ಹೊಸದಿಲ್ಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮಂಗಳಯಾನ ನೌಕೆ ಮಂಗಳಗ್ರಹಕ್ಕೆ ಅತಿ ಸಮೀಪದಲ್ಲಿರುವ ಮತ್ತು ಮಂಗಳನ ಅತಿ ದೊಡ್ಡ ಚಂದ್ರನಾದ ಫೋಬೋಸ್‌ನ ಚಿತ್ರಗಳನ್ನು ಬಿಡುಗಡೆ ಮಾಡಿದೆ.
ಜುಲೈ 1ರಂದು ನೌಕೆ ಮಂಗಳಗ್ರಹದಿಂದ 7,200 ಕಿ.ಮೀ. ಮತ್ತು ಫೋಬೋಸ್‌ನಿಂದ 4,200 ಕಿ.ಮೀ. ದೂರದಲ್ಲಿದ್ದಾಗ ಈ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ.
ಚಿತ್ರದ ಪ್ರಾದೇಶಿಕ ರಿಸಲ್ಯೂಷನ್ 210 ಮೀ. ಇದ್ದು, ಇದು 6 ಎಂಪಿಸಿ ಪ್ರೇಮ್‌ಗಳಿಂದ ಉತ್ಪತ್ತಿಯಾದ ಸಂಯೋಜಿತ ಚಿತ್ರವಾಗಿದೆ. ಬಳಿಕ ಈ ಚಿತ್ರಗಳ ಬಣ್ಣಗಳನ್ನು ಸರಿಪಡಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.
ಫೋಬೋಸ್ ಹೆಚ್ಚಾಗಿ ಕಾಬೋನೇಷಿಯಸ್ ಕೊಂಡ್ರೈಟ್‌ಗಳಿಂದ ಕೂಡಿದೆ. ಘರ್ಷಣೆಗಳಿಂದಾಗಿ ಅದರ ಮೇಲ್ಮೈ ಮೇಲೆ ಉಂಟಾದ ಕುಳಿ ಹಾಗೂ ಈ ವೇಳೆ ಹೊರ ಬಂದ ವಿಸರ್ಜಿತ ಪದಾರ್ಥಗಳನ್ನು ಈ ಚಿತ್ರದಲ್ಲಿ ಕಾಣಬಹುದು. ಇವೆಲ್ಲವೂ ಸಣ್ಣ ಹಾಗೂ ದೊಡ್ಡ ಕುಳಿಗಳ ರೂಪದಲ್ಲಿ ಕಂಡು ಬರುತ್ತಿವೆ ಎಂದು ಇಸ್ರೋ ತಿಳಿಸಿದೆ.