Advertisement
ಹದಿಮೂರರ ಮಗಳು ಎಂದಿನಂತೆ ಶಾಲೆಯಿಂದ ಬರುತ್ತಲೇ ಆವತ್ತಿನ ಆಗುಹೋಗುಗಳನ್ನೆಲ್ಲ ಸವಿಸ್ತಾರ ಹೇಳತೊಡಗಿದ್ದಳು. ಅವರ ಶಾಲೆಯಲ್ಲಿ ಇಬ್ಬರು ಕೂರಬಹುದಾದ ಬೆಂಚಿನಲ್ಲಿ ಒಬ್ಬ ಹುಡುಗ ಒಬ್ಬಳು ಹುಡುಗಿ-ಹೀಗೆ ಕೂರಿಸುತ್ತಾರೆ. ಇವಳ ಪಕ್ಕ ಕೂತ ಹುಡುಗನೊಬ್ಬ “”ಮುಟ್ಟಬೇಡ, ದೂರ ಕೂತ್ಕೊಳ್ಳೇ. ನೀವು ಹುಡುಗಿಯರು ಅಸಹ್ಯ ಕಣೇ. ನಿಮ್ಮನ್ನ ಡಸ್ಟ್‌ಬಿನ್‌ಗೆ ಹಾಕಬೇಕು ನೋಡು, ತಂದು ನನ್ನ ಪಕ್ಕ ಕೂರಿಸಿದ್ದಾರೆ” ಅಂದಿದ್ದಾನೆ. ಇವಳು, “”ಹೌದಲ್ವಾ , ನಿಮ್ಮಮ್ಮ ಮತ್ತೆ ನಿನ್ನ ದೊಡ್ಡಮ್ಮನ ಮಗಳು ನನ್ನ ಫೇವರೆಟ್ ಅಕ್ಕ ಇದ್ದಾಳಲ್ಲಾ , ಅವರನ್ನೂ ಡಸ್ಟ್‌ಬಿನ್‌ಗೆ ಹಾಕಬೇಕಲ್ವಾ?” ಅಂದಿದ್ದಾಳೆ. ಅದಕ್ಕವ “”ಏ… ನಮ್ಮಮ್ಮ-ನಮ್ಮಕ್ಕನ ಸುದ್ದಿಗೆ ಬಂದರೆ ಚೆನ್ನಾಗಿರಲ್ಲ ನೋಡು” ಅಂದಿದ್ದಾನೆ. ಸುಮ್ಮನಾಗಿದ್ದಾನೆ. ಆಮೇಲೆ ದಿನವಿಡೀ ಸಪ್ಪಗಿದ್ದ. “”ಯಾವಾಗಲೂ ಪುಂಡಾಟ ಮಾಡಿಕೊಂಡು ಇರುವವನದ್ದು ಇವತ್ತೆಲ್ಲ ಮಾತೇ ಇರಲಿಲ್ಲ ನೋಡಮ್ಮ” ಅಂದ ಮಗಳ ಕಣ್ಣಲ್ಲಿ, ತಾನು ಅವನಿಗೆ ಏನೋ ಒಂದು ಸತ್ಯವನ್ನು ತೋರಿಸಿಕೊಟ್ಟೆ, ಅವನ ಬಾಯಿ ಮುಚ್ಚಿಸಿದೆ ಅನ್ನುವ ತೃಪ್ತಿಯ ಛಾಯೆಯಿರಲಿಲ್ಲ. ಬದಲಿಗೆ ಸಹಾನುಭೂತಿ ನಿಚ್ಚಳ ಕಾಣಿಸಿತು.
Related Articles
Advertisement
ಹಾಗೆ ಆ ಮಗುವಿಗೆ ಬರೋಬ್ಬರಿ ಹದಿನೆಂಟು ವರ್ಷಗಳಾಗುವ ವರೆಗೂ ಮೂವರೂ ಒಬ್ಬರನ್ನೊಬ್ಬರು ಭೇಟಿಯಾಗಲೇ ಇಲ್ಲ. ಆಮೇಲೊಂದು ದಿನ ತಾಯಿ ತೀರಿಕೊಂಡಿದ್ದಾರೆ, ಅದರ ಮಾರನೆಯ ದಿನವೇ ಹೆಂಡತಿಯನ್ನ ನೋಡಲು ಬಂದು ಆತ, “ಬಾ’ ಅಂತ ಕರೆದಿದ್ದಾನೆ. ಆತ ಕೆಲಸ ಮಾಡುತ್ತಿದ್ದ ಊರಿಗೆ ತನ್ನ ವರ್ಗಾವಣೆ ಸಾಧ್ಯವಿಲ್ಲವೆಂದು ನಿಂತ ನಿಲುವಿನಲ್ಲೇ ಕೇಂದ್ರ ಸರಕಾರದ ತಮ್ಮ ನೌಕರಿಗೆ ರಾಜೀನಾಮೆ ಇತ್ತು ಈಕೆ ಅವರಿದ್ದಲ್ಲಿಗೆ ಹೋಗಿದ್ದಾಳೆ. ಮಗಳು, ತಂದೆ-ತಾಯಿ, ಒಡಹುಟ್ಟಿದವರು, ಬಂಧು ವರ್ಗ ಎಲ್ಲರ ವಿರೋಧದ ನಡುವೆಯೂ ಹದಿನೆಂಟು ವರ್ಷಗಳ ಮೌನದ ಕೊನೆಯಲ್ಲಿ ಬಂದ ಅವರ ಒಂದೇ ಒಂದು ಕರೆಗೆ ಓಗೊಟ್ಟಿದ್ದಾಳೆ. “ಅಲ್ಲಿಗೆ ಬರಲಾರೆ’ ಎಂದ ಮಗಳನ್ನು ಅಜ್ಜಿ-ತಾತನ ಜೊತೆಗೇ ಬಿಟ್ಟು ಹೋದವಳು ಗಂಡನ ಜೊತೆಯಲ್ಲಿದ್ದದ್ದು ಮೂರೇ ವರ್ಷ. ಈಕೆಗಿಂತ ಹನ್ನೆರಡು ವರ್ಷ ದೊಡ್ಡವರಾದ ಆತ ಒಂದು ದಿನ ರಾತ್ರಿ ಮಲಗಿದಲ್ಲಿಯೇ ಹೃದಯಾಘಾತವಾಗಿ ತೀರಿಕೊಂಡಿದ್ದನು.ಇಷ್ಟು ಕತೆ ಕೇಳುವಷ್ಟರಲ್ಲಿ ಆಕೆಯ ಕಡೆ ಅನುಕಂಪದ ಬದಲಿಗೆ ಅನಿರೀಕ್ಷಿತ ಮತ್ತು ಅನಪೇಕ್ಷಿತವೂ ಆದ ಆ ಕರೆಗೆ ಆ ಪಾಟಿ ಓಗೊಡುವುದು ಹೇಗಪ್ಪಾ ಸಾಧ್ಯವಾಯಿತು ಅಂತನ್ನುವ ಒಂದು ಸಖೇದಾಶ್ಚರ್ಯವೇ ನನ್ನ ಮನಸ್ಸಿನ ತುಂಬ ಇದ್ದದ್ದು.
ಕೊನೆಯಲ್ಲಿ ಆಕೆ ಅಂದಮಾತಿಗೆ ಮಾತ್ರ ಅವರ ಕೈಗಳನ್ನು ಕಣ್ಣಿಗೊತ್ತಿಕೊಳ್ಳಬೇಕೆನಿಸಿತ್ತು. ಒಟ್ಟಿಗಿದ್ದ ಮೂರು ವರ್ಷ ಅವನು ತುಂಬಾ ಪ್ರೀತಿ ಕೊಟ್ಟರು. ತನ್ನ ತಾಯಿಯ ಬಗ್ಗೆಯೂ ಅವರಿಗೆ ಅಷ್ಟೇ ಪ್ರೀತಿ. ಆದರೆ ಯಾವ ರೀತಿ ತಿಳಿಸಿ ಹೇಳಿದರೂ ತನ್ನ ಹಠಬಿಡದ ಸ್ವಭಾವದವರಾದ ಅತ್ತೆಯನ್ನು ನನಗಾಗಿ ಬಿಟ್ಟುಬರುವುದು ಅವರಿಗೆ ಸಾಧ್ಯವಿರಲಿಲ್ಲ. ಅಲ್ಲದೆ ನನ್ನನ್ನು ನೋಡಿಕೊಳ್ಳಲು ಬೆಟ್ಟದಷ್ಟು ಪ್ರೀತಿಸುವ ನನ್ನ ತವರಿತ್ತು. ಹೌದು, ನಾನು ಆ ಹದಿನೆಂಟು ವರ್ಷ ತುಂಬಾ ನೊಂದೆ. ಆದರೆ ತಾಯಿಯನ್ನು ಕಳಕೊಂಡು ಬಂದಾಗ ಅವರಿಗೆ ಇನ್ಯಾರೂ ಇರಲಿಲ್ಲ ಮತ್ತು ಆ ಮೂರು ವರ್ಷ ನಮ್ಮ ನಡುವಿದ್ದ ಪ್ರೀತಿ ಹದಿನೆಂಟು ವರ್ಷಗಳಲ್ಲಿ ಒಮ್ಮೆಯೂ ಸುಳ್ಳೆನಿಸಿರಲಿಲ್ಲ. ಮುಕ್ಕಾಗಿರಲಿಲ್ಲ. ಹಾಗಾಗಿ ಸುಮ್ಮನೆ ಹಾಗೆ ಹೊರಡದೆ ಇರಲಿಕ್ಕೆ ನನ್ನ ಬಳಿ ಕಾರಣಗಳಿರಲಿಲ್ಲ.
ಹೆಣ್ಣು ಅಂದರೆ- ಒಮ್ಮೆ ಪ್ರೀತಿ ಸಿಕ್ಕಿತೆಂದರೆ ಮುಗಿಯಿತು. ಆ ಬಂಧವನ್ನೇ ಜಗತ್ತು ಮಾಡಿಕೊಳ್ಳುವವಳು. ಮುಂದೆಲ್ಲೋ ಅದರಿಂದ ಎಷ್ಟೇ ನೋವು ಸಿಕ್ಕಿರಲಿ, ಆ ಬಂಧ ಮುಗಿದೇ ಹೋದಂತಿರಲಿ, ಆದರೆ ಭೌತಿಕವಾಗಿಯೋ ಮಾನಸಿಕವಾಗಿಯೋ ಅಲ್ಲಿ ತನ್ನ ಅಗತ್ಯವಿದೆ ಅಂತ ಗೊತ್ತಾದಾಗ ಹಿಂದೆಮುಂದೆ ಯೋಚಿಸದೆ ಥೇಟ್ ಅಮ್ಮನಂತೆ ಒದಗಬಲ್ಲ ಧಾರಣಶಕ್ತಿ.
ಹೆಣ್ಣಿಗೆ ಜನ್ಮದತ್ತ ಬರುವ ಮತ್ತು ಯಾವಾಗಲೂ ಮಸುಕಾಗದು ಳಿಯುವ (ಅಪವಾದಗಳು ಖಂಡಿತ ಇರಬಹುದು) ಈ ಧಾರಣಶಕ್ತಿ ಮತ್ತು ಕಳಕಳಿಯ ಕಾರಣದಿಂದಾಗಿಯೇ ಪ್ರಕೃತಿ ಅವಳಿಗೆ ಜನ್ಮ ನೀಡುವ ಗುರುತರ ಜವಾಬ್ದಾರಿಯನ್ನ ಕೊಟ್ಟಿದೆಯೋ ಏನೋ!
ದಿನ ಬೆಳಗಾದರೆ ಹೆಣ್ಣು ಅನ್ನುವ ಶಬ್ದದ ಜೊತೆ ಥಳುಕು ಹಾಕಿಕೊಂಡು ಕಿವಿಗೆ ಬೀಳುವ ಅತ್ಯಾಚಾರ, ಶೋಷಣೆ, ನಿರ್ಲಕ್ಷ್ಯ, ಅಸಹಾಯಕತೆ, ಭ್ರೂಣಹತ್ಯೆ, ಸ್ತ್ರೀವಾದ, ಸ್ತ್ರೀಪರ ಹೋರಾಟ ಮುಂತಾದ ಈ ಶಬ್ದಗಳ ನಡುವೆ ಇನ್ನೊಮ್ಮೆ ಹುಟ್ಟುವುದಾದರೆ ಹೆಣ್ಣಾಗಿಯೇ ಹುಟ್ಟಬೇಕು ಅನ್ನಿಸಲು ಕಾರಣವಾಗುವ ಇಂಥ ವಿಷಯಗಳೂ ಸಿಕ್ಕುತ್ತವೆ. ನಿಜ ಹೇಳಬೇಕೆಂದರೆ ಇವೇ ಮನಸಲ್ಲಿ ಹೆಚ್ಚು ಹೊತ್ತು ಉಳಕೊಳ್ಳುತ್ತವೆ ಮತ್ತು ಆಗೆಲ್ಲ ಕಣ್ಮುಚ್ಚಿ ಮೈಮರೆತು ಗುನುಗಿಕೊಳ್ಳುತ್ತೇನೆ; ನಾನೊಂದು ಜೀವ ನದಿ; ಹೆಣ್ಣು ನನ್ನ ಹೆಸರು!
– ಅನುರಾಧಾ ಪಿ. ಸಾಮಗ