2017 | Team Udayavani |

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಮತ್ತೂಂದು ಸಂಕಷ್ಟ ಎದುರಾಗಿದೆ. ತಮ್ಮ ಪುತ್ರಿಯ ಅದ್ಧೂರಿ ವಿವಾಹ ಮಾಡಿದ ವೆಚ್ಚದ ಕುರಿತು ತನಿಖೆ ನಡೆಸದ ಸಿಬಿಐ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ವಿಚಕ್ಷಣಾ ಆಯೋಗ (ಸಿವಿಸಿ)ದ ಸೆಕ್ಷನ್‌ ಆಫಿಸರ್‌ ಅರವಿಂದಕುಮಾರ್‌ ಅವರು ಸಿಬಿಐ ಜಂಟಿ ನಿರ್ದೇಶಕ ಎ.ಕೆ.ಶರ್ಮಾ ಅವರಿಗೆ ಪತ್ರ ಬರೆದಿದ್ದಾರೆ.

Advertisement

2016ರ ನವೆಂಬರ್‌ನಲ್ಲಿ ಕೇಂದ್ರ ಸರ್ಕಾರ ನೋಟು ಅಮಾನ್ಯ ಮಾಡಿದ ಸಂದರ್ಭದಲ್ಲೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜನಾರ್ದನ ರೆಡ್ಡಿ ತಮ್ಮ ಪುತ್ರಿ ಬ್ರಹ್ಮಿಣಿಯ ವಿವಾಹವನ್ನು ಅದ್ದೂರಿಯಾಗಿ ಮಾಡಿ ದ್ದರು. ವಿವಾಹಕ್ಕೆ ಮಾಡಿದ ಖರ್ಚು ವೆಚ್ಚದ ಬಗ್ಗೆ ಸೂಕ್ತ ತನಿಖೆಯಾಗಿಲ್ಲ ಎಂದು ಆರೋಪಿಸಿ 2017, ಅ.25ರಂದು ಸಿಇಸಿ ಅಧಿಕಾರಿ ಅರವಿಂದ ಶರ್ಮಾ ಅವರು ಸಿಬಿಐ ಜಂಟಿ ನಿರ್ದೇಶಕರಿಗೆ ಪತ್ರ ಬರೆದಿದ್ದು, ಪತ್ರದ ಪ್ರತಿ “ಉದಯವಾಣಿ’ಗೆ ಲಭ್ಯವಾಗಿದೆ. ಪತ್ರದಲ್ಲಿ ಬಳ್ಳಾರಿಯ ಟಪಾಲ್‌ ಗಣೇಶ್‌ ಅವರು 2017, ಮೇ 16ರಂದು ಸಲ್ಲಿಸಿದ ದೂರಿನ ಅನ್ವಯ ಈ ಪತ್ರ ಬರೆಯಲಾಗಿದೆ ಎಂದು ಉಲ್ಲೇಖೀಸಿದ್ದಾರೆ. ಮಾಧ್ಯಮಗಳಲ್ಲಿ ವರದಿಯಾದ ರೆಡ್ಡಿ ಪುತ್ರಿಯ ಅದ್ಧೂರಿ ವಿವಾಹದ ಕುರಿತು ಸಿಬಿಐ ಅಧಿಕಾರಿಗಳು ಸೂಕ್ತ ತನಿಖೆ ನಡೆಸಿಲ್ಲ. ಅಂತಹ ಭ್ರಷ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಟಪಾಲ್‌ ಗಣೇಶ್‌ 2017, ಮೇ 16ರಂದು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದರು. ಅಕ್ರಮ ಗಣಿಗಾರಿಕೆಯ ಕುರಿತು ತನಿಖೆನಡೆಸುತ್ತಿರುವ ಸಿಬಿಐ ಅಧಿ ಕಾರಿಗಳು ಓಬಳಾಪುರಂ ಗಣಿ ಕಂಪನಿ ಅಸ್ತಿತ್ವದಲ್ಲಿಯೇ ಇಲ್ಲ ಎಂಬರ್ಥದಲ್ಲಿ ಸಲ್ಲಿಸಿದ ತನಿಖಾ ವರದಿ ಕಣ್ಣೆದುರಿಗೆ ಇದ್ದಾಗ ಇಂತಹ ಅಸ್ತಿತ್ವದಲ್ಲೇ ಇಲ್ಲದ ಕಂಪನಿಯ ಅಂಗ ಸಂಸ್ಥೆಗಳು, ಅವುಗಳ ಆದಾಯ ಮೂಲ ಎಲ್ಲಿಂದ ಬಂದವು ಎನ್ನುವುದನ್ನು ಸಿಬಿಐ ತನಿಖೆ ನಡೆಸಿಲ್ಲ. ಈ ಆದಾಯ ಮೂಲದ ತನಿಖೆ ಆಗಬೇಕು ಎಂದು ಟಪಾಲ್‌ ಗಣೇಶ್‌ ಕೋರಿದ್ದರು.

ಈ ಪತ್ರವನ್ನು ಪಿಎಂಒನ (ಪ್ರಧಾನಿ ಕಚೇರಿ) ಕೇಂದ್ರ ಸರ್ಕಾರದ ಅಧೀನ ಕಾರ್ಯದರ್ಶಿ ಎಸ್‌.ಪಿ.ಆರ್‌. ತ್ರಿಪಾಠಿಯವರು ಕೇಂದ್ರ ವಿಚಕ್ಷಣಾ ಆಯೋಗದ ಕಾರ್ಯದರ್ಶಿಗೆ ರವಾನಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. 

ಕೋರ್ಟ್‌ ಮೊರೆಹೋದ ರೆಡ್ಡಿ
ಬೆಂಗಳೂರು: ಅಕ್ರಮ ಗಣಿಗಾರಿಕೆ ಸಂಬಂಧ 10ಕ್ಕೂ ಹೆಚ್ಚು ಪ್ರಕರಣಗಳ ತನಿಖೆ ಎದುರಿಸುತ್ತಿರುವ ಮಾಜಿ ಸಚಿವ ಜನಾರ್ದನರೆಡ್ಡಿ, ನಿರೀಕ್ಷಣಾ ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಖಾಸಗಿ ಕಾರಣಗಳಿಂದಾಗಿ ಒಮ್ಮೆ ಮಾತ್ರ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ವಿನಾಯಿತಿ ನೀಡುವಂತೆ ಜನಾರ್ದನ ರೆಡ್ಡಿ ಕೋರಿದ್ದಾರೆ. ಕೋರ್ಟ್‌ ನವೆಂಬರ್‌ 14ಕ್ಕೆ ವಿಚಾರಣೆ ಮುಂದೂಡಿದೆ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ತಿಳಿಸಿದರು.

ಸಾವಿರಾರು ಕೋಟಿ ರೂ.ಅಕ್ರಮ ಗಣಿಗಾರಿಕೆ, ಅಕ್ರಮ ಅದಿರು ರವಾನೆ ಹಗರಣ ದಂತಹ ಬಹುಮುಖ್ಯ ಪ್ರಕರಣಗಳ ಕುರಿತು ಸೂಕ್ತ ಸಾಕ್ಷ್ಯಾಧಾರ ಇಲ್ಲ ಎಂದು ಸಿಬಿಐ ಅಕಾರಿಗಳು ತನಿಖೆ ನಿಲ್ಲಿಸುವಂತೆ ತಮ್ಮ ಮೇಲಾಧಿಕಾರಿಗಳಿಗೆ ಪತ್ರ ಬರೆದಿರುವು ದರ ಹಿನ್ನೆಲೆಯಲ್ಲಿ ಇಂಥ ಮಹತ್ವದ ಆದೇಶವನ್ನು ಸಿಇಸಿ, ಸಿಬಿಐಗೆ ನೀಡಿರುವುದು ನೆಮ್ಮದಿ ತಂದಿದೆ. ಜನಾರ್ದನ ರೆಡ್ಡಿ ಪುತ್ರಿಯ ವಿವಾಹಕ್ಕೂ ಅಕ್ರಮ ಗಣಿಗಾರಿಕೆಗೂ ನೇರ ಸಂಬಂಧ ಇದೆ ಎನ್ನುವುದು ಪ್ರಕರಣದ ತನಿಖೆಯಿಂದ ಬಹಿರಂಗವಾಗಲಿದೆ.
 ● ಟಪಾಲ್‌ ಗಣೇಶ್‌, ಗಣಿ ಉದ್ಯಮಿ

Advertisement

●ಎಂ.ಮುರಳಿಕೃಷ್ಣ

Advertisement

Udayavani is now on Telegram. Click here to join our channel and stay updated with the latest news.

Next