Advertisement
ಎಂದೂ ಕಂಡು ಕೇಳಿರದ ಗಡ್ಡೆಗಳು ಮೇಳದ ಲ್ಲಿದ್ದು, ಕಳೆ ಗಿಡ ಎಂದು ಕಿತ್ತು ಬಿಸಾಡುವ ಗಿಡಗಳು ಆರೋಗ್ಯಕಾರಿ ‘ಸೊಪ್ಪು’ಗಳಾಗಿ ಮೇಳೈಸಿವೆ. ಸಂಘ ನಿಕೇತನದ ಒಳಗೆ ಪ್ರವೇಶಿಸುತ್ತಿದ್ದಂತೆ ವಿವಿಧ ರೀತಿಯ ಗಡ್ಡೆಗಳು, ತರಕಾರಿಗಳ ಅಲಂಕಾರ ಆಕರ್ಷಿಸುತ್ತದೆ. ಮೇಳ ಉದ್ಘಾಟನೆಗೂ ಮೊದಲೇ ಜನಜಂಗುಳಿ ಕಂಡು ಬಂದಿದ್ದು, ಬೆಳಗ್ಗಿನಿಂದ ಸಂಜೆವರೆಗೆ ಸಾವಿರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡಿದರು.
ಸಾವಯವ ಕೃಷಿಕ ಗ್ರಾಹಕ ಬಳಗದ ಆಶ್ರಯದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿ ಮತ್ತು ಶ್ರೀ ಸರಸ್ವತಿ ಚಾರಿಟೆಬಲ್ ಟ್ರಸ್ಟ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಿರುವ ಈ ಅಂತಾರಾಜ್ಯ ಸೊಪ್ಪು ಮೇಳವನ್ನು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಉದ್ಘಾಟಿಸಿದರು. ಜನರು ವಿಷಯುಕ್ತ ಆಹಾರ ಸೇವಿಸಿ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆರೋಗ್ಯ ಪೂರ್ಣ ಬದುಕು ಬೇಕೆಂದರೆ ಮನೆಯ ಅಂಗಳದಲ್ಲೇ ತರಕಾರಿಗಳನ್ನು ಬೆಳೆಸಿ ವಿಷ ಮುಕ್ತ ಆಹಾರ ಸೇವಿಸಬೇಕು ಎಂದರು. ಕೇಶವ ಸ್ಮೃತಿ ಸಂವರ್ಧನ ಸಮಿತಿ ಅಧ್ಯಕ್ಷ ಡಾ| ವಾಮನ ಶೆಣೈ ಧ್ವಜಾರೋಹಣ ಗೈದರು. ದ.ಕ. ಸಹಕಾರಿ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ, ಅಡಿಕೆ ಪತ್ರಿಕೆ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ, ಸರಸ್ವತಿ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಸತೀಶ್ಚಂದ್ರ ಎಸ್.ಆರ್., ಶಾರದಾ ವಿದ್ಯಾಸಮೂಹದ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್.ಎ. ಪ್ರಭಾಕರ ಶರ್ಮ, ಬಳಗದ ನಿಕಟಪೂರ್ವ ಅಧ್ಯಕ್ಷ ಅಡ್ಡೂರು ಕೃಷ್ಣ ರಾವ್ ಉಪಸ್ಥಿತರಿದ್ದರು. ಸಾವಯವ ಕೃಷಿಕ ಗ್ರಾಹಕ ಬಳಗದ ಅಧ್ಯಕ್ಷ ಜಿ.ಆರ್. ಪ್ರಸಾದ್ ಸ್ವಾಗತಿಸಿದರು. ಜಯಶ್ರೀ ಪ್ರವೀಣ್, ಭರತ್‌ರಾಜ್ ಸೊರಕೆ ಕಾರ್ಯಕ್ರಮ ನಿರೂಪಿಸಿದರು.
Related Articles
Advertisement
ಟ್ಯೂಬರ್‌ಮ್ಯಾನ್ ಶಾಜಿ ವಿಶೇಷ ಆಕರ್ಷಣೆಟ್ಯೂಬರ್ ಮ್ಯಾನ್ ಎಂದೆ ಹೆಸರು ಪಡೆದ ಕೇರಳದ ವಯನಾಡಿನ ಕೇದಾರಂ ಫಾರ್ಮ್ನ ಶಾಜಿ ಎನ್.ಎಂ. ಅವರು ಬಗೆ ಬಗೆಯ ಗಡ್ಡೆ ಗೆಣಸುಗಳೊಂದಿಗೆ ಮೇಳದಲ್ಲಿ ಭಾಗವಹಿಸಿದ್ದಾರೆ. ವಯನಾಡಿನ ಆದಿವಾಸಿಗಳ ನೆರವಿನಿಂದ ಮೂಲಕ 300 ಬಗೆಯ ಗಡ್ಡೆ ಗೆಣಸುಗಳ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಪಿರಿಯಾಪಟ್ಟಣದ ಕಾಡು ಮದ್ದು ಸೊಪ್ಪು
ಮೈಸೂರಿನ ಪಿರಿಯಾಪಟ್ಟಣದ ಗಂಗಮ್ಮ ಮತ್ತು ಜಾನಕಮ್ಮ ಅವರು ವಿವಿಧ ರೀತಿಯ ಕಾಡುಮದ್ದು ಸೊಪ್ಪುಗಳೊಂದಿಗೆ ಮೇಳದಲ್ಲಿ ಪಾಲ್ಗೊಂಡಿದ್ದಾರೆ. ಲಕ್ಕಿಸೊಪ್ಪು, ನರ್ವೀಸಾ, ಗಾಳಿ ಸೊಪ್ಪು, ಹುಚ್ಚು ಗಾಳಿ ಸೊಪ್ಪು ಸಹಿತ ವಿವಿಧ ರೀತಿಯ ಕಾಡು ಸೊಪ್ಪುಗಳನ್ನು ತಂದಿರುವ ಅವರು, ವಿವಿಧ ಆರೋಗ್ಯ ಸಮಸ್ಯೆಗಳ ನಿವಾರಣೆಗೆ ಇದು ರಾಮಬಾಣ ಎನ್ನುತ್ತಾರೆ ಅವರು. ಭಾರಿ ಗಾತ್ರದ ಗಡ್ಡೆಗಳ ಕೃಷಿಕ ರೆಜಿ ಜೋಸೆಫ್
ಕೇರಳದ ಪತ್ತನಂತಿಟ್ಟ ಜಿಲ್ಲೆಯ ಇನ್ನೋರ್ವ ಗಡ್ಡೆ ಕೃಷಿಕ ಗಿನ್ನೆಸ್ ದಾಖಲೆ ಮಾಡಿರುವ ರೆಜಿ ಜೋಸೆಫ್ ಅವರು ಪಾತಾಳ ಕಾಚಿಲ, ಆನೆ ಸೊಂಡಿಲಿನಂತೆ ನೆಲದಡಿ ಬೆಳೆಯುವ ಆನೆವಾಲ ಗಡ್ಡೆ, 50 ಕೆ.ಜಿ.ಗೂ ಅಧಿಕ ತೂಕದ ಸುವರ್ಣ ಗಡ್ಡೆಗಳು, ಮರಗೆಣಸು ಮೊದಲಾದವುಗಳನ್ನು ಮಣ್ಣು ಸಹಿತ ನೆಲದಡಿಯಿಂದ ಅಗೆದು ತಂದು ಮೇಳದಲ್ಲಿ ಇಟ್ಟಿದ್ದಾರೆ. ಸುಮಾರು 24 ವರ್ಷ ಗಳಿಂದ 4 ಎಕರೆ ಪ್ರದೇಶದಲ್ಲಿ ಗಡ್ಡೆ ಗೆಣಸು ಕೃಷಿ ಯಲ್ಲಿ ತೊಡಗಿಸಿಕೊಂಡಿರುವುದಾಗಿ ಅವರು ತಿಳಿಸಿದರು. ಜೋಯಿಡಾದ ಮುಡ್ಲಿ ಗಡ್ಡೆ
ಮುಂಬಯಿಯ ಸೂಪರ್ ಮಾರ್ಕೆಟ್‌ಗಳಲ್ಲಿ ಅತೀ ಹೆಚ್ಚು ಬೇಡಿಕೆಯಿರುವ ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಮುಡ್ಲಿ ಗಡ್ಡೆಯೂ ಮೇಳದಲ್ಲಿದ್ದು, ಜನರಿಂದ ಉತ್ತಮ ಬೇಡಿಕೆ ವ್ಯಕ್ತವಾಗಿದೆ. ಕುಣುಬಿ ಜನಾಂಗದವರು ಪ್ರದರ್ಶಿಸುತ್ತಿದ್ದಾರೆ. ಉಳಿದಂತೆ ಮಲಬಾರಿ ಸುವರ್ಣಗಡ್ಡೆ, ವಿವಿಧ ಬಣ್ಣಗಳ ಹೆಗ್ಗೆಣಸು, ಕಾಡು ಕೆಸುವು ಗಡ್ಡೆ, ವಿವಿಧ ಬಗೆಯ ಶುಂಠಿಗಳು, ಆಲೂಗಡ್ಡೆ, ಅರಶಿನ ಸೇರಿದಂತೆ ವಿವಿಧ ರೀತಿಯ ನಾಡು ಹಾಗೂ ಕಾಡು ಗಡ್ಡೆಗಳು ಪ್ರದರ್ಶನದಲ್ಲಿವೆ. ಮೌಲ್ಯವರ್ಧಿತ ಉತ್ಪನ್ನಗಳು
ಗಡ್ಡೆ-ಸೊಪ್ಪುಗಳಿಂದ ಮಾಡಿದ ಮೌಲ್ಯ ವರ್ಧಿತ ಉತ್ಪನ್ನಗಳೂ ಮೇಳದಲ್ಲಿವೆ. ಗಡ್ಡೆಗಳ ಚಿಪ್ಸ್‌ಗಳು, ಐಸ್‌ಕ್ರೀಂ, ಹೋಳಿಗೆ, ಸೊಪ್ಪುಗಳಿಂದ ಮಾಡಿದ ಚಹಾ, ಚಟ್ನಿಪುಡಿಗಳು, ಸೂಪ್‌ಗ್ಳು, ತಿಂಡಿಗಳೂ ಗ್ರಾಹಕರನ್ನು ಆಕರ್ಷಿಸಿವೆ.