ಚಿಂಚೋಳಿ: ಪ್ರತಿಯೊಬ್ಬ ಕೂಲಿಕಾರರು ಉದ್ಯೋಗ ಕಾರ್ಡ್, ಬ್ಯಾಂಕ್ ಖಾತೆ, ಆಧಾರ್ ಸಂಖ್ಯೆಯೊಂದಿಗೆ ಪಡಿತರ ಚೀಟಿ ಕಡ್ಡಾಯವಾಗಿ ಹೊಂದಿರಬೇಕು. ಪ್ರತಿಯೊಂದು ಕುಟುಂಬಕ್ಕೆ ಉದ್ಯೋಗ ಖಾತ್ರಿ ಯೋಜನೆ ಅಡಿ 100 ದಿನಗಳ ಕೆಲಸ ನೀಡಲಾಗುತ್ತಿದೆ ಎಂದು ಜಿಪಂ ಸಿಇಒ ಅನಿರುದ್ದ ಶ್ರವಣ ಹೇಳಿದರು.
ತಾಲೂಕಿನ ಕುಂಚಾವರಂ ಗ್ರಾಪಂ ಆವರಣದಲ್ಲಿ ಗುರುವಾರ ಕುಂಚಾವರಂನ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್, ಗ್ರಾಪಂ ಆಶ್ರಯದಲ್ಲಿ ನಡೆದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಬ್ಯಾಂಕ್ ಖಾತೆ ತೆರೆಯುವ ಅಭಿಯಾನ, ಪಿಂಚಣಿ ಮತ್ತು ಆಹಾರ ಅದಾಲತ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪ್ರತಿ ದಿನಕ್ಕೆ 244 ರೂ. ನೀಡಲಾಗುತ್ತಿದೆ. ಕುಂಚಾವರಂ ತೆಲಂಗಾಣ ರಾಜ್ಯದ ಗಡಿಯಲ್ಲಿ ಇರುವುದರಿಂದ ಇಲ್ಲಿ ತೆಲಗು ಭಾಷೆ ಇದೆ. ಭಾಷೆ ತೊಂದರೆ ಮತ್ತು ದೂರವಾಣಿ ಸಂಪರ್ಕ ಸಮಸ್ಯೆ ಇರುವುದರಿಂದ ಸ್ಥಳದಲ್ಲಿಯೇ ಸಮಸ್ಯೆ ಇತ್ಯರ್ಥಗೊಳಿಸಲು ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ತಹಶೀಲ್ದಾರ ಪ್ರಕಾಶ ಕುದುರೆ ಮಾತನಾಡಿ, ಕುಂಚಾವರಂ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ವೃದ್ಧರಿಗೆ ಸರಕಾರದಿಂದ ಪಿಂಚಣಿ ಸರಿಯಾಗಿ ದೊರೆಯುತ್ತಿಲ್ಲ. ಪಡಿತರ ಚೀಟಿ ಸಮಸ್ಯೆ ಇರುವುದರಿಂದ ಆನ್‌ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಆಧಾರ್ ಕಾರ್ಡು, ಪಡಿತರ ಚೀಟಿ ಜೊತೆಗೆ ಬ್ಯಾಂಕ್ ಖಾತೆ ಹಾಗೂ ಮತದಾರರ ಗುರುತಿನ ಚೀಟಿ ಹೊಂದಿದ್ದರೆ ಸರಕಾರ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಿದೆ.
ಇದಕ್ಕಾಗಿ ಕಂದಾಯ ಇಲಾಖೆ ನೆಮ್ಮದಿ ಕೇಂದ್ರದಲ್ಲಿ ಹಾಗೂ ತಹಶೀಲ್ದಾರ ಕಚೇರಿಯಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು. ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ್ ಉದ್ಯೋಗ ಖಾತ್ರಿ ಯೋಜನೆ ಕುರಿತು ಮಾತನಾಡಿದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಕುಮಾರಸ್ವಾಮಿ, ಪದ್ಮಾಜಿ ಮಾತನಾಡಿದರು.
ತಾಪಂ ಅಧ್ಯಕ್ಷೆ ರೇಣುಕಾ ಚವ್ಹಾಣ, ಗ್ರಾಪಂ ಅಧ್ಯಕ್ಷ ಗೋಪಾಲ ಬಿ., ತಾಪಂ ಸದಸ್ಯ ಚಿರಂಜೀವಿ ಶಿವರಾಂಪುರ, ನರಸಿಂಹಲೂ ಕುಂಬಾರ, ಆಹಾರ ನಿರೀಕ್ಷಕ ಮಂಜುನಾಥ ಕಲಬುರಗಿ, ಮಲ್ಲಿನಾಥ ಇನ್ನಿತರರಿದ್ದರು. ತಾಲೂಕು ಉದ್ಯೋಗ ಖಾತ್ರಿ ನೋಡಲ್ ಅಧಿಕಾರಿ ಸಂತೋಷಕುಮಾರ ಯಾಚೆ ಸ್ವಾಗತಿಸಿದರು. ಪಿಡಿಒ ತುಕ್ಕಪ್ಪ ಶಾದೀಪುರ ನಿರೂಪಿಸಿದರು. ಶ್ರೀಕಾಂತ ಪೋಲಕಪಳ್ಳಿ ವಂದಿಸಿದರು. ಇದೇ ಸಂದರ್ಭದಲ್ಲಿ ಪಿಂಚಣಿ ಆದೇಶ ಪತ್ರವನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಯಿತು.