Advertisement

ಪಕ್ಷ ಘೋಷಣೆ ಬೆನ್ನಲ್ಲೇ ರೆಡ್ಡಿ “ರಂಗಪ್ರವೇಶ’

12:44 AM Dec 27, 2022 | Team Udayavani |

ಬೆಂಗಳೂರು: “ಕಲ್ಯಾಣ ರಾಜ್ಯ ಪ್ರಗತಿ ಪಕ್ಷ’ ಸ್ಥಾಪನೆ ಘೋಷಣೆ ಬೆನ್ನಲ್ಲೇ ಮಾಜಿ ಸಚಿವ ಜನಾರ್ದನ ರೆಡ್ಡಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರ ಸೆಳೆಯಲು ಮುಂದಾಗಿದ್ದಾರೆ.

Advertisement

ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ ಶಾಸಕರು, ಮಾಜಿ ಶಾಸಕರನ್ನು ಸಂಪರ್ಕಿಸುತ್ತಿರುವ ರೆಡ್ಡಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸೇರುವಂತೆ ಮನವೊಲಿಸಲು ಮುಂದಾಗಿದ್ದಾರೆ.

ಮುಂದಿನ ಚುನಾವಣೆ ಬಳಿಕ ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಅಸ್ತಿತ್ವಕ್ಕೆ ಬರುವುದು ಖಚಿತವಾಗಿದ್ದು, ಯಾರೇ ಸರಕಾರ ರಚಿಸಿದರೂ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬೆಂಬಲ ಪಡೆಯಬೇಕಾಗುತ್ತದೆ. ಆಗ ನಮ್ಮಿಂದ ಗೆದ್ದು ಬಂದರೆ ಸಚಿವ ಸ್ಥಾನ ಸಿಗಲಿದೆ ಎಂಬ “ಆಫ‌ರ್‌’ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಲ್ಯಾಣ ಕರ್ನಾಟಕ ಭಾಗವಷ್ಟೇ ಅಲ್ಲದೆ, ಹಳೆ ಮೈಸೂರು ಭಾಗದ ನಾಯಕರನ್ನು ರೆಡ್ಡಿ ಸಂಪರ್ಕಿಸುತ್ತಿದ್ದಾರೆ. ಈ ಹಿಂದಿನ ಬಿಜೆಪಿ ಸರಕಾರದ ಸಂದರ್ಭದಲ್ಲಿ ಆಪರೇಷನ್‌ ಕಮಲ ಕಾರ್ಯಾಚರಣೆಗೆ ಒಳಗಾಗಿದ್ದವರು ಹಾಗೂ ಕಾಂಗ್ರೆಸ್‌ನಿಂದ ಟಿಕೆಟ್‌ ಆಕಾಂಕ್ಷಿಗಳಾಗಿರುವ ಕೆಲವರು ಇದರಲ್ಲಿ ಸೇರಿದ್ದಾರೆ ಎಂದು ತಿಳಿದು ಬಂದಿದೆ. ಮತ್ತೂಂದೆಡೆ ಶ್ರೀರಾಮುಲು ಅವರು ಬಿಎಸ್‌ಆರ್‌ ಪಕ್ಷ ಸ್ಥಾಪನೆ ಸಂದರ್ಭ ಅವರ ಜತೆಗಿದ್ದವರನ್ನೂ ಸಂಪರ್ಕಿಸಿದ್ದಾರೆ ಎನ್ನಲಾಗಿದೆ.

ಜಗನ್‌ ಮಾದರಿ ಯಾತ್ರೆ
ಆಂಧ್ರ ಮುಖ್ಯಮಂತ್ರಿ ವೈಎಸ್‌ ಜಗನ್‌ ಮೋಹನ್‌ ಅವರು ವಿಧಾನಸಭೆ ಚುನಾವಣೆಗೆ ಮುನ್ನ ನಡೆಸಿದ ಯಾತ್ರೆ ಮಾದರಿಯಲ್ಲೇ ರೆಡ್ಡಿ ಕೂಡ ಯಾತ್ರೆ ನಡೆಸಲು ನೀಲನಕ್ಷೆ ರೂಪಿಸಿದ್ದಾರೆ.

Advertisement

ಸಂಕ್ರಾಂತಿ ನಂತರ ಬಳ್ಳಾರಿಯಿಂದಲೇ ಯಾತ್ರೆಗೆ ಚಾಲನೆ ನೀಡಲು ತೀರ್ಮಾನಿಸಲಾಗಿದ್ದು ಅದಕ್ಕಾಗಿ ವಿಶೇಷ ವಾಹನ ಸಜ್ಜುಗೊಳಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ರೆಡ್ಡಿ ಹೊಸ ಪಕ್ಷ ಸ್ಥಾಪನೆ ಘೋಷಣೆಗೆ ಮುನ್ನ ಹಲವು ಬಿಜೆಪಿ ನಾಯಕರನ್ನೂ ಸಂಪರ್ಕಿಸಿ ಚರ್ಚಿಸಿದ್ದರು ಎಂದೂ ಹೇಳಲಾಗಿದೆ. ಜತೆಗೆ ಮತ್ತೂಂದು ಪಕ್ಷದ ಮಾಜಿ ಮುಖ್ಯಮಂತ್ರಿಯನ್ನು ಭೇಟಿ ಮಾಡಲು ಸಮಯಾವಕಾಶ ಕೇಳಿದ್ದರು. ಆದರೆ ಅವರು ಭೇಟಿಗೆ ಒಪ್ಪಿರಲಿಲ್ಲ ಎಂದೂ ತಿಳಿದು ಬದಿದೆ.

ಹೀಗಾಗಿ ಶ್ರೀರಾಮುಲು, ಸೋಮಶೇಖರ ರೆಡ್ಡಿ, ಕರುಣಾಕರ ರೆಡ್ಡಿ ಅವರೇ ಇಲ್ಲದೆ ಜನಾರ್ದನ ರೆಡ್ಡಿ ಹೊಸ ಪಕ್ಷ ಎಷ್ಟರ ಮಟ್ಟಿಗೆ ಯಶಸ್ಸು ಕಾಣಲು ಸಾಧ್ಯ. ನಿಜಕ್ಕೂ ರೆಡ್ಡಿ ನಿರ್ಧಾರದ ಹಿಂದಿನ ಮರ್ಮ ಏನು? ಹೊಸ ಪಕ್ಷ ಯಾರ ಮತ ಬುಟ್ಟಿಗೆ ಕೈ ಹಾಕಬಹುದು ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವರದಿ ನೀಡಲು ಬಿಜೆಪಿ ವರಿಷ್ಠರ ಸೂಚನೆ
ರೆಡ್ಡಿ ಹೊಸ ಪಕ್ಷ ಸ್ಥಾಪನೆಯಿಂದ ಬಿಜೆಪಿಗೆ ಎಷ್ಟರ ಮಟ್ಟಿಗೆ ಸಮಸ್ಯೆಯಾಗಬಹುದು. ಬಿಜೆಪಿ ಶಾಸಕರು ಇರುವ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳಿರುವುದರಿಂದ ಅವರ ಹೊಸ ಪಕ್ಷದಿಂದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು , ಬೀದರ್‌, ಕಲಬುರಗಿ ಭಾಗದಲ್ಲಿ ಪಕ್ಷದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ವರದಿ ನೀಡುವಂತೆಯೂ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆಂದು ಮೂಲಗಳು ತಿಳಿಸಿವೆ.

– ಎಸ್‌.ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next