Advertisement

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

03:47 PM Nov 08, 2024 | Team Udayavani |

ಬೆಂಗಳೂರು: ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಸೇರಿದಂತೆ ನಗರದ ಹಲವು ಮಾರುಕಟ್ಟೆಗಳಲ್ಲಿ ಹಳೆ ಈರುಳ್ಳಿ ಬೆಲೆಯಲ್ಲಿ ಏರಿಕೆ ಆಗಿದೆ. ಅದರಲ್ಲೂ ಮಹಾರಾಷ್ಟ್ರದಿಂದ ಪೂರೈಕೆ ಆಗುತ್ತಿರುವ ಉತ್ತಮ ಗುಣಮಟ್ಟದ ಈರುಳ್ಳಿಗೆ ಬೇಡಿಕೆ ಸೃಷ್ಟಿಯಾಗಿದೆ. ಹೀಗಾಗಿ ಕೆಲ ವಾರಗಳ ಹಿಂದೆ ಕ್ವಿಂಟಲ್‌ಗೆ 5 ಸಾವಿರ ರೂ. ಆಸುಪಾಸಿನಲ್ಲಿದ್ದ ನಾಗ್ಪುರ ಭಾಗದ ಈರುಳ್ಳಿ ದರ 7,200 ರಿಂದ 7,500 ರೂ.ವರೆಗೆ ಮಾರಾಟವಾ ಗುತ್ತಿದೆ. ಜತೆಗೆ ಚಿಲ್ಲರೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ 80 ರಿಂದ 90 ರೂ. ದರ ಇದೆ.

Advertisement

ಇತ್ತೀಚೆಗೆ ಸುರಿದ ಭಾರೀ ಮಳೆ ಈರುಳ್ಳಿ ಬೆಳೆಗೆ ಹೊಡೆತ ನೀಡಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಸಿಗುತ್ತಿಲ್ಲ. ಹಳೆ ದಾಸ್ತಾನು ಇರಿಸಲಾಗಿದ್ದ ಈರುಳ್ಳಿಗೆ ಬೇಡಿಕೆ ಇದೆ. ಹೆಚ್ಚು ದಿನ ಬಾಳಿಕೆ ಬರುವ ಈರುಳ್ಳಿಯನ್ನು ಹೋಟೆಲ್‌ ಉದ್ಯಮದವರು ಖರೀದಿ ಮಾಡುತ್ತಾರೆ. ಈ ಈರುಳ್ಳಿ ಮಹಾರಾಷ್ಟ್ರ ಭಾಗದಿಂದ ಬೆಂಗಳೂರಿಗೆ ಪೂರೈಕೆ ಆಗುತ್ತಿದೆ ಎಂದು ಯಶವಂತಪುರ ಕೃಷಿ ಉತ್ಪನ್ನ ಮಾರುಕಟ್ಟೆಯ ವ್ಯಾಪಾರಿಗಳು ಹೇಳುತ್ತಾರೆ.

ಮಹಾರಾಷ್ಟ್ರದಿಂದ 500 ಟ್ರಕ್‌: ಯಶವಂತ ಪುರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಗೆ ಮಹಾರಾಷ್ಟ್ರ ಭಾಗದಿಂದ ಗುರುವಾರ 500 ಟ್ರಕ್‌ ಗಳಲ್ಲಿ 1,00,480 ಚೀಲ ಈರುಳ್ಳಿ ಪೂರೈಕೆಯಾಗಿದೆ. ಮಧ್ಯಮ ಗಾತ್ರದ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 5000-5500 ರೂ. ವರೆಗೂ ಖರೀದಿಯಾಯಿತು. ಚಳ್ಳಕೆರೆ ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಒಟ್ಟು 485 ಟ್ರಕ್‌ಗಳಲ್ಲಿ ಈರುಳ್ಳಿ ಪೂರೈಕೆ ಆಗಿದೆ. ಅದು ಹೊಸದಾಗಿದ್ದು, ಹಸಿ ಅಂಶ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ನಾಗ್ಪುರ ಭಾಗದ ಈರುಳ್ಳಿಗೆ ಹೆಚ್ಚಿನ ಬೇಡಿಕೆ ಇದೆ ಎಂದು ಯಶವಂತಪುರ ಎಪಿಎಂಸಿ ಸಗಟು ವ್ಯಾಪಾರಿ ರವಿಶಂಕರ್‌ ಹೇಳುತ್ತಾರೆ.

ರಾಜ್ಯದಿಂದ ಪೂರೈಕೆ ಆಗುತ್ತಿರುವ ಈರುಳ್ಳಿ ಪ್ರತಿ ಕ್ವಿಂಟಲ್‌ಗೆ 5000-5,500 ರೂ.ವರೆಗೂ ಖರೀದಿ ಯಾ ಗುತ್ತಿದೆ. ಸಾಮಾನ್ಯ ದರ್ಜೆಯ ಈರುಳ್ಳಿ ಕ್ವಿಂಟಲ್‌ಗೆ 2,000-3000 ರೂ.ವರೆಗೂ ಮತ್ತು ಹಾನಿಗೊಳಗಾದ ಈರುಳ್ಳಿ ಕ್ವಿಂಟಲ್‌ಗೆ 500-1,500 ರೂ. ವರೆಗೂ ಮಾರಾಟವಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಉತ್ತಮ ಗುಣಮಟ್ಟದ ಈರುಳ್ಳಿ ಮಾರುಕಟ್ಟೆ ಪ್ರವೇಶಿಸುವ ವರೆಗೂ ಬೆಲೆಯಲ್ಲಿ ಏರಿಳಿತ ಇರಲಿದೆ ಎಂದು ತಿಳಿಸಿದ್ದಾರೆ.

ಹಳೆ ದಾಸ್ತಾನು ಈರುಳ್ಳಿ ಮಾರಾಟ ಮಾಡುತ್ತಿಲ್ಲ: ನಾಗ್ಪುರ ಭಾಗದಿಂದ ಬೆಂಗಳೂರಿಗೆ ಪೂರೈಕೆ ಆಗುತ್ತಿರುವ ಈರುಳ್ಳಿ ಹಳೆ ದಾಸ್ತಾನು ಆಗಿದೆ. ಯಶವಂತಪುರ ಸಗಟು ಮಾರುಕಟ್ಟೆಯಲ್ಲಿ ಕೆ.ಜಿಗೆ 75 ರೂ.ಗೆ ಮಾರಾಟವಾಗುತ್ತಿದೆ. ಅದನ್ನು ಖರೀದಿಸಿ ತಳ್ಳುಗಾಡಿಯಲ್ಲಿ ಮಾರಾಟ ಮಾಡಿದರೆ ಅಧಿಕ ಬೆಲೆ ಎಂದು ಗ್ರಾಹಕರು ಖರೀದಿ ಮಾಡುವುದಿಲ್ಲ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಭಾಗದ ಈರುಳ್ಳಿಯನ್ನು ಸ್ವಲ್ಪ ದಿನ ಮಾರಾಟ ಮಾಡುವುದನ್ನು ನಿಲ್ಲಿಸಿದ್ದೇವೆ ಎಂದು ಹೆಗ್ಗನಹಳ್ಳಿಯ ತಳ್ಳುವಗಾಡಿ ವ್ಯಾಪಾರಿ ವೆಂಕಟೇಶ್‌ ಹೇಳುತ್ತಾರೆ. ರಾಜ್ಯದಿಂದ ಪೂರೈಕೆ ಆಗುವ ಈರುಳ್ಳಿ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next