Advertisement

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

11:31 AM Nov 03, 2024 | Team Udayavani |

ಸಿಂಗಾಪುರ: ”ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು…

Advertisement

ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಎನ್ನುವ ಕುವೆಂಪು ಅವರ ನಾಣ್ಣುಡಿಯಂತೆ ಕನ್ನಡಿಗರು ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಕನ್ನಡ ಭಾಷೆಯ ಸೊಗಡನ್ನ ಪಸರಿಸಲು ಹಾಗೂ ಕನ್ನಡ ಧ್ವಜವನ್ನ ಜಗತ್ತಿನಾದ್ಯಂತ ಎತ್ತಿಹಿಡಿಯುವಲ್ಲಿ ಮುಂಚೂಣಿಯಲ್ಲಿರುತ್ತಾರೆ. ಅದಕ್ಕೆ ಪ್ರೇರಿತವೆನ್ನುವಂತೆ ಈ ಬಾರಿಯ ವಿಶ್ವ ಕನ್ನಡ ಹಬ್ಬವನ್ನ ಸಿಂಗಾಪುರದಲ್ಲಿ ಆಯೋಜಿಸಲು ಕರ್ನಾಟಕ ಪ್ರಸ್‌ ಕ್ಲಬ್‌ ಕೌನ್ಸಿಲ್‌ ನಿರ್ಧರಿಸಿದ್ದು ನಮ್ಮ ಸಿಂಗನ್ನಡಿಗರ ಹುಮ್ಮಸ್ಸನ್ನ ಹೆಚ್ಚಿಸಿದೆ.

ಮೂಲ ಕನ್ನಡಿಗರು ಹಾಗೂ ಅನಿವಾಸಿ ಕನ್ನಡಿಗರನ್ನ ಒಟ್ಟುಗೂಡಿಸುವ ನಿಟ್ಟಿ ನಲ್ಲಿ ಆರಂಭವಾದ ವಿಶ್ವ ಕನ್ನಡ ಹಬ್ಬ ಕಳೆದ ಬಾರಿ ದುಬಾೖ ದೇಶದಲ್ಲಿ ಅತ್ಯಂತ ಯಶಸ್ವಿಗೊಂಡಿದ್ದು ಈ ಬಾರಿ ಕರ್ನಾಟಕ ಪ್ರಸ್‌ ಕ್ಲಬ್‌ ಕೌನ್ಸಿಲ್‌ ಹಾಗೂ ಕನ್ನಡ ಸಂಘ (ಸಿಂಗಾಪುರ) ಸಹಯೋಗದಲ್ಲಿ ಸಿಂಗಾಪುರದಲ್ಲಿ ಇದೇ ನ.9ರಂದು ಗ್ಲೋಬಲ್‌ ಇಂಟರ್‌ ನ್ಯಾಶನಲ್‌ ಸ್ಕೂಲ್‌ನ ಹೊಸ ಕ್ಯಾಂಪಸ್‌ ನ ಸಭಾಂಗಣದಲ್ಲಿ ನಡೆಯಲಿದೆ.

ಪ್ರತೀ ವರ್ಷ ಕನ್ನಡ ಸಂಘ ಸಿಂಗಾಪುರ ನವೆಂಬರ್‌ ಮಾಸದಲ್ಲಿ ಕರ್ನಾಟಕ ರಾಜ್ಯೋತ್ಸವವನ್ನ “ದೀಪೋತ್ಸವ’ ಎನ್ನುವ ಶೀರ್ಷಿಕೆಯಡಿಯಲ್ಲಿ ಆಚರಿಸಿ ಕೊಂಡು ಬರುತ್ತಿದ್ದು ಈ ಬಾರಿ ವಿಶ್ವ ಕನ್ನಡ ಹಬ್ಬ ಸಿಂಗಾಪುರದಲ್ಲಿ ನಡೆಯುತ್ತಿದ್ದುದು ದೀಪೋತ್ಸವಕ್ಕೆ ಇನ್ನಷ್ಟು ಮೆರುಗನ್ನ ತಂದುಕೊಟ್ಟಿದೆ.

ವಿಶ್ವ ಕನ್ನಡ ಹಬ್ಬಕ್ಕೆ ಮುಖ್ಯ ಅತಿಥಿಯಾಗಿ ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ ಹಿರಿಯ ನಟ ದೊಡ್ಡಣ್ಣ ಹಾಗೂ ಇನ್ನೂ ಅನೇಕ ಉದಯೋನ್ಮುಖ ಕಲಾವಿದರ ದಂಡು ಬರಲಿದ್ದು ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದೆ.

Advertisement

ವಿಶ್ವ ಕನ್ನಡಿಗ/ ಕನ್ನಡತಿ ಆಯ್ಕೆ, ನೃತ್ಯ, ಹಾಡುಗಾರಿಕೆ, ವಾದ್ಯಗೋಷ್ಠಿ, ಆಲಂಕಾರಿಕ ಉಡುಗೆಯ ನಡುಗೆ, ಕವಿಗೋಷ್ಠಿ, ಛಾಯಾ ಚಿತ್ರಣ ಹಾಗೂ ಸಾಧಕರಿಗೆ ಸಮ್ಮಾನ ಇನ್ನೂ ಹಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದು ಕನ್ನಡ ಸಂಘ ಸಿಂಗಾಪುರದ ಸಿಂಗನ್ನಡಿಗರು ಮತ್ತು 150ಕ್ಕೂ ಹೆಚ್ಚು ಕಾಲವಿದರ ದಂಡು ಕರುನಾಡಿನಿಂದ ವಿಶ್ವ  ಕನ್ನಡ ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ.

ವಿಶ್ವ ಕನ್ನಡ ಹಬ್ಬವನ್ನ ಜಗತ್ತೇ ತಿರುಗಿ ಕನ್ನಡಿಗರನ್ನ ನೋಡುವಂತೆ ಮಾಡಲು ಕಾರ್ಯ ಕ್ರಮದ ರೂಪರೇಷೆಗಳನ್ನ ರಚಿಸಿ ಪೂರ್ವಾ ಪರ ಕೆಲಸಗಳಲ್ಲಿ  ಕನ್ನಡ ಸಂಘ ಸಿಂಗಾಪುರದ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು, ಸಮಿತಿಯ ಸದಸ್ಯರು ಮತ್ತು ಸಿಂಗನ್ನಡಿಗರು ಕಾರ್ಯ ಪ್ರವೃತ್ತರಾಗಿದ್ದಾರೆ. ಕಾರ್ಯ ಕೆಲಸಗಳು ಭರದಿಂದ ಸಾಗಿದ್ದು ಸಿಂಗನ್ನಡಿಗರು ಕನ್ನಡ ಹಬ್ಬಕ್ಕೆ ಬರುವ  ಅತಿಥಿಗಳ ಸತ್ಕಾರಕ್ಕೆ ಮತ್ತು ವಿಶ್ವ ಕನ್ನಡ ಹಬ್ಬವನ್ನ ಸಿಂಗನ್ನಡಿಗರ ನಾಡ ಹಬ್ಬವನ್ನಾಗಿಸಲು ಕಾತುರದಿಂದ ಕಾಯುತ್ತಿದ್ದಾರೆ.

ವರದಿ: ಶ್ರೀಶೈಲ ಅಂಗಡಿ, ಸಿಂಗಾಪುರ

Advertisement

Udayavani is now on Telegram. Click here to join our channel and stay updated with the latest news.

Next