ಜಗಳೂರು: ಬೇಸಿಗೆ ಶಿಬಿರಕ್ಕೆ ದಾಖಲಾಗಿದ್ದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಬಳಸಿಕೊಂಡ ಇಲ್ಲಿನ ಆಕ್ಸಸ್ ಅಕಾಡೆಮಿ ಅರಣ್ಯದಲ್ಲಿ ವಿವಿಧ ತಳಿಯ ಬೀಜ ಬಿತ್ತುವ ಮೂಲಕ ಪರಿಸರ ಜಾಗೃತಿ ಮೂಡಿಸಿತು.
ಪಟ್ಟಣಕ್ಕೆ ಹೊಂದಿಕೊಡಂತಿರುವ ಜಗಳೂರು ಮನ್ನಾ ಜಂಗಲ್ ನಲ್ಲಿ ಭಾಗವಹಿಸಿದ್ದ 150ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿ ಸಮೂಹ ಬೀಜದ ಉಂಡೆಗಳನ್ನು ಅಲ್ಲಲ್ಲಿ ನೆಟ್ಟರು. ಬೀಜ ಹೂರುವ ಈ ಮಹಾ ಕಾರ್ಯಕ್ಕೆ 10 ಮಂದಿ ವಿದ್ಯಾರ್ಥಿಗಳಿಗೊಂದು ಗುಂಪು ರಚಿಸಲಾಗಿತ್ತು.
ಕೆಲವರು ಹಾರೆ, ಗುದ್ದಲಿ, ಕುಡುಗೋಲು ಹಿಡಿದು ಸಣ್ಣ-ಸಣ್ಣ ಗುಂಡಿಗಳನ್ನು ಅಗೆದು ಮುಂದೆ ಮುಂದೆ ಸಾಗುತ್ತಿದ್ದಂತೆ ಇನ್ನು ಕೆಲವರು, ನಿರ್ಮಿಸಲಾದ ಗುಂಡಿಯಲ್ಲಿ ಬೀಜದ ಉಂಡೆಗಳನ್ನು ಹಾಕಿ ಮುಚ್ಚುತ್ತಿದ್ದರು.
ಸುಮಾರು 25 ಹೆಕ್ಟೇರ್ ಪ್ರದೇಶದ ವ್ಯಾಪ್ತಿಯ ಈ ಅರಣ್ಯದಲ್ಲಿ ಟ್ರೀ ಪಾರ್ಕ್ ಕೂಡಾ ನಿರ್ಮಾಣವಾಗುತ್ತಿದ್ದು, ಆಕ್ಸಸ್ ಅಕಾಡೆಮಿ ಒಂದು ಲಕ್ಷ ಬೀಜದ ಉಂಡೆ ಹಾಕುವ ಗುರಿ ಹೊಂದಿತ್ತು. ಕಳೆದ ವಾರದಿಂದ ಪೂರ್ವಭಾವಿಯಾಗಿ ವಿವಿಧ ಜಾತಿಯ ಬೀಜಗಳನ್ನು ಶೇಖರಿಸಿ ಮಣ್ಣಿನಲ್ಲಿಟ್ಟು ಉಂಡೆ ತಯಾರಿಸಿ ಒಣಗಿಸಿತ್ತು.
ಅಂತೆಯೇ ಇಂದು ಅರಣ್ಯ ಪ್ರದೇಶದಲ್ಲಿ ಬೀಜದ ಉಂಡೆ ಹೂಳುವ ಕಾರ್ಯ ನಡೆಸಿತು. ಬೀಜದ ಉಂಡೆಗಳ ಮೂಲಕ ಅರಣ್ಯೀಕರಣ ಬಹು ಸುಲಭ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ಭೂಮಿಯಲ್ಲಿ ಬೀಜ ಬಿತ್ತನೆ ಮಾಡಬಹುದಾಗಿದೆ.
ಹಲಸು, ಬೇವು, ಹುಣಸೆ ಸೇರಿದಂತೆ ವಿವಿಧ ಜಾತಿಯ ಬೀಜಗಳನ್ನು ಆಯ್ಕೆ ಮಾಡಿಕೊಂಡು ಒಂದೊಂದು ಬೀಜವನ್ನು ಮಣ್ಣಿನಲ್ಲಿಟ್ಟು ಉಂಡೆ ತಯಾರಿಸಿ ಒಣಗಿಸಿ ನಂತರ ಅರಣ್ಯದಲ್ಲಿ ಹೂಳುವ ಮೂಲಕ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆಕ್ಸಸ್ ಅಕಾಡೆಮಿಯ ಮುಖ್ಯಸ್ಥ ಪ್ರಶಾಂತಕುಮಾರ್ ತಿಳಿಸಿದ್ದಾರೆ.