ಯಾದಗಿರಿ: ಕಳೆದ ಐದು ವರ್ಷದಲ್ಲಿ ಮತಕ್ಷೇತ್ರದ ಜನತೆಗೆ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಲಾಭ ತಲುಪಿಸುವ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಲು ಪ್ರಯತ್ನಿಸಿದ್ದೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ ಹೇಳಿದರು.
ಗುರುಮಠಕಲ್ ಮತಕ್ಷೇತ್ರದ ಕಟಗಿ ಶಹಾಪುರ ಗ್ರಾಮದಲ್ಲಿ ಗುರುವಾರ ಬಿಜೆಪಿ ಮುಖಂಡ ಶಂಭುರಡ್ಡಿ ಪಾಟೀಲ ಹಾಗೂ ಬೆಂಬಲಿಗರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿ, ರಾಜ್ಯ ಸರ್ಕಾರ ಪ್ರಮುಖವಾಗಿ ಅನ್ನಭಾಗ್ಯ ಯೋಜನೆ ಜಾರಿಗೆ ಮೂಲಕ ಬಡವರ ಹಸಿವನ್ನು ದೂರ ಮಾಡಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲಾ ವರ್ಗದ ಜನರಿಗೆ ಅನುಕೂಲ ಆಗುವ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಬದಲಾವಣೆಗೆ ಶ್ರಮಿಸಿದ್ದಾರೆ. ಆ ಯೋಜನೆಗಳ ಲಾಭ ಪ್ರತಿಯೊಂದು ಕುಟುಂಬಕ್ಕೆ ತಲುಪಿದೆ. ಪರಿಣಾಮ ಕಾಂಗ್ರೆಸ್ ಅಲೆ ಎಲ್ಲಾ ಭಾಗದಲ್ಲಿ ಕಂಡು ಬರುತ್ತಿದೆ ಎಂದು ತಿಳಿಸಿದರು.
ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಿಪಾಲರಡ್ಡಿ ಪಾಟೀಲ ಹತ್ತಿಕುಣಿ ಮಾತನಾಡಿ, ಗುರುಮಠಕಲ್ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ಪ್ರಣಾಳಿಕೆಯಲ್ಲಿ ನೀಡಿದ 165 ಭರವಸೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದೆ. ಮತದಾರರು ಈ ಬಾರಿ ಚಿಂಚನಸೂರ ಅವರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಪಕ್ಷ ಬಲ ಪಡಿಸಬೇಕೆಂದು ಹೇಳಿದರು.
ಶಂಭುರಡ್ಡಿ ಪಾಟೀಲ ಮಾತನಾಡಿ, ನಾನು ಕಳೆದು 30 ವರ್ಷಗಳಿಂದ ಜನತಾ ಪರಿವಾರ ಪಕ್ಷದಲ್ಲಿದ್ದೆ, ದುರಾದೃಷ್ಠ ಪಕ್ಷದ ನಾಯಕರಿಗೆ ಯಶಸ್ಸು ಹಾಗೂ ಅಧಿಕಾರ ಸಿಗಲಿಲ್ಲ, ಈ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಸೇರ್ಪಡೆಯಾಗಿದ್ದೇನೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಜಿಪಂ ಸದಸ್ಯ ಶಿವಲಿಂಗಪ್ಪ ಪುಟಗಿ, ತಾಪಂ ಅಧ್ಯಕ್ಷ ಬಾಷು ರಾಠೊಡ್, ಎಪಿಎಂಸಿ ಅಧ್ಯಕ್ಷ ಚಂದ್ರಾರಡ್ಡಿ ಬಂದಳ್ಳಿ, ವೀರಭದ್ರಪ್ಪ ಯಡ್ಡಳ್ಳಿ, ಶರಣಗೌಡ ಕಟಗಿ ಶಹಾಪುರ, ನಿಂಗಪ್ಪ ಹೊನಗೇರಾ, ಭೀಮರಡ್ಡಿ ರಾಂಪೂರಹಳ್ಳಿ, ನಿರಂಜನ ಯರಗೋಳ, ಪರಶುರಾಮ ಚವ್ಹಾಣ, ಹೊನ್ನಪ್ಪ ನಾಟೇಕಾರ್, ಮಹಿಪಾಲರಡ್ಡಿ ಪಾಟೀಲ ಕೆ, ಸಾಬಣ್ಣ ನಾಟೇಕಾರ್, ಮಕೂºಲ್ ಪಟೇಲ್ ಹೊಸಳ್ಳಿ, ಸಾಬಣ್ಣ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.