Advertisement

ಅರ್ಹರ ಆಯ್ಕೆ ಮತದಾರರ ಕರ್ತವ್ಯ

05:37 PM Jan 26, 2021 | Nagendra Trasi |

ವಿಜಯಪುರ: ಸುಭದ್ರ ರಾಷ್ಟ್ರ ನಿರ್ಮಾಣಕ್ಕಾಗಿ ಅರ್ಹ ಮತದಾರರು ಪ್ರತಿಯೊಂದು ಚುನಾವಣೆಯಲ್ಲಿ ತಪ್ಪದೇ ಮತದಾನ ಮಾಡುವ ಅವಶ್ಯಕತೆ ಇದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಹಿರಿಯ ಸಿವಿಲ್‌ ನ್ಯಾಯಾಧೀಶ ವೆಂಕಣ್ಣ ಹೊಸಮನಿ ಹೇಳಿದರು.

Advertisement

ಸೋಮವಾರ ಜಿಪಂ ಸಭಾಭವನದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಪ್ರಜಾಪ್ರಭುತ್ವದ ರಕ್ಷಣೆಗಾಗಿ ನ್ಯಾಯಸಮ್ಮತ, ನಿಸ್ಪಕ್ಷಪಾತ ಚುನಾವಣೆಗಾಗಿ ಮತದಾನದ ಅರ್ಹತೆ ಇರುವ ಎಲ್ಲರೂ ಸಂವಿಧಾನದತ್ತವಾಗಿ ಲಭ್ಯವಾಗಿರುವ ಮತದಾನ ಮಾಡಿ ತಮ್ಮ ಕರ್ತವ್ಯ ನಿಭಾಯಿಸಬೇಕು ಎಂದರು.

ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮಾತನಾಡಿ, ಮತದಾರರು ಯಾವುದೇ ಆಮಿಷ, ಪ್ರಭಾವಕ್ಕೆ ಒಳಗಾಗಬಾರದು. ಪ್ರತಿಯೊಂದು ಚುನಾವಣೆಗಳಲ್ಲಿ ಪ್ರತಿಯೊಂದು ಮತವೂ ಅಮೂಲ್ಯವಾಗಿದೆ. ಅರ್ಹ ಮತದಾರರು ತಪ್ಪದೇ ತಮ್ಮ ಮತದಾರನ ಗುರುತಿನ ಕಾರ್ಡ್‌ ಪಡೆಯುವ ಜೊತೆಗೆ ಕಡ್ಡಾಯವಾಗಿ ಮತ ಚಲಾಯಿಸಬೇಕು ಎಂದರು.

ಸುಭದ್ರ ರಾಷ್ಟ್ರ ನಿರ್ಮಾಣ, ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶ ಎನಿಸಿಕೊಂಡಿರುವ ಭಾರತದ ಹಿರಿಮೆ ಎತ್ತಿ ಹಿಡಿದು ಸಂವಿಧಾನದ ಆಶಯವನ್ನು ಈಡೇರಿಸಬೇಕು. ಮತದಾನ ಪ್ರಮಾಣ ಹೆಚ್ಚಿಸಲು ಸ್ವೀಪ್‌ ಸಮಿತಿ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡರೂ ಶೇಕಡಾ ನೂರರಷ್ಟು ಮತದಾನ ಆಗುವುದು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಮತದಾನದ ಅರ್ಹತೆ ಇರುವ ಎಲ್ಲ ಮತದಾರರು ತಮ್ಮ ಕ್ಷೇತ್ರದಲ್ಲಿ ಜರುಗುವ ಎಲ್ಲ ಚುನಾವಣೆಗಳಲ್ಲಿ ತಪ್ಪದೇ ತಮ್ಮ ಹಕ್ಕು ಚಲಾಯಿಸಬೇಕು ಎಂದು ಮನವಿ ಮಾಡಿದರು.

ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ವ್ಯಕ್ತಿಗಳಿಗೆ ಸ್ಥಳದಲ್ಲೇ ಮತದಾರರ  ಗುರುತಿನ ಚೀಟಿ ನೀಡಲಾಗುತ್ತದೆ. ಆದರೂ ಗುರುತಿನ ಕಾರ್ಡ ಕಚೇರಿಗೆ ಸಂಪರ್ಕಿಸಿ ಪಡೆಯಬಹುದಾಗಿದೆ. ಉಚಿತ ಸಹಾಯವಾಣಿ ಸಂಖ್ಯೆ, ಸಾಮಾಜಿಕ ಜಾಲತಾಣ ಮೂಲಕವೂ ದೂರು ಸಲ್ಲಿಸಿ ಮತದಾರರ ಗುರುತಿನ ಚೀಟಿ ಪಡೆಯುವ ವ್ಯವಸ್ಥೆ ಮಾಡಲಾಗಿದ್ದು, ಮತದಾರರು
ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

Advertisement

2011ರಿಂದ ಚುನಾವಣಾ ಆಯೋಗದ ಸ್ಥಾಪನೆಯ ದಿನದಿಂದ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದ್ದು, 18ರಿಂದ 21 ವಯೋಮಾನದೊಳಗಿನ ಪ್ರತಿಯೊಬ್ಬ ಯುವ ಮತದಾರ ಹಾಗೂ ಮತದಾರರ ಪಟ್ಟಿಯಿಂದ ಹೊರಗುಳಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು. ಮತದಾರರು ಎರಡು ಕಡೆಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಮಾಡಿಸಿದ್ದನ್ನು ಪತ್ತೆ ಹಚ್ಚಲು, ಛಾಯಾಚಿತ್ರ ಪತ್ತೆ ಹಚ್ಚುವ ತಂತ್ರಾಂಶ ಕೂಡ
ಜಾರಿಯಲ್ಲಿದೆ. ಮತದಾರರ ನೋಂದಣಿ ಪರಿಶೀಲನೆಗೆ ನಿರಂತರ ಮತದಾರರ ಪಟ್ಟಿ ವೀಕ್ಷಕರು ಪರಿಶೀಲನೆ ನಡೆಸುತ್ತಿದೆ ಎಂದರು.

ವಿಜಯಪುರ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನ ಉಪನ್ಯಾಸಕ ಎಂ.ಬಿ. ರಜಪೂತ ಮಾತನಾಡಿ, ವಿಶ್ವದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳನ್ನು ನೀಡಲು ಮತದಾನದ ಅವಕಾಶ ಕಲ್ಪಿಸಿರುವ ಏಕೈಕ ರಾಷ್ಟ್ರ ಭಾರತ. ಪ್ರತಿ ಮತವೂ ಅಮೂಲ್ಯ, ಹೀಗಾಗಿ ಚುನಾವಣೆಯಲ್ಲಿ ಯಾವುದೇ ಪ್ರಭಾವಕ್ಕೆ ಸಿಲುಕದೇ ಅರ್ಹ ಅಭ್ಯರ್ಥಿಯನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡಲು ಮತದಾನದ ಅರ್ಹತೆ ಇರುವ ಎಲ್ಲರೂ ತಪ್ಪದೇ ಮತ ಚಲಾಯಿಸಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಯುವ ಮತದಾರರಿಗೆ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು. ಅತ್ಯುತ್ತಮ ಚುನಾವಣಾ ಸೇವೆ ಸಲ್ಲಿಸಿದ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಸನ್ಮಾನಿಸಲಾಯಿತು. ಪ್ರಬಂಧ ಬರಹ, ರಸಪ್ರಶ್ನೆ, ಭಿತ್ತಿಪತ್ರ, ಕೋಲಾಜ್‌ ತಯಾರಿಕೆ ಸ ರ್ಧೆಗಳಲ್ಲಿ ವಿಜೇತರಾದ
ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಎಸ್ಪಿ ಅನುಪಮ್‌ ಅಗರವಾಲ, ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಉಪ ವಿಭಾಗಾ ಧಿಕಾರಿ ರಾಮಚಂದ್ರ ಗಡಾದ ಪ್ರತಿಜ್ಞಾ ವಿಧಿ ಬೋಧಿಸಿದರು. ತಹಶೀಲ್ದಾರ್‌ ಮೋಹನಕುಮಾರಿ ಇದ್ದರು. ಹುಮಾಯೂನ್‌ ಮಮದಾಪುರ ನಿರೂಪಿಸಿದರು. ಜಿಪಂ ಯೋಜನಾಧಿಕಾರಿ ಸಿ.ಬಿ. ಕುಂಬಾರ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next