ಬೆಂಗಳೂರು: ಮಹತ್ವದ ರಾಜಕೀಯ ವಿದ್ಯಮಾನವೊಂದರಲ್ಲಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರನ್ನು ಶುಕ್ರವಾರ ರಾತ್ರಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ರೆಡ್ಡಿ ಅವರಿಂದ ಅಂತರ ಕಾಯ್ದುಕೊಳ್ಳಲು,ಸಮರ್ಥಿಸಬಾರದು ಎಂಬ ವರಿಷ್ಠರ ಸೂಚನೆಯ ಬೆನ್ನಲ್ಲೂ ಈ ಭೇಟಿ ನಡೆದಿರುವುದು ಕುತೂಹಲ ಮೂಡಿಸಿದೆ.
ಆ್ಯಂಬಿಡೆಂಟ್ ಪ್ರಕರಣದಲ್ಲಿ ಇಡಿಯಿಂದ ಬಚಾವ್ ಮಾಡಲು ಚಿನ್ನದ ಗಟ್ಟಿ ಲಂಚವಾಗಿ ಪಡೆದ ಆರೋಪ ಎದುರಿಸಿ ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರ ಬಂದಿರುವ ಜನಾರ್ದನ ರೆಡ್ಡಿ ಅವರು ಯಡಿಯೂರಪ್ಪ ಅವರ ಬಳಿ ಪ್ರಕರಣದ ಕುರಿತಾಗಿ ಮಾತಾಡಿ, ಹೋರಾಟಕ್ಕೆ ಬೆಂಬಲಿಸುವಂತೆ ಕೋರಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಭೇಟಿ ವೇಳೆ ಬಿಎಸ್‌ವೈ ಅವರು ರೆಡ್ಡಿ ಅವರಿಗೆ ‘ನೀವು ಕಾನೂನು ಹೋರಾಟ ಮಾಡಿ, ರಾಜಕೀಯ ನಾವು ನೋಡಿಕೊಳ್ಳುತ್ತೇವೆ’ ಎಂದಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಸಮರ್ಥನೆ ಇಲ್ಲ
‘ನಾವು ಹೇಳಿರುವುದು ಸಿಸಿಬಿಯನ್ನು ದುರ್ಬಳಕೆ ಮಾಡಬಾರದು ಎಂದು. ಇದು ರೆಡ್ಡಿ ಪರ ಅಲ್ಲ. ನಾವು ಜನಾರ್ದನ ರೆಡ್ಡಿ ಅವರನ್ನು ಸಮರ್ಥಿಸಿಕೊಂಡಿಲ್ಲ.ಅವರನ್ನು ಬಂಧಿಸಿದ ರೀತಿ ಸರಿಯಾದದ್ದಲ್ಲ. ಪರ ವಿರೋಧ ಅಲ್ಲ, ಸತ್ಯಾಂಶ ಇದ್ದರೆ ನ್ಯಾಯಾಲಯ ತೀರ್ಮಾನ ಮಾಡುತ್ತದೆ’ ಎಂದು ಬಿಎಸ್‌ವೈ ಸುದ್ದಿಗಾರರಿಗೆ ಹೇಳಿಕೆ ನೀಡಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ ಅವರು ನಾವು ರೆಡ್ಡಿ ಅವರನ್ನು ಸಮರ್ಥಿಸಿಕೊಂಡಿಲ್ಲ, ಅದರ ಅಗತ್ಯವೂ ನಮಗಿಲ್ಲ ಎಂದಿದ್ದರು.
ಇನ್ನೊಂದೆಡೆ ಜೆಡಿಎಸ್ ವಕ್ತಾರ ರಮೇಶ್‌ಬಾಬು ಜನಾರ್ದನ ರೆಡ್ಡಿಯಿಂದ ಬಿಜೆಪಿ ಚುನಾವಣೆಗೆ ಆರ್ಥಿಕ ನೆರವು ಪಡೆದಿದೆ ಎಂದು ಆರೋಪಿಸಿದ್ದಾರೆ.