ಹೊಸದಿಲ್ಲಿ: ಇಸ್ಲಾಂ ಅತ್ಯಂತ ಹಳೆಯ ಧರ್ಮ ಮತ್ತು ಭಾರತದಲ್ಲಿ ಹುಟ್ಟಿಕೊಂಡಿದೆ. ಇಸ್ಲಾಂ ಧರ್ಮವು ಭಾರತಕ್ಕೆ ಹೊರಗಿನಿಂದ ಬಂದಿಲ್ಲ, ಇಲ್ಲಿಯೇ ಹುಟ್ಟಿಕೊಂಡಿದೆ ಎಂದು ಜಮಿಯತ್ ಉಲೇಮಾ-ಎ-ಹಿಂದ್ ಮುಖ್ಯಸ್ಥ ಮಹಮೂದ್ ಮದನಿ ಹೇಳಿದ್ದಾರೆ.
ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ಆರಂಭವಾದ ಜಮಿಯತ್ ನ 34ನೇ ಸಾಮಾನ್ಯ ಅಧಿವೇಶನದಲ್ಲಿ ಮದನಿ ಮಾತನಾಡುತ್ತಿದ್ದರು.
ಇದನ್ನೂ ಓದಿ:ಕೇಂದ್ರ ರೈಲ್ವೇ ಸಚಿವರ ಸಿಂಪ್ಲಿಸಿಟಿಗೆ ನೆಟ್ಟಿಗರ ಪ್ರಶಂಸೆ
“ಈ ನೆಲದ ವಿಶೇಷತೆ ಏನೆಂದರೆ ಇದು ಖುದಾ ಅಬು-ಅಲ್-ಬಷರನ ಮೊದಲ ಪೈಗಂಬರನ ನಾಡು. ಅವರು ಮೊದಲು ಇಲ್ಲಿಗೆ ಬಂದರು. ಈ ಭೂಮಿ ಇಸ್ಲಾಂ ಧರ್ಮದ ಜನ್ಮಸ್ಥಳವಾಗಿದೆ. ಇದು ಮುಸ್ಲಿಮರ ಮೊದಲ ತಾಯ್ನಾಡು. ಇಸ್ಲಾಂ ಧರ್ಮವು ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ಅಥವಾ ಯೋಚಿಸುವುದು ಸಂಪೂರ್ಣವಾಗಿ ತಪ್ಪು ಮತ್ತು ಆಧಾರ ರಹಿತವಾಗಿದೆ. ಇಸ್ಲಾಂ ಈ ರಾಷ್ಟ್ರದ ಧರ್ಮ. ಇದು ಎಲ್ಲಾ ಧರ್ಮಗಳಲ್ಲಿ ಅತ್ಯಂತ ಹಳೆಯ ಧರ್ಮವಾಗಿದೆ. ಇಸ್ಲಾಂ ಧರ್ಮದ ಕೊನೆಯ ಪೈಗಂಬರ್ ಹಜರತ್ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಂ ಈ ಕಲ್ಪನೆಯನ್ನು ಪೂರೈಸಲು ಇಲ್ಲಿಗೆ ಬಂದರು. ಹೀಗಾಗಿ, ಹಿಂದಿ ಮುಸ್ಲಿಮರಿಗೆ ಭಾರತ ಅತ್ಯುತ್ತಮ ದೇಶ ಎಂದು ಮದನಿ ಹೇಳಿದರು.
ದೇಶದಲ್ಲಿ ಇಸ್ಲಾಮೋಫೋಬಿಯಾ ಹೆಚ್ಚುತ್ತಿದೆ ಮತ್ತು ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವವರನ್ನು ನಿರ್ದಿಷ್ಟವಾಗಿ ಶಿಕ್ಷಿಸಲು ಪ್ರತ್ಯೇಕ ಕಾನೂನನ್ನು ಜಾರಿಗೊಳಿಸಬೇಕೆಂದು ಪ್ರಮುಖ ಮುಸ್ಲಿಂ ಸಂಸ್ಥೆ ಜಮಿಯತ್ ಉಲೇಮಾ-ಎ-ಹಿಂದ್ ಸಭೆ ಒತ್ತಾಯಿಸಿತು.
ದೇಶದಲ್ಲಿ ದ್ವೇಷದ ಪ್ರಚಾರ ಮತ್ತು ಇಸ್ಲಾಮೋಫೋಬಿಯಾದಲ್ಲಿ ಆಪಾದಿತ ಹೆಚ್ಚಳ ಸೇರಿದಂತೆ ಹಲವಾರು ನಿರ್ಣಯಗಳನ್ನು ಸಂಘಟನೆಯು ಅಂಗೀಕರಿಸಿತು. “ಇಸ್ಲಾಮೋಫೋಬಿಯಾ ಹೆಚ್ಚಳ, ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಮತ್ತು ಪ್ರಚೋದನೆಯ ಪ್ರಕರಣಗಳ ಜೊತೆಗೆ, ಇತ್ತೀಚಿನ ದಿನಗಳಲ್ಲಿ ನಮ್ಮ ದೇಶದಲ್ಲಿ ಆತಂಕಕಾರಿ ಮಟ್ಟಕ್ಕೆ ಏರಿದೆ” ಎಂದು ಜೈಮಿಯತ್ ಆರೋಪಿಸಿದೆ.