ಬೆಂಗಳೂರು: ತೆರಿಗೆ ವಂಚನೆ ಆರೋಪದಲ್ಲಿ ಖಾಸಗಿ ಕಾರ್ಪೊರೇಟ್ ಕಂಪನಿಗಳ ಮುಖ್ಯಸ್ಥರು, ವ್ಯವಸ್ಥಾಪಕರು, ನಿರ್ದೇಶಕರು ಹಾಗೂ ಕೆಲ ಉದ್ಯಮಿಗಳ ನಿವಾಸ, ಕಚೇರಿ ಮೇಲೆ ಶುಕ್ರವಾರ ಬೆಳ್ಳಂಬೆಳಗ್ಗೆ ಆದಾಯ ತೆರಿಗೆ ಇಲಾಖೆ (ಐಟಿ) ದಾಳಿ ನಡೆಸಿ ಮಹತ್ವದ ದಾಖಲೆ ಕಲೆ ಹಾಕಿದೆ.
ಬೆಂಗಳೂರಿನ ಸಂಜಯನಗರದ ರಾಜ್ ವಿಲಾಸ್ ಪ್ಯಾಲೇಸ್, ಕೋಡಿಗೆಹಳ್ಳಿ ಬ್ರಿಗೆಡ್ ಓಪಸ್ ಕಂಪನಿ, ಹೆಬ್ಟಾಳ, ಬಿಡದಿ, ಚಿಕ್ಕಬಳ್ಳಾಪುರ, ರಾಮನಗರದ ವಿವಿಧ ಸ್ಥಳಗಳಲ್ಲಿರುವ ಕಾರ್ಪೊರೇಟ್ ಕಂಪನಿಯ ಉನ್ನತ ಹುದ್ದೆಯಲ್ಲಿರುವವರ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ.
ರಾಜ್ಯಾದ್ಯಂತ 15ಕ್ಕೂ ಅಧಿಕ ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದ್ದು, ದಾಳಿಗೊಳಗಾದವರ ಕುರಿತು ಮಾಹಿತಿ ನೀಡಲು ಐಟಿ ಮೂಲಗಳು ನಿರಾಕರಿಸಿವೆ.
ದಾಳಿಗೊಳಗಾದವರು ಭಾರೀ ಪ್ರಮಾಣದ ತೆರಿಗೆ ವಂಚಿಸಿರುವುದು ತನಿಖೆಯಲ್ಲಿ ಕಂಡು ಬಂದಿತ್ತು. ಕಳೆದ ಕೆಲ ತಿಂಗಳಿನಿಂದ ಈ ಬಗ್ಗೆ ನಿಗಾ ಇಟ್ಟಿದ್ದ ಐಟಿ ಅಧಿಕಾರಿಗಳು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಲೆ ಹಾಕಿದ್ದರು. ಆ ವೇಳೆ ಭಾರೀ ಪ್ರಮಾಣದ ತೆರಿಗೆ ವಂಚಿಸಿರುವುದು ಗೊತ್ತಾಗಿದೆ.
ಕಾರ್ಯಪ್ರವೃತ್ತರಾದ ಅಧಿಕಾರಿಗಳು ತಮ್ಮ ಕೈ ಸೇರಿದ ದಾಖಲೆಯ ಆಧಾರದ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಆಸ್ತಿ ಪಾಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ.
ದಾಳಿ ಬಳಿಕ ಮುಂದೇನು?: ದಾಳಿ ಮುಕ್ತಾಯಗೊಂಡ ಬಳಿಕ ಜಪ್ತಿ ಮಾಡಿರುವ ದಾಖಲೆ ಪರಿಶೀಲಿಸಲಾಗುವುದು. ನಂತರ ದಾಳಿಗೊಳಗಾದವರಿಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ಕೊಟ್ಟು ಸ್ಪಷ್ಟನೆ ಪಡೆಯಲಾಗುತ್ತದೆ. ವಿಚಾರಣೆಗೆ ಹಾಜರಾಗುವ ವೇಳೆ ದಾಳಿಗೊಳಗಾದವರು ಹೊಂದಿರುವ ಆಸ್ತಿ, ಉದ್ಯಮ, ಕಂಪನಿ, ಬ್ಯಾಂಕ್ ಬ್ಯಾಲೆನ್ಸ್ ವಿವರ ಸೇರಿ ಇನ್ನಿತರ ಕೆಲ ಮಾಹಿತಿಗಳಿಗೆ ಸಂಬಂಧಿಸಿದ ದಾಖಲೆ ಸಲ್ಲಿಸುವಂತೆ ಸೂಚಿಸಲಾಗುತ್ತದೆ ಎಂದು ಐಟಿ ಇಲಾಖೆಯ ಉನ್ನತ ಮೂಲಗಳು ತಿಳಿಸಿವೆ.