ಗ್ವಾಲಿಯರ್: ಬಾಂಗ್ಲಾದೇಶ (Bangladesh) ವಿರುದ್ದದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತವು (Team India) ಸುಲಭ ಜಯ ಸಾಧಿಸಿದೆ. ಗ್ವಾಲಿಯರ್ ನಲ್ಲಿ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಪಡೆಯು ಏಳು ವಿಕೆಟ್ ಅಂತರದ ಗೆಲುವು ಕಂಡಿದೆ.
ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡವು 19.5 ಓವರ್ ಗಳಲ್ಲಿ 127 ರನ್ ಗಳಿಸಿದರೆ, ಭಾರತವು ಕೇವಲ 11.5 ಓವರ್ ಗಳಲ್ಲಿ ಮೂರು ವಿಕೆಟ್ ಪಡೆದು 132 ರನ್ ಗಳಿಸಿ ಸುಲಭವಾಗಿ ಗೆಲುವಿನ ಗುರಿ ತಲುಪಿತು.
ಟೀಂ ಇಂಡಿಯಾದ ಸೀನಿಯರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿದರು. ಬೌಲಿಂಗ್ ವೇಳೆ ನಾಲ್ಕು ಓವರ್ ನಲ್ಲಿ 26 ರನ್ ನೀಡಿದ ಹಾರ್ದಿಕ್ ಒಂದು ವಿಕೆಟ್ ಪಡೆದರೆ, ಬ್ಯಾಟಿಂಗ್ ನಲ್ಲಿ ಕೇವಲ 16 ಎಸೆತಗಳಲ್ಲಿ ಅಜೇಯ 39 ರನ್ ಗಳಿಸಿದರು.
ಇದೇ ವೇಳೆ ಹಾರ್ದಿಕ್ ಪಾಂಡ್ಯ ಅವರು ವಿರಾಟ್ ಕೊಹ್ಲಿ ಅವರ ದಾಖಲೆಯೊಂದನ್ನು ಮುರಿದರು. ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಅತಿ ಹೆಚ್ಚು ಬಾರಿ ಸಿಕ್ಸರ್‌ನೊಂದಿಗೆ ಪಂದ್ಯ ಮುಗಿಸಿದ ಸಾಧನೆಯನ್ನು ಪಾಂಡ್ಯ ಗ್ವಾಲಿಯರ್ ನಲ್ಲಿ ಸಾಧಿಸಿದರು.
ಹಾರ್ದಿಕ್ ಒಟ್ಟು ಐದು ಬಾರಿ ಸಿಕ್ಸರ್ ನೊಂದಿಗೆ ಭಾರತವನ್ನು ಟಿ20 ಪಂದ್ಯಗಳಲ್ಲಿ ಜಯ ತಂದಿತ್ತು, ವಿರಾಟ್ ಅವರ ಹಿಂದಿನ ದಾಖಲೆಯನ್ನು ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ನಾಲ್ಕು ಬಾರಿ ಈ ಸಾಧನೆ ಮಾಡಿದರು.
ಅಲ್ಲದೆ, ಅವರ ಒಂದು ವಿಕೆಟ್‌ನೊಂದಿಗೆ, ಪಾಂಡ್ಯ (87 ವಿಕೆಟ್‌ಗಳು) ವೇಗಿ ಅರ್ಷದೀಪ್ ಸಿಂಗ್ (86 ವಿಕೆಟ್‌ಗಳು) ಅವರನ್ನು ಹಿಂದಿಕ್ಕಿ ಟಿ20 ಸ್ವರೂಪದಲ್ಲಿ ಭಾರತದ ನಾಲ್ಕನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಸ್ಪಿನ್ನರ್ ಯಜುವೇಂದ್ರ ಚಾಹಲ್ 96 ವಿಕೆಟ್ ಗಳೊಂದಿಗೆ ಭಾರತದ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ.