ಮಂಗಳೂರು: ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮೀಜಿಯವರು ಪ್ರಯಾಣಿ ಸುತ್ತಿದ್ದ ವಾಹನ ತಡೆದು ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೋರಿ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಬರೆದ ಪತ್ರಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತುರ್ತು ಸ್ಪಂದಿಸಿದ್ದಾರೆ.
ಜತೆಗೆ ಈ ಘಟನೆ ಬಗ್ಗೆ ಕೂಡಲೇ ಅಗತ್ಯ ಕ್ರಮ ಕೈಗೊಳ್ಳವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿದ್ದಾರೆ.
ಎಡನೀರು ಶ್ರೀಗಳು ಕಾಸರಗೋಡಿನ ಬೊವಿಕ್ಕಾನದಲ್ಲಿ ಸಂಚರಿಸುತ್ತಿರುವಾಗ ಅವರ ಕಾರನ್ನು ಸಮಾಜಘಾತುಕ ಶಕ್ತಿಗಳು ಅಡಗಟ್ಟಿ ಹಲ್ಲೆಗೆ ಯತ್ನಿಸಿದ್ದರು. ಈ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದ ಕ್ಯಾ| ಚೌಟ ಅವರು ಶ್ರೀಗಳ ಮೇಲಿನ ದಾಳಿ ಯತ್ನವನ್ನು ತೀವ್ರವಾಗಿ ಖಂಡಿಸಿದ್ದರು.
ಹಿಂದೂ ಸಮಾಜದ ಮಾರ್ಗದರ್ಶಕರಾದ ಎಡನೀರು ಶ್ರೀಗಳ ಮೇಲಿನ ಹಲ್ಲೆಯನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರ ವಿರುದ್ಧ ಕಠಿನ ಕಾನೂನು ಕ್ರಮ ಕೈಗೊಳ್ಳಲು ಕೋರಿ ಕೇರಳ ಸಿಎಂಗೆ ನ. 6ರಂದು ಪತ್ರ ರವಾನಿಸಿದ್ದರು. ಸಂಸದರ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಸಿಎಂ ಪಿಣರಾಯಿ ಅವರು ಘಟನೆಯ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ, ಪೊಲೀಸ್ ಇಲಾಖೆ ಕಾರ್ಯೊನ್ಮುಖರಾಗುವಂತೆ ಡಿಜಿಪಿಯವರಿಗೆ ಸೂಚನೆ ನೀಡಿರುವು ದಾಗಿ ತಮ್ಮ ಪ್ರತ್ಯುತ್ತರ ನೀಡಿದ್ದಾರೆ. ಈ ಘಟನೆಗೆ ಕೇರಳ ಸಿಎಂ ಪಿಣರಾಯಿ ಅವರ ತುರ್ತು ಸ್ಪಂದನೆಯನ್ನು ಕ್ಯಾ| ಚೌಟ ಸ್ವಾಗತಿಸಿದ್ದಾರೆ.