ಜಮಖಂಡಿ: ಟಿಪ್ಪು ಸುಲ್ತಾನ್ ಮೈಸೂರು ರಾಜನಾಗಿದ್ದಾಗ ಎಲ್ಲ ಸಮಾಜದವರನ್ನು ಒಂದೇ ದೃಷ್ಟಿಯಿಂದ ಕಾಣುವ ಮೂಲಕ ಭೇದಭಾವವಿಲ್ಲದೆ ರಾಜ್ಯಭಾರ ಮಾಡಿದ್ದಾರೆ. ನೂರಾರು ಮಠ-ಮಾನ್ಯಗಳಿಗೆ ಕಟ್ಟಲು ಸ್ಥಳ ನೀಡಿರುವ ಕೀರ್ತಿ ಟಿಪ್ಪು ಸುಲ್ತಾನರಿಗೆ ಸಲ್ಲುತ್ತದೆ ಎಂದು ಹಾಫೀಜ್ ಯುಸೂಫ್ ಹಾಸ್ಮಿ ಹೇಳಿದರು.
ನಗರದ ಬಸವ ಭವನದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ ಹಜರತ ಟಿಪ್ಪು ಸುಲ್ತಾನ್ ಜಯಂತಿಯಲ್ಲಿ ಅವರು ಮಾತನಾಡಿದರು. ಟಿಪ್ಪು ತನ್ನ ಸ್ವಂತ ಮಕ್ಕಳನ್ನೇ ಒತ್ತೆಯಿಟ್ಟು ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಮಹಾನ್ ವ್ಯಕ್ತಿಯಾಗಿದ್ದರು. ಟಿಪ್ಪು ಹಿಂದೂ ಮತ್ತು ಮುಸಲ್ಮಾನ ಎನ್ನದೆ ಅದೆಷ್ಟೋ ಹಿಂದು ಮಠ-ಮಾನ್ಯಗಳನ್ನು ಕಟ್ಟಿಕೊಳ್ಳಲು ಸ್ಥಳಾವಕಾಶ ನೀಡಿದ್ದಾರೆ ಎಂದರು.
ಮೌಲಾನಾ ಅಲ್ತಾಫ್ ಮದನಿ ಮಾತನಾಡಿ, ರಾಜಧರ್ಮದ ನೀತಿಯಲ್ಲಿ ಟಿಪ್ಪು ಶಿಕ್ಷೆ ನೀಡಿರಬಹುದು. ಆದರೆ ಅವರು ಯಾರ ಮೇಲೆ ಅತ್ಯಾಚಾರ, ದಬ್ಟಾಳಿಕೆ ಮಾಡಿದವರಲ್ಲ. ಹಿಂದೂ ದೇವಸ್ಥಾನ ಕೆಡವಿರುವುದು ಯಾವ ಇತಿಹಾಸದಲ್ಲಿ ಇಲ್ಲ. ಕೆಲವರು ಆಗಲಾರದವರು ಇದನ್ನು ಹುಟ್ಟು ಹಾಕುತ್ತಿದ್ದಾರೆ ಎಂದರು.
ಜವಳಿ ನಿಗಮದ ಮಾಜಿ ಉಪಾಧ್ಯಕ್ಷ ನಜೀರ್ ಕಂಗನೊಳ್ಳಿ ಮಾತನಾಡಿ, ಹಜರತ್ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ವಿರೋಧಿಸುತ್ತಿರುವ ಬಿಜೆಪಿಯವರು ಮೊದಲು ಬಿಎಸ್‌ವೈ ಕೆಜೆಪಿ ಪಕ್ಷದಲ್ಲಿದ್ದಾಗ ಟಿಪ್ಪು ಜಯಂತಿ ಆಚರಣೆ ಮಾಡಿ ಟಿಪ್ಪುವಿನ ವೇಷ ಧರಿಸಿದ್ದು, ಈಗೇಕೆ ವಿರೋಧ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಯುವ ಮುಖಂಡ ಬಸವರಾಜ ನ್ಯಾಮಗೌಡ, ತಹಶೀಲ್ದಾರ್ ಪ್ರಶಾಂತ ಚನಗೊಂಡ, ಆರ್.ಕೆ. ಪಾಟೀಲ, ಎನ್. ಎಸ್. ದೇವರವರ, ರವಿ ಯಡಹಳ್ಳಿ, ಸಮೀರ್ ಕಂಗನೊಳ್ಳಿ, ಇಸ್ಮಾಯಿಲ್ ಪೆಂಡಾರಿ, ಜಾಕೀರ್ ನದಾಫ್, ಮುಬಾರಕ ಅಫರಾಜ, ನಿಂಗಪ್ಪ ಕಡಪಟ್ಟಿ, ಈಶ್ವರ ಕರಬಸಪ್ಪನವರ ಇತರರು ಇದ್ದರು.