Advertisement

ಐವಾ ಎಸ್‍ಬಿ ಎಕ್ಸ್ 350ಎ ಬ್ಲೂಟೂತ್‍ ಸ್ಪೀಕರ್ ಹೇಗಿದೆ?

05:43 PM Feb 18, 2022 | Team Udayavani |

90 ರ ದಶಕದಲ್ಲಿ ಹಿಂದಿನ ಡೂಮ್‍ ಮಾದರಿಯ ಟಿವಿ ಗಳು ಹಾಗೂ ಆಡಿಯೋ ಪ್ಲೇಯರ್, ಸ್ಪೀಕರ್ ಗಳಲ್ಲಿ ಜಪಾನ್‍ ಮೂಲದ ಐವಾ (AIWA) ಕಂಪೆನಿ ಪ್ರಸಿದ್ಧವಾಗಿತ್ತು. ಆಗ ಈ ಕಂಪೆನಿ ಭಾರತದಲ್ಲಿ ಕಡಿಮೆ ಬೆಲೆಗೆ ಹೆಚ್ಚಿನ ಫೀಚರ್‍ ಗಳುಳ್ಳ ಟಿವಿಗಳನ್ನು ಹೊರತಂದು ಅನೇಕ ಬ್ರಾಂಡ್‍ ಗಳಿಗೆ ತೀವ್ರ ಪೈಪೋಟಿ ನೀಡಿತ್ತು.

Advertisement

ಹಳೆ ಮಾದರಿಯ ಟಿವಿಗಳು ಕ್ರಮೇಣ ಮರೆಯಾದ ನಂತರ ಐವಾ ಭಾರತದಲ್ಲಿ ಹೆಚ್ಚು ಪ್ರಚಾರದಲ್ಲಿರಲಿಲ್ಲ. ಆದರೆ ಈಗ ಸ್ಮಾರ್ಟ್ ಸ್ಪೀಕರ್‍ ಗಳು, ವೈರ್‍ ಲೆಸ್‍ ಇಯರ್‍ ಫೋನ್‍, ಇಯರ್‍ ಬಡ್‍ಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತದ ಮಾರುಕಟ್ಟೆಯಲ್ಲಿ ಮತ್ತೆ ತನ್ನ ಅಸ್ತಿತ್ವ ಪ್ರದರ್ಶಿಸುತ್ತಿದೆ.

ಇತ್ತೀಚಿಗೆ, ಐವಾ ತನ್ನ ಹೊಸ ಶ್ರೇಣಿಯ ಐಷಾರಾಮಿ ಅಕಾಸ್ಟಿಕ್ಸ್, ಹೈ-ಫೈ ಸ್ಪೀಕರ್ ಶ್ರೇಣಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಪ್ರೀಮಿಯಂ MI-X ಸರಣಿ ಮತ್ತು SB-X ಸರಣಿಯಲ್ಲಿ ಹೊಸ ಸ್ಪೀಕರ್‍ ಗಳನ್ನು ಹೊರತಂದಿದೆ. ಎಲ್ಲಾ ಮಾದರಿಗಳು ಪೋರ್ಟಬಲ್ ಆಗಿದ್ದು, ಬ್ಯಾಟರಿ ರೀಚಾರ್ಜ್ ಮಾಡಿಕೊಂಡು ಒಳಾಂಗಣ ಮತ್ತು ಹೊರಾಂಗಣದಲ್ಲಿ ಬಳಸಬಹುದಾಗಿದೆ.

ಈ ಮಾದರಿಗಳಲ್ಲಿ ಒಂದು ಸ್ಪೀಕರ್‍ ಎಸ್‍ಬಿ ಎಕ್ಸ್350 ಎ. ಇದರ ದರ 19,990 ರೂ. ಇದ್ದು, ಅಮೆಜಾನ್‍. ಇನ್‍ ನಲ್ಲಿ 15,900 ರೂ.ಗಳಿಗೆ ಲಭ್ಯವಿದೆ. ಇದು ಪುಟ್ಟದೂ ಅಲ್ಲ ಅಥವಾ ತೀರಾ ದೊಡ್ಡದೂ ಅಲ್ಲದ ಮಧ್ಯಮ ಗಾತ್ರದ ಬ್ಲೂಟೂತ್‍ ಸ್ಪೀಕರ್‍ ಆಗಿದ್ದು, 1122 ಗ್ರಾಂ ತೂಕ ಹೊಂದಿದೆ. ಸಂಪೂರ್ಣ ಲೋಹದಲ್ಲಿ ಮಾಡಲ್ಪಟ್ಟಿದೆ. ಕಪ್ಪು ಮತ್ತು ಬೂದು ಬಣ್ಣದಲ್ಲಿ ದೊರಕುತ್ತದೆ. 40 ವಾಟ್ಸ್ ನ ಆಡಿಯೋ ಔಟ್‍ ಪುಟ್‍ ಶಕ್ತಿ ಹೊಂದಿದ್ದು, ಸ್ಪೀಕರಿನ ಎಡ ಮತ್ತು ಬಲ ಬದಿಗಳಲ್ಲಿ ಬಾಸ್‍ ರೇಡಿಯೇಟರ್ಸ್‍ ಹೊಂದಿದೆ. ಸ್ಪೀಕರ್‍ ನ ಮೇಲ್ಭಾಗದಲ್ಲಿ ಆನ್‍ ಆಫ್‍, ಫಾರ್ವಡ್‍, ರಿವರ್ಸ್ ಧ್ವನಿ ಹೆಚ್ಚಿಸುವ ಬಟನ್‍ಗಳಿವೆ. ಅದರ ಪಕ್ಕದಲ್ಲೇ ಬ್ಯಾಟರಿ ಎಷ್ಟಿದೆ ಎಂದು ಸೂಚಿಸುವ ಚುಕ್ಕೆ ಗಾತ್ರದ ಎಲ್‍ ಇಡಿ ಲೈಟ್‍ಗಳಿವೆ. ಈ ಸ್ಪೀಕರನ್ನು ನಿಮ್ಮ ಮೊಬೈಲ್‍ ಫೋನ್‍ ಅಥವಾ ಸ್ಮಾರ್ಟ್ ಟಿವಿಗೆ ಬ್ಲೂಟೂತ್‍, ಯುಎಸ್‍ ಬಿ ಅಥವಾ ಆಕ್ಸ್ ಇನ್‍ ಕೇಬಲ್‍ ಮೂಲಕ ಕನೆಕ್ಟ್ ಮಾಡಿಕೊಳ್ಳಬಹುದು.

Advertisement

ಸಾಮಾನ್ಯವಾಗಿ 2 ರಿಂದ 3 ಸಾವಿರ ರೂ.ಗೆ ದೊರಕುವ ಪೋರ್ಟ್ ಬಲ್‍ ಬ್ಲೂಟೂತ್‍ ಸ್ಪೀಕರ್‍ ಗಳು 5 ರಿಂದ 10ವ್ಯಾಟ್ಸ್ ಆಡಿಯೋ ಔಟ್‍ ಪುಟ್‍ ಹೊಂದಿರುತ್ತವೆ. ಅದರಲ್ಲಿ ಹಾಡು ಸಂಗೀತ ಕೇಳಿದ್ದವರಿಗೆ 40 ವ್ಯಾಟ್ಸ್ ನ ಆಡಿಯೋ ಯಾವ ಪ್ರಮಾಣದಲ್ಲಿರುತ್ತದೆ ಎಂದು ಅಂದಾಜಾಗಬಹುದು.

ನಮ್ಮ ಮೊಬೈಲ್‍ ಫೋನ್‍ ನಲ್ಲಿರುವ ವಿಂಕ್‍, ಗಾನಾ, ಇತ್ಯಾದಿ ಆಪ್ ಗಳಲ್ಲಿರುವ ಹಾಡುಗಳನ್ನು ಅಥವಾ ಸಂಗೀತವನ್ನು ಇದರಲ್ಲಿ ಕೇಳಿದಾಗ ಆಗುವ ಅನುಭವವೇ ಬೇರೆ. ತುಂಬಾ ರಿಚ್‍ ಆದ ಬಾಸ್‍ ಮತ್ತು ಟ್ರಬಲ್‍ ಗಳು ಮನೆಯೊಗಳಗೆ ದೊಡ್ಡ ಸ್ಪೀಕರ್‍ ನಲ್ಲಿ ಕೇಳಿದ ಅನುಭವ ನೀಡುತ್ತದೆ. ರೇಡಿಯೋ ಆಪ್‍ ಗಳಲ್ಲಿ ಬರುವ ಎಫ್‍ ಎಂ ರೇನ್‍ ಬೋ, ವಿವಿಧ ಭಾರತಿ, ರೇಡಿಯೋ ಸಿಟಿ ಇತ್ಯಾದಿ ಸ್ಟೇಷನ್‍ ಗಳನ್ನು ಹಾಕಿ ನಮ್ಮ ಕೆಲಸಗಳನ್ನು ಮಾಡುತ್ತಾ ಇದರಲ್ಲಿ ಹಾಡುಗಳನ್ನು ಕೇಳುವ ಅನುಭವ ವಿಭಿನ್ನವಾಗಿರುತ್ತದೆ.
ಕ್ವಾಲ್‍ ಕಾಂ ಎಪಿಟಿ ಎಕ್ಸ್ ಎಚ್‍ ಡಿ ಸೌಂಡ್‍ ಗುಣಮಟ್ಟ ಹೊಂದಿರುವುದರಿಂದ ಹೈ ರೆಸ್ಯೂಲೇಷನ್‍ ಆಡಿಯೋ ದಿಂದಾಗಿ ಧ್ವನಿ ಸುಸ್ಪಷ್ಟವಾಗಿ ಕೇಳಿ ಬರುತ್ತದೆ. ಸರೌಂಡ್‍ ಸೌಂಡ್‍ ಸೌಲಭ್ಯ ಸಹ ಇದೆ. ಇದರಲ್ಲಿ ಅಂತರ್ಗತವಾದ ಮೈಕ್‍ ಸಹ ಇದ್ದು, ನಮ್ಮ ಫೋನಿಗೆ ಸಂಪರ್ಕಿಸಿದ್ದ ಸಮಯದಲ್ಲಿ ಕರೆಗಳು ಬಂದಾಗ, ಸ್ಪೀಕರ್‍ ಮುಂದೆಯೇ ಉತ್ತರಿಸುವ ಸೌಲಭ್ಯ ಸಹ ಇದೆ. ಆದರೆ ಈ ಸಾಹಸವನ್ನು ಬಹುತೇಕ ಯಾರೂ ಮಾಡುವುದಿಲ್ಲ!

ಇದು ಒಟ್ಟು 8000 ಎಂಎಎಚ್‍ನ ಬ್ಯಾಟರಿ ಹೊಂದಿದ್ದು, ಟೈಪ್‍ ಸಿ ಕೇಬಲ್‍ ಮೂಲಕ ಚಾರ್ಜ್ ಮಾಡಬೇಕು. ಸಂಪೂರ್ಣ ಚಾರ್ಜ್‍ ಆಗಲು 4 ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಶೇ. 50ರಷ್ಟು ವ್ಯಾಲ್ಯೂಮ್‍ ನಲ್ಲಿ ಐದು ಗಂಟೆಗಳ ಕಾಲ ಸಂಗೀತ ಆಲಿಸಬಹುದು.
ನೀವು ಸಂಗೀತ ಪ್ರಿಯರಾಗಿದ್ದು, ಒಂದು ಪವರ್‍ ಫುಲ್‍ ಮಧ್ಯಮ ದರ್ಜೆಯ ಬ್ಲೂಟೂತ್‍ ಸ್ಪೀಕರ್‍ ಬೇಕೆನಿಸಿದರೆ ಐವಾ ಎಸ್‍ಬಿ ಎಕ್ಸ್ 350 ಎ ಪರಿಗಣಿಸಬಹುದು.

-ಕೆ.ಎಸ್‍. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next