ಲಾರ್ಡ್ಸ್: ವಿಶ್ವ ಕ್ರಿಕೆಟ್ ಕಂಡ ದಿಗ್ಗಜ ಬೌಲರ್ ಜೇಮ್ಸ್ ಆ್ಯಂಡರ್ಸನ್ ಅವರು ಕೆಲ ದಿನಗಳ ಹಿಂದೆ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ದ ನಡೆದ ಲಾರ್ಡ್ಸ್ ಟೆಸ್ಟ್ ಪಂದ್ಯ ಆ್ಯಂಡರ್ಸನ್ ಅವರು ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿತ್ತು. 188 ಟೆಸ್ಟ್ ಪಂದ್ಯವಾಡಿದ ಇಂಗ್ಲೆಂಡ್ ನ ವೇಗಿ 704 ವಿಕೆಟ್ ಗಳೊಂದಿಗೆ ಟೆಸ್ಟ್ ಕ್ರಿಕೆಟ್ ನ ಅತಿ ಹೆಚ್ಚು ಕಿತ್ತ ವೇಗಿ ಎಂದೆನಿಸಿದ್ದಾರೆ.
ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಜಿಮ್ಮಿ ಮೂರನೇ ಸ್ಥಾನದಲ್ಲಿದ್ದಾರೆ. ಶ್ರೀಲಂಕಾದ ಮತ್ತಯ್ಯ ಮುರಳೀಧರನ್ (800 ವಿಕೆಟ್) ಮತ್ತು ಆಸ್ಟ್ರೇಲಿಯಾ ಶೇನ್ ವಾರ್ನ್ (708 ವಿಕೆಟ್) ಮೊದಲೆರಡು ಸ್ಥಾನದಲ್ಲಿದ್ದಾರೆ.
ಅವರ ಅಂತಿಮ ಪಂದ್ಯವನ್ನು ಆಡಿದ ನಂತರ ಆ್ಯಂಡರ್ಸನ್ ಅವರು ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಏಳು ಬಾರಿ ಔಟ್ ಮಾಡಿದ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿಯೊಂದಿಗಿನ ಅವರ ಪಂದ್ಯಗಳನ್ನು ನೆನಪಿಸಿಕೊಂಡರು.
“ಕೆಲವು ಸರಣಿಗಳು ನಿಮಗೆ ಅದ್ಭುತವೆನಿಸುತ್ತದೆ, ನಂತರದ ಸರಣಿಯಲ್ಲಿ ಸ್ವಲ್ಪವೂ ಮೊದಲಿನಂತೆ ಇರಲ್ಲ. ಆರಂಭಿಕ ದಿನಗಳಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಆಡುವಾಗ, ಅವನನ್ನು ಪ್ರತಿ ಬಾರಿಯೂ ಔಟ್ ಮಾಡಬಹುದು ಎಂದು ನೀವು ಭಾವಿಸುತ್ತೀರಿ. ಆದರೆ ಬಳಿಕದ ಸರಣಿಯಲ್ಲಿ ಅವನನ್ನು ಔಟ್ ಮಾಡಲು ಸಾಧ್ಯವೇ ಇಲ್ಲ ಎಂಬ ಭಾವನೆ ಬರುತ್ತದೆ, ಆಗ ತುಂಬಾ ಕೀಳರಿಮೆ ಅನುಭವಿಸುತ್ತೀರಿ” ಎಂದು ಆಂಡರ್ಸನ್ ಸ್ಕೈ ಸ್ಪೋರ್ಟ್ಸ್‌ಗೆ ತಿಳಿಸಿದರು.
2014ರ ಭಾರತದ ಇಂಗ್ಲೆಂಡ್ ಪ್ರವಾಸಲ್ಲಿ ವಿರಾಟ್ ಕೊಹ್ಲಿ ಅವರನ್ನು ಆ್ಯಂಡರ್ಸನ್ ನಾಲ್ಕು ಬಾರಿ ಔಟ್ ಮಾಡಿದ್ದರು. ಈ ಸರಣಿಯಲ್ಲಿ ವಿರಾಟ್ ರನ್ ಗಳಿಸಲು ಪರದಾಡಿದ್ದರು. ಆದರೆ ನಾಲ್ಕು ವರ್ಷದ ಬಳಿಕ ಇಂಗ್ಲೆಂಡ್ ಪ್ರವಾಸದಲ್ಲಿ ವಿರಾಟ್ ಕೊಹ್ಲಿ 600 ರನ್ ಗಳಿಸಿ ಮೆರೆದಾಡಿದ್ದರು.
ಎರಡು ದಶಕಗಳಿಂದ ಹೆಚ್ಚು ಕಾಲ ಆಡಿದ ಜೇಮ್ಸ್ ಆ್ಯಂಡರ್ಸನ್ ಅವರು ಹೆಚ್ಚು ಸಮಯ ಗಾಯಗೊಳ್ಳದ ಕಾರಣ ಇಷ್ಟು ಸಮಯ ಆಡಲು ಸಾಧ್ಯವಾಯಿತು.