ಬೆಂಗಳೂರು: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ(Virat Kohli) 9 ಎಸೆತಗಳಲ್ಲಿ ಶೂನ್ಯಕ್ಕೆ ಔಟಾದ ಕುರಿತು, ಕ್ರಿಕೆಟ್ ವಿಶ್ಲೇಷಕ ಮತ್ತು ಮಾಜಿ ಭಾರತದ ಕ್ರಿಕೆಟಿಗ ಸಂಜಯ್ ಮಂಜ್ರೇಕರ್(Sanjay Manjrekar) ಪ್ರತಿಕ್ರಿಯೆ ನೀಡಿ ಸುದ್ದಿಯಾಗಿದ್ದಾರೆ.
ಕೊಹ್ಲಿ ಅವರ ಆಟ ಮೌಲ್ಯಮಾಪನ ಮಾಡುವಲ್ಲಿ ಹಿಂದುಳಿಯದ ಸಂಜಯ್ ಮಂಜ್ರೇಕರ್, ಭಾರತದ ಅನುಭವಿ ಸ್ಟಾರ್ ಬ್ಯಾಟರ್ ಕೊಹ್ಲಿ ಆಟದ ತಂತ್ರದಲ್ಲಿನ ದೋಷವನ್ನು ಎತ್ತಿ ತೋರಿಸಿದ್ದಾರೆ.
“ನಾನಿದನ್ನು ಮೊದಲೇ ಹೇಳಿದ್ದೆ, ಮತ್ತೆ ಹೇಳುತ್ತೇನೆ. ವಿರಾಟ್ ಪ್ರತಿ ಬಾಲ್‌ಗೆ ಫ್ರಂಟ್ ಫೂಟ್‌ನಲ್ಲಿ ಇರಲು ಬಯಸುವ ಮೂಲಕ ತಮ್ಮ ಸಮಸ್ಯೆಗಳನ್ನು ಸಂಕೀರ್ಣಗೊಳಿಸಿದ್ದಾರೆ. ಲೆಂತ್ ವಿಚಾರವಲ್ಲ. ಇಂದು ಗುರುವಾರ(ಅ17) ಅವರು ಔಟಾದ ಚೆಂಡನ್ನು ಹಿಂಬದಿಯಿಂದ ಆರಾಮವಾಗಿ ನಿಭಾಯಿಸಬಹುದಿತ್ತು” ಎಂದು ಬರೆದಿದ್ದಾರೆ.
ಸದ್ಯ ಈ ವಿಚಾರ ತೀವ್ರ ಚರ್ಚೆಗೆ ಕಾರಣವಾಗಿದೆ. ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ಅವರ ಫಾರ್ಮ್ ಬಗ್ಗೆ ಸುದ್ದಿಗಾರರು ಕೇಳಿದಾಗ ಪ್ರತಿಕ್ರಿಯಿಸಿದ್ದ ಮುಖ್ಯ ಕೋಚ್ ಗೌತಮ್ ಗಂಭೀರ್” ಕೊಹ್ಲಿ ಅವರು ಹಿಂದಿನಂತೆಯೇ ರನ್ ಹಸಿವಿನಲ್ಲೇ ಇದ್ದಾರೆ. ಅವರನ್ನು ಒಂದು ಸರಣಿ ಮತ್ತು ಪಂದ್ಯದ ಆಟದಲ್ಲಿ ನಿರ್ಣಯ ಮಾಡಬಾರದು” ಎಂದು ಹೇಳಿದ್ದರು.
ಭಾರತ 46 ರನ್ ಗಳ ಕನಿಷ್ಠ ಮೊತ್ತಕ್ಕೆ ಆಲೌಟಾಗಿತ್ತು. ಪ್ರತಿಯಾಗಿ ಉತ್ತಮ ಆಟವಾಡುತ್ತಿರುವ ನ್ಯೂಜಿಲ್ಯಾಂಡ್ 3 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿ 134 ರನ್ ಗಳ ಮುನ್ನಡೆ ಸಾಧಿಸಿದೆ. ಕಾನ್ವೇ 91 ರನ್ ಗಳಿಸಿ ಔಟಾದರು. ರಚಿನ್ ರವೀಂದ್ರ 22, ಡೇರಿ ಮಿಚೆಲ್ 14 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.