ಉಡುಪಿ: ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರ ನೇತೃತ್ವದ ವಿಶ್ವ ಗೀತಾ ಪರ್ಯಾಯದಂಗವಾಗಿ ನಡೆಯುತ್ತಿರುವ ಗೀತೋತ್ಸವದ ಪ್ರಧಾನ ಅಂಗವಾಗಿ ಡಿ. 11ರಂದು ನಡೆಯುವ ಗೀತಾ ಜಯಂತಿಯಂದು ಸ್ವಾಮಿನಾರಾಯಣ ಪಂಥಕ್ಕೆ ಸೇರಿದ ದಿಲ್ಲಿಯ ಸ್ವಾಮಿನಾರಾಯಣ ಸಂಶೋಧನ ಸಂಸ್ಥೆಯ ಮುಖ್ಯಸ್ಥ, ಬಹುಶ್ರುತ ವಿದ್ವಾಂಸ, ಮಹಾಮಹಿಮೋಪಾಧ್ಯಾಯ ಸಾಧು ಶ್ರೀ ಭದ್ರೇಶ್ ದಾಸ್ ಭಾಗವಹಿಸುವರು.
ಭದ್ರೇಶ್ ದಾಸ್ ಅವರು, ಖರಗ್ಪುರ ಐಐಟಿಯಲ್ಲಿ ಡಾಕ್ಟರ್ ಆಫ್ ಸೈನ್ಸ್, ವಿವಿಧ ಪ್ರತಿಷ್ಠಿತ ವಿ.ವಿ.ಗಳಿಂದ ಗೌರವ ಡಾಕ್ಟರೆಟ್ ಪದವಿಯನ್ನು ಹೊಂದಿದ್ದಾರೆ.
ರಥಬೀದಿಯಲ್ಲಿ ಅಂದು ಬೆಳಗ್ಗೆ 9ಕ್ಕೆ ನಡೆಯುವ ಶೋಭಾಯಾತ್ರೆಯನ್ನು ಮಹಾಭಾರತ ಧಾರಾವಾಹಿಯ ಕೃಷ್ಣ ಪಾತ್ರಧಾರಿ ನಿತೀಶ್ ಭಾರದ್ವಾಜ್ ಉದ್ಘಾಟಿಸುವರು.
ರಾಜಾಂಗಣದಲ್ಲಿ 9.30ಕ್ಕೆ ನಡೆಯುವ ಸಭೆಯಲ್ಲಿ ಶ್ರೀ ಭದ್ರೇಶ್ ದಾಸ್, ಪುತ್ತಿಗೆ ಮಠದ ಉಭಯ ಶ್ರೀಪಾದರು ಅನುಗ್ರಹ ಸಂದೇಶ ನೀಡುವರು. ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ರಾಜೇಂದ್ರ ಕುಮಾರ್ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆಗೊಳಿಸುವರು.
10.30ರಿಂದ 2.30ರ ವರೆಗೆ ಸಹಸ್ರಕಂಠ ಗೀತಾ ಪಾರಾಯಣ, ಅಪರಾಹ್ನ 3ಕ್ಕೆ ಗೀತಾ ನೃತ್ಯರೂಪ, ಸಂಜೆ ವಿ| ರಾಮನಾಥಾಚಾರ್ಯರಿಂದ ಪ್ರವಚನ, ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.