ದುಬಾೖ: ವನಿತೆಯರ ಟಿ20 ವಿಶ್ವಕಪ್ ಕ್ರಿಕೆಟ್ ಕೂಟದ ಬಣ ಹಂತದ ಕೊನೆಯ ಪಂದ್ಯದಲ್ಲಿ ಮಂಗಳವಾರ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ತಂಡಗಳು ಕಣಕ್ಕಿಳಿಯಲಿವೆ. “ಬಿ’ ಬಣದ ಈ ಮಹತ್ವದ ಪಂದ್ಯ ದುಬಾೖಯಲ್ಲಿ ರಾತ್ರಿ 7.30ಕ್ಕೆ ಆರಂಭವಾಗಲಿದೆ.
ಇಂಗ್ಲೆಂಡ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿ 6 ಅಂಕದೊಂದಿಗೆ ಬಣದ ಅಗ್ರಸ್ಥಾನದಲ್ಲಿದೆ. ಇಂಗ್ಲೆಂಡ್ ಉತ್ತಮ ರನ್‌ಧಾರಣೆ (1.716) ಹೊಂದಿರುವ ಕಾರಣ ಅದು ಸೆಮಿಫೈನಲಿಗೇರುವುದನ್ನು ಖಚಿತಪಡಿಸಿದೆ. ವೆಸ್ಟ್ ಇಂಡೀಸ್ ಆಡಿದ ಮೂರು ಪಂದ್ಯಗಳಿಂದ 4 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಆರಂಕ ಹೊಂದಿರುವ ದಕ್ಷಿಣ ಆಫ್ರಿಕಾ ಸದ್ಯ ದ್ವಿತೀಯ ಸ್ಥಾನದಲ್ಲಿದೆ.
ಮಂಗಳವಾರದ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೆಮಿಫೈನಲ್‌ಗೆ ಪ್ರವೇಶಿಸಲಿದೆ. ಆದರೆ ವೆಸ್ಟ್‌ಇಂಡೀಸ್ ಗೆದ್ದರೆ ಆಗ ಗುಂಪಿನ ಅಗ್ರ ಮೂರು ತಂಡಗಳು ತಲಾ ಆರಂಕ ಪಡೆಯಲಿವೆ. ಆಗ ಉತ್ತಮ ರನ್‌ಧಾರಣೆ ಹೊಂದಿರುವ ಎರಡು ತಂಡಗಳು ಸೆಮಿಫೈನಲಿಗೇರಲಿವೆ. ಉತ್ತಮ ರನ್‌ಧಾರಣೆಯಲ್ಲಿ ಸದ್ಯ ದಕ್ಷಿಣ ಆಫ್ರಿಕಾಕ್ಕಿಂತ (1.382) ವೆಸ್ಟ್‌ಇಂಡೀಸ್ (1.708) ಉತ್ತಮವಾಗಿದೆ. ಹಾಗಾಗಿ ವಿಂಡೀಸ್ ಗೆದ್ದರೆ ಎರಡನೇ ತಂಡವಾಗಿ ವೆಸ್ಟ್‌ಇಂಡೀಸ್ ಸೆಮಿಫೈನಲಿಗೇರುವ ಸಾಧ್ಯತೆಯಿದೆ.
ಅಂಕಣ ಗುಟ್ಟು
ದುಬಾೖ ಅಂತಾರಾಷ್ಟ್ರೀಯ ಮೈದಾನ ಬ್ಯಾಟಿಂಗಿಗೆ ಯೋಗ್ಯವಾದ ಪಿಚ್ ಹೊಂದಿದೆ. ಆದರೆ ರಾತ್ರಿ ವೇಳೆ ಪಂದ್ಯ ನಡೆದರೆ ವೇಗಿಗಳಿಗೂ ಪಿಚ್ ಅನುಕೂಲ ಒದಗಿಸುತ್ತದೆ. ಏಕೆಂದರೆ ಇಲ್ಲಿ ತೇವಾಂಶ ಆಟದ ಮೇಲೆ ಪರಿಣಾಮ ಬೀರುತ್ತದೆ.