ಬೆಂಗಳೂರು: ಬಾಂಗ್ಲಾದೇಶದ ಹಿಂದೂ ಸಮುದಾಯದ ಮೇಲೆ ದಾಳಿ ಹಾಗೂ ಇಸ್ಕಾನ್ ಮತ್ತು ಇತರ ಸಂಸ್ಥೆಗಳ ದೇವಸ್ಥಾನಗಳನ್ನು ಧ್ವಂಸ ಮಾಡಿದ್ದನ್ನು ಖಂಡಿಸಿ ಶನಿವಾರ ಬೆಂಗಳೂರಿನ ಇಸ್ಕಾನ್ ನಲ್ಲಿ ಕೀರ್ತನೆ ಮೂಲಕ ಶಾಂತಿಯುತ ಪ್ರತಿಭಟನೆ ನಡೆಯಿತು.
ಇಸ್ಕಾನ್ ಬೆಂಗಳೂರಿನ ಅಧ್ಯಕ್ಷರ ಮಧು ಪಂಡಿತ ದಾಸ ಮಾತನಾಡಿ, ಬಾಂಗ್ಲಾ ದೇಶದಲ್ಲಿ ಇಸ್ಕಾನ್ ಭಕ್ತರ, ಹಿಂದೂಗಳ ಮತ್ತು ಇತರ ಅಲ್ಪ ಸಂಖ್ಯಾತರ ಮೇಲೆ ನಡೆದ ಅಪ್ರಚೋದಿತ ದಾಳಿಯಿಂದ ನಾವು ದುಃಖಿತರಾಗಿದ್ದೇವೆ. ಅಲ್ಲಿ ಹಲ್ಲೆಗೊಳಗಾದವರಿಗೆ ನಾವೆಲ್ಲ ಒಗ್ಗಟ್ಟಾಗಿ ಅವರಿಗೆ ಬೆಂಬಲ ಮತ್ತು ಐಕಮತ್ಯ ಸೂಚಿಸುತ್ತೇವೆ. ಅವರ ಸುರಕ್ಷತೆ, ಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇವೆ. ಬಾಂಗ್ಲಾದೇಶದ ಸರ್ಕಾರವು ನೊಂದ ಅಲ್ಪ ಸಂಖ್ಯಾತರ ರಕ್ಷಣೆಗಾಗಿ ಈ ಕೂಡಲೇ ವ್ಯವಸ್ಥೆ ಮಾಡಬೇಕು ಮತ್ತು ಇಂಥ ಘಟನೆಗಳು ಮುಂದೆ ನಡೆಯದಿರುವಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಭಾರತ ಸರ್ಕಾರ ಕೂಡ ನೆರೆ ರಾಷ್ಟ್ರಗಳ ಜೊತೆಗೂಡಿ ಈ ಪ್ರದೇಶದ ಅಲ್ಪ ಸಂಖ್ಯಾತರ ಹಿತಾಸಕ್ತಿಗಳನ್ನು ಸಂರಕ್ಷಿಸಬೇಕು ಎಂದು ಕೋರಿದರು.
ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ದೇವರ ವಿಗ್ರಹಗಳನ್ನು ಮುರಿದು ಹಾಕಲಾಗಿದೆ ಮತ್ತು ದುರ್ಗಾ ಪೂಜೆಯ ಪಂಡಾಲುಗಳನ್ನು ಸುಟ್ಟು ಹಾಕಲಾಗಿದೆ. ಮತಾಂಧ ಜನರ ಗುಂಪುಗಳು ನೋಖಾಲಿ ಇಸ್ಕಾನ್ ನ ಪ್ರಾಂಥ ಚಂದ್ರ ದಾಸ ಮತ್ತು ಜತನ್ ಚಂದ್ರ ಸಾಹ ಎಂಬ ಇಬ್ಬರು ಭಕ್ತರಲ್ಲದೆ ಅನೇಕ ಜನರನ್ನು ಸಾಯಿಸಿವೆ. ಅನೇಕ ಹಿಂದೂಗಳ ಮನೆಗಳನ್ನು ಮತ್ತು ಅಂಗಡಿಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಿ ಸುಟ್ಟು ಹಾಕಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮತ್ತು ಇತರ ಅಲ್ಪ ಸಂಖ್ಯಾತ ಗುಂಪುಗಳ ಮೇಲೆ ದಾಳಿಗಳು ದಶಕಗಳಿಂದ ನಡೆಯುತ್ತಲೇ ಇವೆ. ಇದು ಈಗ ನಿಲ್ಲಬೇಕು ಎಂದು ಆಗ್ರಹಿಸಿದರು.
ಶಾಂತಿಯುತ, ಕಾನೂನು ಪರಿಪಾಲಿಸುವ ಸಮುದಾಯಗಳ ಮೇಲಿನ ಈ ದಾಳಿಗಳು ಮನುಕುಲದ ಸಾಮೂಹಿಕ ಪ್ರಜ್ಞೆಯನ್ನೇ ಕಲುಕಿವೆ. ಈ ದುರ್ಬಲ ಜನರಿಗಾಗಿ ರಕ್ಷಣೆಯ ಬೇಡಿಕೆ ಒಡ್ಡಲು ಇಸ್ಕಾನ್ ಚಳುವಳಿಯು ಜಗತ್ತಿನಾದ್ಯಂತ ಶಾಂತಿಯುತ ಪ್ರತಿಭಟನೆಗಳನ್ನು ಆಯೋಜಿಸಿದೆ. ಬಾಂಗ್ಲಾದೇಶದ ಹಿಂದೂಗಳೊಂದಿಗೆ ಐಕಮತ್ಯ ಸೂಚಿಸಲು ಮತ್ತು ತನ್ನ ನೋವು, ದುಃಖವನ್ನು ಅಭಿವ್ಯಕ್ತಿಪಡಿಸಲು ಜಾಗತಿಕ ಹಿಂದೂ ಸಮಾಜವು ಜಾಗತಿಕ ಕೀರ್ತನ ಮೆರವಣಿಗೆ ನಡೆಸಿದೆ. ಈ ಪ್ರತಿಭಟನೆಯು ಯಾವುದೇ ಧಾರ್ಮಿಕ ಸಮುದಾಯದ ವಿರುದ್ಧವಾಗಲಿ, ಬಾಂಗ್ಲಾದೇಶದ ಸರ್ಕಾರದ ವಿರುದ್ಧವಾಗಲಿ ಅಲ್ಲ. ಇದು ಇರುವುದು ಆ ದೇಶದ ಎಲ್ಲ ಅಲ್ಪಸಂಖ್ಯಾತರ ಸುರಕ್ಷತೆಯ ಬೇಡಿಕೆಯಾಗಿ ನಡೆದಿದೆ ಎಂದರು.
ಬಾಂಗ್ಲಾದೇಶದಲ್ಲಿ ಹಿಂಸಾಚಾರಕ್ಕೆ ಒಳಗಾದ ಅಲ್ಪ ಸಂಖ್ಯಾತರ ಜೊತೆ ಐಕಮತ್ಯ ಸೂಚಿಸಲು ರಾಜಾಜಿನಗರದ ಇಸ್ಕಾನ್ ಬೆಂಗಳೂರು ಕೂಡ ಹರೇ ಕೃಷ್ಣ ಬೆಟ್ಟದ ಮೇಲೆ ಶಾಂತಿಯುತ ಕೀರ್ತನ ಮೆರವಣಿಗೆ ನಡೆಸಿತು. ದೇವಸ್ಥಾನದ ಸ್ವಯಂ ಸೇವಕರು, ಭಕ್ತರು ಭಾಗವಹಿಸಿದ್ದರು.