ಬೆಂಗಳೂರು: ವಾಲ್ಮೀಕಿಯ ರಾಮಾಯಣ, ವ್ಯಾಸನ ಮಹಾಭಾರತದಂತೆಯೇ ಆಚಾರ್ಯ ಜಿನಸೇನ ಮತ್ತು ಗುಣಭದ್ರರು ರಚಿಸಿದ “ಮಹಾಪುರಾಣ’ ಕೂಡ ದೇಶದ ಶ್ರೇಷ್ಠ ಗ್ರಂಥವಾಗಿದೆ ಎಂದು ನಾಡೋಜ ಡಾ.ಹಂಪ ನಾಗರಾಜಯ್ಯ ವಿಶ್ಲೇಷಿಸಿದರು.
ನಗರದ ಕರ್ನಾಟಕ ಜೈನ ಭವನದಲ್ಲಿ ಶನಿವಾರ ಕರ್ನಾಟಕ ಜೈನ ಅಸೋಸಿಯೇಷನ್ ಹಮ್ಮಿಕೊಂಡಿದ್ದ “ಮಹಾಪುರಾಣ’ ಗ್ರಂಥದ ನಾಲ್ಕನೇ ಆವೃತ್ತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಲ್ಮೀಕಿಯ ರಾಮಾಯಣ ಮತ್ತು ವ್ಯಾಸನ ಮಹಾಭಾರತ ದೇಶದ ಎರಡು ಮಹಾ ಗ್ರಂಥಗಳು. ಇವುಗಳಷ್ಟೇ ಶ್ರೇಷ್ಠ ಗ್ರಂಥ ಮಹಾಪುರಾಣ. ಅದನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡುವುದಕ್ಕಿಂತ ನಿತ್ಯ ಪಾರಾಯಣ
ಮಾಡುವುದೇ ಆ ಗ್ರಂಥಕ್ಕೆ ನಾವು ಕೊಡುವ ದೊಡ್ಡ ಗೌರವ ಎಂದು ತಿಳಿಸಿದರು.
ಮುಸ್ಲಿಮರಿಗೆ ಕುರಾನ್, ಕ್ರಿಶ್ಚಿಯನ್ನರಿಗೆ ಬೈಬಲ್ ಇದ್ದಂತೆ ಜೈನರಿಗೆ ತತ್ವರ್ಥಸೂತ್ರ ಮತ್ತು ಮಹಾಪುರಾಣ ಗ್ರಂಥಗಳಿವೆ ಡಾ.ಹಂಪ ನಾಗರಾಜಯ್ಯ, ಮೂಲತಃ ಪ್ರಾಕೃತ ಭಾಷೆಯಲ್ಲಿದ್ದ ಗ್ರಂಥವನ್ನು ಆಚಾರ್ಯ ಜಿನಸೇನ ಮತ್ತು ಗುಣಭದ್ರರು ಸಂಸ್ಕೃತಕ್ಕೆ ತಂದರು. ಆಮೇಲೆ ಪಂಡಿತರತ್ನ ಎ.ಶಾಂತಿರಾಜ ಶಾಸ್ತ್ರೀ ಕನ್ನಡದಲ್ಲಿ ಮರುಸೃಷ್ಟಿ ಮಾಡಿದರು ಎಂದು ಹೇಳಿದರು.
ಪರಿಷತ್ತಿನಿಂದ 10 ಪ್ರತಿ ಖರೀದಿ: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ್ ಮಾತನಾಡಿ, ಕನ್ನಡದ ಬುನಾದಿಯೇ ಜೈನ ಕಾವ್ಯ. ಶತಮಾನದ ಹಿಂದೆಯೇ ಎರ್ತೂರು ಶಾಂತಿರಾಜ ಶಾಸ್ತ್ರೀಗಳು ಹೊರತಂದ ಮಹಾಪುರಾಣ ಕನ್ನಡಿಗರ ಜ್ಞಾನದ ಬೆಳಕಾಗಿ ಬೆಳಗುತ್ತಿದೆ. ಪರಿಷತ್ತಿನ ವತಿಯಿಂದ ಮಹಾಪುರಾಣದ 10 ಪ್ರತಿಗಳನ್ನು ಖರೀದಿಸಲಾಗುವುದು ಎಂದು ಹೇಳಿದರು. ಎನ್.ಆರ್.ಪುರ ಜೈನ ಮಠದ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಈ ಹಿಂದೆ ಅನೇಕರು ಮಹಾಪುರಾಣವನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡಿದ್ದರು. ಆದರೆ, ಅವರಿಗೆಲ್ಲಾ
ಅನೇಕ ಅಡ್ಡಿ-ಆತಂಕಗಳು ಎದುರಾಗಿದ್ದವು.
ಸಮಾಜದಲ್ಲಿ ಒಳ್ಳೆಯವರ ಕಾಲೆಳೆಯುವವರೇ ಹೆಚ್ಚು. ಸಮಾಜದ ಸಾಧಕರು ಮರಣ ಹೊಂದಿದ ನಂತರ ಅವರ ಮೂರ್ತಿಗಳನ್ನು ವೃತ್ತಗಳಲ್ಲಿ ಪ್ರತಿಷ್ಠಾಪಿಸಿ ಪೂಜೆ ಮಾಡುವುದಲ್ಲ; ಅವರ ಜೀವಿತಾವಧಿ ಯಲ್ಲೇ ಗುರುತಿಸಿ, ಸಾಧನೆಗೆ ಪ್ರೋತ್ಸಾಹ ನೀಡಬೇಕು ಎಂದು ಸೂಚ್ಯವಾಗಿ
ಹೇಳಿದರು.
ಹೊಂಬುಜ ಜೈನಮಠದ ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಹಿರಿಯ ಪತ್ರಕರ್ತ ಪದ್ಮರಾಜ ದಂಡಾವತಿ ಮಾತನಾಡಿದರು. ಪಂಡಿತರತ್ನ ಎ. ಶಾಂತಿರಾಜಶಾಸ್ತ್ರೀ ಟ್ರಸ್ಟ್ ಧರ್ಮದರ್ಶಿ ಎಸ್. ಜಿತೇಂದ್ರ ಕುಮಾರ್, ಎಂ.ಜೆ.ಇಂದ್ರಕುಮಾರ್, ಎ.ಸಿ.ವಿದ್ಯಾಧರ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.