ಬೀದರ: ಜಿಲ್ಲೆಯ ಕಣಜಿ (ಕೆ) ಗ್ರಾಪಂಗೆ ಮತ್ತು ರೈತ ಇಸ್ಮಾಯಿಲ್ ಶಿಂಧೆಗೂ ಬಿಡಿಸಲಾಗದ ನಂಟು. ಸತತ ಐದು ಬಾರಿ ಗೆಲುವು ಸಾಧಿಸುತ್ತ ಬಂದಿರುವ ಈ ಅಪರೂಪದ ಅಭ್ಯರ್ಥಿ ತಮ್ಮ ಜೀವನದ ಅರ್ಧ ಭಾಗವನ್ನು ಪಂಚಾಯತಿಯಲ್ಲೇ ಕಳೆದಿದ್ದಾರೆ. ಅಷ್ಟೇ ಅಲ್ಲ ಇಸ್ಮಾಯಿಲ್ ತಂದೆ ಶಂಬಣ್ಣ ಸಹ ಎರಡು ಬಾರಿ ಸದಸ್ಯರಾಗಿರುವುದು ಸಿಂಧೆ ಕುಟುಂಬದ ವಿಶೇಷ.
ಕೇವಲ ಐದನೇ ತರಗತಿವರೆಗೆ ಮಾತ್ರ ಶಿಕ್ಷಣ ಪಡೆದಿರುವ ಇಸ್ಮಾಯಿಲ್ ಶಿಂಧೆ (60) ಒಬ್ಬ ಕೃಷಿಕ. ಕಣಜಿ(ಕೆ) ಗ್ರಾಪಂ ವ್ಯಾಪ್ತಿಯ ಹುಣಜಿ ಗ್ರಾಮದಿಂದ ಕಳೆದ ಐದು ಅವಧಿಗೆ ಸದಸ್ಯರಾಗಿ ಆಯ್ಕೆ ಆಗಿದ್ದಾರೆ. ಪ್ರತಿ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವಿನ ನಗೆಬೀರುತ್ತ ಬಂದಿದ್ದಾರೆ. ಗ್ರಾಮದ ಜನರು ಕೂಡ ಪದೇ ಪದೆ ಇಸ್ಮಾಯಿಲ್ ಅವರನ್ನೇ ಆಯ್ಕೆ ಮಾಡಿಕೊಳ್ಳುವ ಮೂಲಕ ಸೋಲಿಲ್ಲದ ಸರದಾರ ಎಂಬ ಪಟ್ಟಕ್ಕೇರಿಸಿದ್ದಾರೆ.
ಈ ಗ್ರಾಪಂ ವ್ಯಾಪ್ತಿಯಲ್ಲಿ ಕಣಜಿ ಮತ್ತು ಹುಣಜಿ ಎರಡು ಗ್ರಾಮಗಳು ಸೇರಿದ್ದು, ಒಟ್ಟು 12 ಸದಸ್ಯ ಸ್ಥಾನಗಳಿವೆ. ಕಳೆದ ನಾಲ್ಕು ದಶಕಗಳಿಂದ ಹುಣಜಿ ಗ್ರಾಮದ ಒಂದು ಸ್ಥಾನ ಇಸ್ಮಾಯಿಲ್ ಕುಟುಂಬಕ್ಕೆ ಸೀಮಿತ ಆದಂತಾಗಿದೆ. ಇಸ್ಮಾಯಿಲ್‌ಗೂ ಮುನ್ನ ಅವರ ತಂದೆ ಶಂಬಣ್ಣ ಎರಡು ಬಾರಿ ಮಂಡಲ್ ಪಂಚಾಯತ್‌ನ ಸದಸ್ಯರಾಗಿ ಜನಮನ್ನಣೆ ಪಡೆದಿದ್ದರು. ಮುಂದೆ ಅವರ ಮಗ ಸತತವಾಗಿ ಗೆಲ್ಲುತ್ತ ಬಂದಿದ್ದು, ಈಗ 6 ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಸರಳ, ಸಜ್ಜನಿಕೆಯ ವ್ಯಕ್ತಿ: ಇಸ್ಮಾಯಿಲ್ ಅತಿ ಸರಳ, ಸಜ್ಜನಿಕೆಯ ವ್ಯಕ್ತಿ. ಒಂದೆರಡು ಎಕರೆ ಭೂಮಿಯಲ್ಲಿ ಕೃಷಿ ಕಾಯಕ ಮಾಡಿಕೊಂಡಿರುವ ಈ ಸದಸ್ಯ ತಮ್ಮ ಗ್ರಾಮ, ಗ್ರಾಮದ ಜನರ ಅಭಿವೃದ್ಧಿ ಅವರ ಕಷ್ಟ-ಸುಖಕ್ಕಾಗಿ ಅವರ ಮನಸ್ಸು ಮಿಡಿಯುತ್ತಲೇ ಇರುತ್ತದೆ. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳೊಂದಿಗೆ ಕಾಡಿ ಬೇಡಿ ಗ್ರಾಮಕ್ಕೆ ಸಾಕಷ್ಟು ಯೋಜನೆಗಳನ್ನು ತಂದಿದ್ದಾರೆ. ನಿರ್ಗತಿಕರಿಗೆ ನಿವೇಶನ, ಮನೆ, ಭೂಮಿ, ಕುಡಿಯುವ ನೀರು, ರಸ್ತೆ ಮತ್ತು ಚರಂಡಿ ಸೇರಿ ಮೂಲ ಸೌಕರ್ಯ ಕಲ್ಪಿಸಿಕೊಟ್ಟು ಪ್ರಾಮಾಣಿಕ ಜನಪ್ರತಿನಿಧಿ ಎನಿಸಿಕೊಂಡಿದ್ದಾರೆ. ಹಾಗಾಗಿಯೇ ಪ್ರತಿ ಚುನಾವಣೆಯಲ್ಲೂ ಗ್ರಾಮಸ್ಥರು ಭಾರೀ ಅಂತರದಿಂದ ಗೆಲ್ಲಿಸುತ್ತ ಬಂದಿದ್ದಾರೆ.
ಸತತ ಐದು ಬಾರಿ ಸದಸ್ಯರಾಗಿರುವ ಇಸ್ಮಾಯಿಲ್‌ಗೆ ಗ್ರಾಪಂ ಅಧ್ಯಕ್ಷರಾಗುವ ಆಸೆ ಮಾತ್ರ ಈಡೇರಿಲ್ಲ. ಕಣಜಿ (ಕೆ) ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ನಿಗದಿತ ಮೀಸಲಾತಿ ಯೋಗ ಕೂಡಿ ಬಂದಿಲ್ಲ. ಇನ್ನು ಕಣಜಿ(ಕೆ) ಪಂಚಾಯತನ ಧರ್ಮಣ್ಣ ಪಾಟೀಲ ಸಹ ಹ್ಯಾಟ್ರಿಕ್ ಗೆಲುವು ಸಾಧಿಸಿ ಈಗ ನಾಲ್ಕನೇ ಸಲ ಹಾಗೂ ಪರಮೇಶ್ವರ ಎರಡು ಬಾರಿ ಗೆದ್ದು, ಮೂರನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ನಮ್ಮ ಕುಟುಂಬ ಗ್ರಾಮ, ಗ್ರಾಮಸ್ಥರ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಹಾಗಾಗಿ ಗ್ರಾಪಂ ಚುನಾವಣೆಯಲ್ಲಿ ಸತತ 5 ಬಾರಿ ನನ್ನನ್ನ ಗೆಲ್ಲಿಸುತ್ತ ಬಂದಿದ್ದಾರೆ. ನಮ್ಮ ತಂದೆಯೂ ಎರಡು ಬಾರಿ ಸದಸ್ಯರಾಗಿದ್ದರು. ಜನರ ಸೇವೆಯೇ ನನಗೆ ಮುಖ್ಯ. ಪ್ರಾಮಾಣಿಕವಾಗಿ ಸರ್ಕಾರದ ಯೋಜನೆಗಳನ್ನು ಗ್ರಾಮಕ್ಕೆ ಮುಟ್ಟಿಸುವ ಕೆಲಸ ಮಾಡುತ್ತೇನೆ. ಈ ಸಲವೂ ನನಗೆ ಜನ ಬೆಂಬಲ ವ್ಯಕ್ತವಾಗಲಿದೆ. –
ಇಸ್ಮಾಯಿಲ್ ಶಿಂಧೆ, ಗ್ರಾಪಂ ಅಭ್ಯರ್ಥಿ
–ವಿಶೇಷ ವರದಿ