Advertisement

ಜಮಖಂಡಿ: ಬಿಜೆಪಿಗೆ ಬಲಾಡ್ಯ ಹಳ್ಳಿಗಳೇ ಕೈ ಕೊಟ್ಟವು

06:00 AM Nov 08, 2018 | |

ಬಾಗಲಕೋಟೆ: ಜಮಖಂಡಿ ಉಪ ಚುನಾವಣೆಯಲ್ಲಿ ಸಾವಿನ ಅನುಕಂಪಕ್ಕಿಂತ ಸೋಲಿನ ಅನುಕಂಪ ಹಾಗೂ ಬಿಜೆಪಿಯ ಒಗ್ಗಟ್ಟಿನ ಪ್ರಚಾರದ ಮೂಲಕ ಗೆಲ್ಲುವ ಅತಿಯಾದ ಆತ್ಮವಿಶ್ವಾಸ ಇಟ್ಟಿದ್ದ ಪಕ್ಷಕ್ಕೆ ಈಗ ಹಿನ್ನಡೆಯಾಗಿದೆ. ಜತೆಗೆ ನಮ್ಮದೇ ಪಕ್ಷ ಬಲಾಡ್ಯ ಇರುವ ಹಳ್ಳಿಗಳೂ ಏಕೆ ಕೈ ಕೊಟ್ಟವು ಎಂಬ ಚರ್ಚೆ ಪಕ್ಷದಲ್ಲಿ ನಡೆಯುತ್ತಿದೆ.

Advertisement

ಉಪ ಚುನಾವಣೆಯಲ್ಲಿ ಗೆಲ್ಲುವ ಪ್ರತಿಷ್ಠೆ ಹಾಗೂ ವಿಶ್ವಾಸ ಎರಡೂ ಬಿಜೆಪಿಗಿತ್ತು. ಅದಕ್ಕಾಗಿಯೇ ಪಕ್ಷದಲ್ಲಿದ್ದ ಬಂಡಾಯವನ್ನು ಸ್ವತಃ ಯಡಿಯೂರಪ್ಪ ಶಮನ ಮಾಡಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ತಿಳಿಸಿದ್ದರು. ಒಗ್ಗಟ್ಟಿನ ಪ್ರಚಾರ ಮತಗಳಾಗಿ ಪರಿವರ್ತನೆಯಾಗಿಲ್ಲವೆಂಬ ಮಾತು ಕೇಳಿ ಬರುತ್ತಿದೆ. ಬಿಜೆಪಿಗೆ ಜಮಖಂಡಿ ನಗರ ರೆಡ್‌ ಜೋನ್‌ ಆಗಿದ್ದರೆ, ಕಾಂಗ್ರೆಸ್‌ಗೆ ಸಾವಳಗಿ ಹೋಬಳಿ ರೆಡ್‌ ಜೋನ್‌. ಇದು ಎರಡೂ ಪಕ್ಷಗಳು ಮನಗಂಡು ಆಯಾ ಪ್ರದೇಶದಲ್ಲಿನ ಮತ ಪಡೆಯಲು ಎಲ್ಲ ರೀತಿಯ ಕಸರತ್ತು ನಡೆಸಿದ್ದವು. ಇದರಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದ್ದರೆ ಬಿಜೆಪಿ ಎಡವಿದ್ದೆಲ್ಲಿ ಎಂಬ ಪ್ರಶ್ನೆಗೆ ಉತ್ತರ ಹುಡುಕಲಾಗುತ್ತಿದೆ.

ಸಾವಳಗಿ, ಗೋಠೆ, ಗದ್ಯಾಳ, ಅಡಿಹುಡಿ, ತೊದಲಬಾಗಿ, ಹಿರೇಪಡಸಲಗಿ (ಬಿಜೆಪಿ ಅಭ್ಯರ್ಥಿಯ ಸ್ವಂತ ಊರು), ಚಿಕ್ಕಲಗಿ, ಬಿದರಿ, ಕನ್ನೊಳ್ಳಿ, ಕಾಜಿಬೀಳಗಿ, ಕುರಗೋಡ ಮುಂತಾದ ಸುಮಾರು 33 ಹಳ್ಳಿಗಳು ಬಿಜೆಪಿ ಪ್ರಾಬಲ್ಯವಿರುವ ಹಳ್ಳಿಗಳು. ಈ ಭಾಗದ ಒಂದೊಂದು ಹಳ್ಳಿಗೆ ಕಾಲಿಟ್ಟರೂ ಕೇಸರಿ ಧ್ವಜಗಳೇ ಸ್ವಾಗತ ಕೋರುತ್ತವೆ. ಆದರೂ, ಈ ಗ್ರಾಮಗಳ ಮತಗಳು ಏಕೆ ಬರಲಿಲ್ಲ. ಸಾವಿನ ಅನುಕಂಪದಲ್ಲಿ ಸೋಲಿನ ಅನುಕಂಪ ತೇಲಿ ಹೋಯಿತಾ? ಬಿಜೆಪಿಯ ನಾಯಕರು ಮತ ಪಡೆಯಲು ಗಂಭೀರ ಪ್ರಯತ್ನ ನಡೆಸಲಿಲ್ಲವೇ? ಬಂಡಾಯ ಮರೆತು ಶ್ರೀಕಾಂತ ಅವರೊಂದಿಗೆ ಕೈ ಜೋಡಿಸಿದವರು ಕೇವಲ ಪ್ರಚಾರಕ್ಕೆ ಸಿಮೀತವಾದರಾ ಎಂಬ ಚರ್ಚೆ ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಸ್ವತಃ ಬಿಜೆಪಿ ಪರಾಭವ ಅಭ್ಯರ್ಥಿ ಶ್ರೀಕಾಂತ ಎಲ್ಲ ಬೆಳವಣಿಗೆ ನಾಯಕರಿಗೆ ಒಪ್ಪಿಸುವುದಾಗಿ ಹೇಳಿದ್ದಾರೆ.

ಬಂಡಾಯ ಮತಗಳು ಸಿಗಲಿಲ್ಲ: 2013 ಮತ್ತು 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡಾಯವಾಗಿ ಸ್ಪರ್ಧೆ ಮಾಡಿದ್ದ ಮತಗಳು ಎರಡೂ ಚುನಾವಣೆಯಲ್ಲಿ ಬಿಜೆಪಿ ಪಡೆದಿದ್ದ ಮತಗಳು ಒಂದುಗೂಡಿಸಿದರೂ ಮತ ಗಳಿಕೆ ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. 2013ರ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿದ್ದ ಡಾ|ಉಮೇಶ ಮಹಾಬಳಶೆಟ್ಟಿ 18,211 ಮತ ಪಡೆದಿದ್ದರು. ಆಗ ಕಾಂಗ್ರೆಸ್‌ನಲ್ಲಿದ್ದು, ಬಿಜೆಪಿ ನಾಯಕರೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದ, ಸದ್ಯ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ ಎನ್ನಲಾದ ಉದ್ಯಮಿ ಜಗದೀಶ ಗುಡಗುಂಟಿ 27,993 ಮತ ಪಡೆದಿದ್ದರೆ, ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಇದೇ ಶ್ರೀಕಾಂತ ಕುಲಕರ್ಣಿ 20,982 ಮತ ಗಳಿಸಿದ್ದರು. ಸಿದ್ದು ನ್ಯಾಮಗೌಡ 49,145 ಮತ ಪಡೆದು, 21,152 ಮತಗಳ ಅಂತರದಿಂದ ಗೆದ್ದಿದ್ದರು. ಸದ್ಯ ಬಿಜೆಪಿಯಲ್ಲಿರುವ ಬಸವರಾಜ ಸಿಂಧೂರ ಆಗ ಜೆಡಿಎಸ್‌ ಅಭ್ಯರ್ಥಿಯಾಗಿ 10 ಸಾವಿರ ಮತ ಪಡೆದಿದ್ದರು.

2013ರಲ್ಲಿ ಉಮೇಶ, ಬಸವರಾಜ ಸಿಂಧೂರ ಮತ್ತು ಜಗದೀಶ ಪಡೆದಿದ್ದ ಒಟ್ಟು 56,204 ಮತಗಳು, ಶ್ರೀಕಾಂತ ಪಡೆದಿದ್ದ 20,982 ಮತಗಳು ಸೇರಿ ಒಟ್ಟು 77,186 ಬಿಜೆಪಿಗೆ ಬರಬೇಕಿತ್ತು. ಈ ಮತಗಳು ವಿಭಜನೆಯಾಗದಿರಲಿ ಎಂಬ ಕಾರಣಕ್ಕೇ ಎಲ್ಲರನ್ನೂ ಒಗ್ಗಟ್ಟಾಗಿ ಉಪ ಚುನಾವಣೆ ಎದುರಿಸಲು ಪಕ್ಷ ನಿರ್ಧಾರ ಕೈಗೊಂಡಿತ್ತು. 2013ರ ಚುನಾವಣೆಯಲ್ಲಿ ವಿಭಜನೆಯಾದ ಮತಗಳು ಬಿಜೆಪಿಗೆ ಬರದಿದ್ದರೂ ಐದು ತಿಂಗಳ ಹಿಂದಷ್ಟೇ ನಡೆದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ವಿಭಜನೆಯಾದ ಮತಗಳಾದರೂ ಬರಬೇಕಿತ್ತು ಎಂಬುದು ಬಿಜೆಪಿಯವರು ಮಾಡಿಕೊಂಡಿದ್ದ ಲೆಕ್ಕಾಚಾರ.

Advertisement

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀಕಾಂತ ಕುಲಕರ್ಣಿ 46,450, ಸಂಗಮೇಶ ನಿರಾಣಿ 24,461 ಮತ ಪಡೆದಿದ್ದರು. ಇವು ಪಕ್ಕಾ ಬಿಜೆಪಿ ಮತಗಳು. ಇವರಿಬ್ಬರ ಮತ ಕೂಡಿಸಿದರೆ 70,911 ಮತಗಳಾದರೂ (ಈಗ ಬಂದಿದ್ದು 57,537 ಮತ) ಪಕ್ಷಕ್ಕೆ ಬರಬೇಕಿತ್ತು. ಆಗ ಗೆಲುವಿನ ಅಂತರ ಕಡಿಮೆಗೊಂಡು ನಮ್ಮ ಪಕ್ಷದ ಮತಗಳು ನಮಗೇ ಬಂದಿವೆ ಎಂದು ಹೇಳಲು ಧೈರ್ಯ ಇರುತ್ತಿತ್ತು ಎಂಬುದು ಪಕ್ಷದ ಹಿರಿಯ ಅಭಿಪ್ರಾಯ.

ಅದೇ ಕಾಂಗ್ರೆಸ್‌ಗೆ ಬಂಡಾಯ ಅಭ್ಯರ್ಥಿ ಆಗಿದ್ದ ಶ್ರೀಶೈಲ ದಳವಾಯಿ ಪಡೆದಿದ್ದ 19,753 ಮತಗಳು, ಆಗ ಸಿದ್ದು ನ್ಯಾಮಗೌಡ ಪಡೆದಿದ್ದ 49,245 ಮತ ಸೇರಿ 68,998 ಮತಗಳು ಆಗುತ್ತವೆ. ಅವುಗಳ ಜತೆಗೇ ಅತ್ಯಧಿಕ ಮತ ಕಾಂಗ್ರೆಸ್‌ಗೆ ಬಂದಿವೆ. ಕಾಂಗ್ರೆಸ್‌ನ ಬಂಡಾಯ ಮತಗಳು, ಅನುಕಂಪ ಮತಗಳು ಕೈ ಹಿಡಿದಿವೆ. ಆದರೆ, ಬಿಜೆಪಿಯ ಪಾರಂಪರಿಕ ಹಾಗೂ ಬಂಡಾಯ ಮತಗಳು ಬಿಜೆಪಿಗೆ ಬರಲಿಲ್ಲ ಏಕೆ ಎಂಬುದು ಪಕ್ಷದ ವಿಶ್ಲೇಷಕ ಪ್ರಮುಖರ ಪ್ರಶ್ನೆ.

ಉಪ ಚುನಾವಣೆಯಲ್ಲಿ ಕಾಂಗ್ರೆಸ್‌, ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ಸರ್ಕಾರಿ ಹಾಗೂ ಪೊಲೀಸ್‌ ವಾಹನಗಳಲ್ಲೇ ಹಣ ಸಾಗಿಸಲಾಗಿತ್ತು. ನಮ್ಮ ಪಕ್ಷದ ಯಾವ ನಾಯಕರು, ಯಾವ ರೀತಿ ಕೆಲಸ ಮಾಡಿದ್ದಾರೆಂಬ ಮಾಹಿತಿಯನ್ನೂ ವರಿಷ್ಠರ ಗಮನಕ್ಕೆ ತರಲಾಗುವುದು.
– ಶ್ರೀಕಾಂತ ಕುಲಕರ್ಣಿ, ಪರಾಜಿತ ಬಿಜೆಪಿ ಅಭ್ಯರ್ಥಿ

ಜಮಖಂಡಿಯಲ್ಲಿ ಐದು ಅಭ್ಯರ್ಥಿಗಳ ಠೇವಣಿ ಜಪ್ತಿ
ಬಾಗಲಕೋಟೆ:
ಬಿಜೆಪಿ-ಕಾಂಗ್ರೆಸ್‌ ಅಭ್ಯರ್ಥಿಗಳು ಹೊರತುಪಡಿಸಿ ಉಳಿದೆಲ್ಲ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. 

ಮೇ 12ರಂದು ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ದಲಿತ ಹೋರಾಟಗಾರ ಪರಶುರಾಮ ಮಹಾರಾಜನವರ 5,167 ಮತ ಪಡೆದಿದ್ದರು. ಆದರೆ, ಉಪ ಚುನಾವಣೆಯಲ್ಲಿ ಕೇವಲ 731 ಮತ ಪಡೆದುಕೊಂಡು, ಠೇವಣಿ ಕಳೆದುಕೊಂಡಿದ್ದಾರೆ. 

ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಿದ್ದ ಬೆಂಗಳೂರಿನ ಸಾಮಾಜಿಕ ಹೋರಾಟಗಾರ ಅಂಬ್ರೋಸ್‌ ಡಿಮೆಲ್ಲೋ 237 ಮತ ಪಡೆದಿದ್ದಾರೆ. ಯಮನಪ್ಪ ಗುಣದಾಳ 178, ರವಿ ಸಂಗಪ್ಪ ಪಡಸಲಗಿ 219, ಸಂಗಮೇಶ ಚಿಕ್ಕನರಗುಂದ 373 ಪಡೆದಿದ್ದು, ನೋಟಾ 724 ಮತ ಬಂದಿವೆ.

– ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next