Advertisement

ಜಮ್ಮು-ಕಾಶ್ಮೀರ: ಸಿಲಿಂಡರ್‌ ದಾಸ್ತಾನು ಆದೇಶ

02:25 AM Jun 29, 2020 | Sriram |

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ 2 ತಿಂಗಳಿಗೆ ಆಗುವಷ್ಟು ಎಲ್‌ಪಿಜಿ ಸಿಲಿಂಡರ್‌ಗಳನ್ನು ದಾಸ್ತಾನು ಇರಿಸಿಕೊಳ್ಳಿ ಎಂದು ಅಲ್ಲಿನ ಸರಕಾರ ಆದೇಶ ನೀಡಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಭಾರತ-ಚೀನ ನಡುವಿನ ಉದ್ವಿಗ್ನ ಸ್ಥಿತಿ ಹಿನ್ನೆಲೆಯಲ್ಲಿ ಈ ಆದೇಶ ನೀಡಿರಬಹುದೇ ಎಂಬ ಚರ್ಚೆ ಆರಂಭವಾಗಿದೆ. ಮತ್ತೂಂದು ಆದೇಶದಲ್ಲಿ ಭದ್ರತಾ
ಪಡೆಗಳಿಗಾಗಿ ಶಾಲಾ ಕಟ್ಟಡಗಳನ್ನು ಖಾಲಿ ಮಾಡಿಸುವಂತೆಯೂ ಸೂಚಿಸಲಾಗಿದೆ. ಈ ಬೆಳವಣಿಗೆಗಳು ಸ್ಥಳೀಯರಲ್ಲಿ ಭಯ ಮೂಡಿಸಿವೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

Advertisement

2 ತಿಂಗಳುಗಳಿಗೆ ಸಾಲುವಷ್ಟು ಎಲ್‌ಪಿಜಿ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿಕೊಳ್ಳಿ ಎಂದು ಅಲ್ಲಿನ ಸರಕಾರ ತೈಲ ಸರಬರಾಜು ಕಂಪೆನಿಗಳಿಗೆ ಸೂಚಿಸಿದೆ. ಈ ಸಂಬಂಧ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯು ಜೂ. 27ರಂದು ಆದೇಶ ಹೊರಡಿಸಿದೆ. ಈ ಆದೇಶವನ್ನು ಅತ್ಯಂತ ತುರ್ತು ಎಂಬುದಾಗಿ ಪರಿಗಣಿಸುವಂತೆಯೂ ಸೂಚಿಸಲಾಗಿದೆ. ಇಂತಹ ಆದೇಶ ಚಳಿಗಾಲದಲ್ಲಿ ಸಾಮಾನ್ಯ; ಆದರೆ ಭಾರತ-ಚೀನ ಗಡಿ ಬಿಕ್ಕಟ್ಟು ಉಲ್ಬಣಿಸಿರುವ ಈ ಸಮಯದಲ್ಲಿ ಹೊರಬಿದ್ದಿರುವುದು ವಿಶೇಷ.

ಶಿಕ್ಷಣ ಸಂಸ್ಥೆ ಕಟ್ಟಡ ಒದಗಿಸಲು ಆದೇಶ
ಇದೇವೇಳೆ ಕಣಿವೆಯ ಗಂಡೇರ್ಬಾಲ್‌ನ ಸೀನಿಯರ್‌ ಸೂಪರಿಂಟೆಂಡೆಂಟ್‌ ಆಫ್ ಪೊಲೀಸ್‌ ಹೊರಡಿಸಿರುವ ಇನ್ನೊಂದು ಆದೇಶದಲ್ಲಿ ಅಲ್ಲಿ 16 ಶೈಕ್ಷಣಿಕ ಸಂಸ್ಥೆಗಳ ಕಟ್ಟಡಗಳನ್ನು ಕೇಂದ್ರೀಯ ಸಶಸ್ತ್ರ ಮೀಸಲು ಪೊಲೀಸ್‌ ಪಡೆಗಳ ವಾಸ್ತವ್ಯಕ್ಕಾಗಿ ಬಿಟ್ಟುಕೊಡುವಂತೆ ಸೂಚಿಸಲಾಗಿದೆ.

ಈ ಎರಡೂ ಆದೇಶಗಳಿಗೂ ಅಧಿಕೃತವಾಗಿ ಮುಂಗಾರು ಕಾಲದ ಭೂಕುಸಿತ ಮತ್ತು ಅಮರನಾಥ ಯಾತ್ರಿಗಳಿಗೆ ಭದ್ರತೆ ಒದಗಿಸುವ ಉದ್ದೇಶಗಳನ್ನು ಕಾರಣಗಳನ್ನಾಗಿ ಕೊಡಲಾಗಿದೆ. ಆದರೆ ಭಾರತ-ಚೀನ ಗಡಿ ಬಿಕ್ಕಟ್ಟು ಉಲ್ಬಣಿಸಿರುವುದು ನೈಜ ಕಾರಣವೇ ಎಂಬ ಶಂಕೆ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next