ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವಾಕಾಂಕ್ಷಿ ಚಂದ್ರಯಾನ 2ರ ಕನಸು ಹೊತ್ತೂಯ್ದಿದ್ದ ವಿಕ್ರಂ ಲ್ಯಾಂಡರ್, ಚಂದ್ರನ ಸ್ಪರ್ಶಿಸುವ ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದೆ. ಆದರೂ ಇಸ್ರೋ ಪ್ರಯತ್ನವನ್ನು ಕೊಂಡಾಡಿರುವ ರಾಜ್ಯದ ಜನತೆ, ವಿಜ್ಞಾನಿಗಳಿಗೆ ಧೈರ್ಯ ತುಂಬಿದ್ದಾರೆ. ಜತೆಗೆ ಚಂದ್ರಯಾನ 3ಕ್ಕೆ ಸಿದ್ಧರಾಗಲು ಉತ್ಸಾಹ ತುಂಬಿದ್ದಾರೆ.
ಇಸ್ರೋದ ಚಂದ್ರಯಾನ-2 ಬಹುತೇಕ ಯಶಸ್ವಿಯಾಗಿದ್ದು, ಭಾಗಿಯಾದ ಎಲ್ಲಾ ವಿಜ್ಞಾನಿಗಳಿಗೆ ಅಭಿನಂದನೆಗಳು. ಕುಗ್ಗದೇ ಮರಳಿ ಪ್ರಯತ್ನ ಮಾಡಿ. ನಮ್ಮ ಪ್ರಧಾನಿಯವರು ಈಗಾಗಲೇ ಇಸ್ರೋದೊಂದಿಗೆ ನಾವಿದ್ದೇವೆ ಎಂದು ಬಲ ನೀಡಿದ್ದು ಸಂತಸದ ವಿಚಾರ. ಚಂದ್ರಯಾನ-3ರ ಕಾರ್ಯವು ಶೀಘ್ರದಲ್ಲೇ ಶುರುವಾಗಲಿ.
-ಮಧುಕುಮಾರ್ ಬಿಳಿಚೋಡು, ಸಂಶೋಧನಾ ವಿದ್ಯಾರ್ಥಿ
ಇಸ್ರೋ, ಚಂದ್ರಯಾನ-2ರ 48 ದಿನಗಳ ಸುದೀರ್ಘ ಪ್ರಯಾಣದಲ್ಲಿ 47 ದಿನಗಳವರೆಗೆ ನಿರೀಕ್ಷಿತ ಯಶಸ್ಸನ್ನು ಸಾಧಿಸಿದೆ. ಕೇವಲ 2.1ಕಿ.ಮೀ.ಅಂತರದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದಾಗಿ ನೌಕೆ ನಿಯಂತ್ರಣ ಕೇಂದ್ರದೊಂದಿಗೆ ಸಂಪರ್ಕ ಕಳೆದುಕೊಂಡಿದೆ. ವಿಜ್ಞಾನಿಗಳೇ, ಎದೆ ಗುಂದಬೇಡಿ. ಚಂದ್ರನಲ್ಲಿ ನೀರಿನ ಅಂಶವನ್ನು ಜಗತ್ತಿಗೆ ತೋರಿಸಿ ಕೊಟ್ಟವರು ನೀವು. ಇಂದು ಲಕ್ಷಾಂತರ ಮಕ್ಕಳು ನಿಮ್ಮಿಂದ ಸ್ಫೂರ್ತಿಗೊಂಡು ಬಾಹ್ಯಕಾಶ ವಿಜ್ಞಾನದ ಕಡೆ ಆಕರ್ಷಿತರಾಗಿದ್ದಾರೆ.
-ನಾಗರಾಜ ವಿ.ಎಸ್, ಸಮಾಜ ವಿಜ್ಞಾನ ಶಿಕ್ಷಕ
ಅಮೆರಿಕ 12ನೇ ಬಾರಿ, ರಷ್ಯಾ ಏಳು ಬಾರಿಯ ಪ್ರಯತ್ನಗಳ ನಂತರ ಚಂದ್ರಯಾನ ಯಶಸ್ವಿಯಾಗಿದೆ. ಇಸ್ರೋ ಮೊದಲ ಬಾರಿಯೇ ಯಶಸ್ಸು ಕಂಡಿತ್ತು. ಚಂದ್ರಯಾನ-2ರಲ್ಲಿ ಶೇ.95ರಷ್ಟು ಯಶಸ್ಸು ಲಭಿಸಿರುವುದು ಶ್ಲಾಘನೀಯ. ಸದ್ಯ ಕಾಣಿಸಿಕೊಂಡ ತಾಂತ್ರಿಕ ದೋಷವನ್ನು ಸರಿಪಡಿಸಿಕೊಂಡು ಮರಳಿ ಪ್ರಯತ್ನ ಮುಂದುವರಿಸಬೇಕು.
-ರಾಮ್ ಮನೋಹರ್ ನುಜಾಡಿ, ಖಾಸಗಿ ಸಂಸ್ಥೆ ಉದ್ಯೋಗಿ
ವಿಕ್ರಂ ಲ್ಯಾಂಡರ್, ಚಂದ್ರನ ಸ್ಪರ್ಶಿಸುವ ಕೊನೆಯ ಕ್ಷಣಗಳು ನಿಜಕ್ಕೂ ರೋಚಕವಾಗಿದ್ದವು. ಚಂದ್ರಯಾನ -2ರಲ್ಲಿ ಇಸ್ರೋ ಸಾಧನೆ ಕಂಡು ನಿಜಕ್ಕೂ ಸಂತಸವಾಯಿತು. ಮಹಾಸಾಧನೆ ಕೊದಲೆಳೆಯಲ್ಲಿ ಕೈತಪ್ಪಿತು ಎಂಬ ಬೇಸರವನ್ನು ಬಿಟ್ಟು ವಿಜ್ಞಾನಿಗಳನ್ನು ಶ್ಲಾ ಸುವ ಮೂಲಕ ಚಂದ್ರಯಾನ -3ಕ್ಕೆ ಸಿದ್ಧವಾಗೋಣ. ಆಲ್ ದಿ ಬೆಸ್ಟ್ ಇಸ್ರೋ.
-ಮೇಘನಾ, ಭೌತಶಾಸ್ತ್ರ ಉಪನ್ಯಾಸಕಿ