Advertisement

ಪ್ರೀಮಿಯಂ ತುಂಬಿಸಿಕೊಳ್ಳಲು ಮಾತ್ರ ಬೆಳೆ ವಿಮೆ ಯೋಜನೆಯೇ?

06:00 AM Dec 11, 2018 | |

ಹೌದು ಬೆಳೆ ವಿಮೆ ಯೋಜನೆ ಪ್ರಧಾನಮಂತ್ರಿಗಳ ಹೆಸರಿನೊಂದಿಗೆ ಹೊಸ ಹೆಸರು ಹೊಂದಿದೆ. ಆದರೆ ಇದರಲ್ಲಿರುವ ಲೋಪದೋಷಗಳನ್ನು ತೆಗೆದು ಹಾಕಿ ಕುರೂಪವನ್ನು ಇಲ್ಲವಾಗಿಸಿ ಹೊಸ ರೂಪ ಹೊಸ ಆಕಾರ ಪಡೆದುಕೊಳ್ಳಲೇ ಇಲ್ಲ. ಇದೊಂದು ದೊಡ್ಡ ದುರಂತ. ಹೋಬಳಿ ಮಟ್ಟದಲ್ಲಿದ್ದ ಘಟಕ (ಯೂನಿಟ್‌) ಗ್ರಾಮ ಪಂಚಾಯತಿ ಮಟ್ಟಕ್ಕೆ ಬಂದಿದೆ. ವಿಮೆಯ ಪ್ರೀಮಿಯಂ ಮೊತ್ತ ಕಡಿಮೆ ಮಾಡಲಾಗಿದೆ,  ಪರಿಹಾರದ ಮೊತ್ತದಲ್ಲಿ ಹೆಚ್ಚಳವಾಗಿಲ್ಲ. ಹವಾಮಾನ ಆಧಾರಿತ ಬೆಳೆವಿಮೆ ಯೋಜನೆ ಜಾರಿಯಲ್ಲಿದೆ. ಬೆಳೆವಿಮೆ ಮಾಡಿಸಲು ವ್ಯಾಪಕ ಪ್ರಚಾರ ಮಾಡಲಾಗಿದೆ. ವಿಮೆ ಪ್ರೀಮಿಯಂ ರೈತರಿಂದ ತುಂಬಿಸಿದ್ದು ದೊಡ್ಡ ಸುದ್ದಿ ಆಗಿದೆ. ವಿಮೆ ಪರಿಹಾರದ ಮೊತ್ತ ರೈತರ ಕೈಗೇ ಸಿಗುತ್ತಿಲ್ಲ. ಕೃಷಿಕರು ಮಳೆ ನಂಬಿ ಜೂಜಾಟ ಆಡಿದಂತೆ ಬೆಳೆ ವಿಮೆಯೂ ಜೂಜಾಟ ಆಗಿದೆ.

Advertisement

ಕೆಲ ತಿಂಗಳ ಹಿಂದೆ ಇಬ್ಬರು ಸಂಸತ್‌ ಸದಸ್ಯರು ಕೇಂದ್ರ ಸರಕಾರ ಬೆಳೆವಿಮೆ ಪರಿಹಾರದ ಮೊತ್ತ ಬಿಡುಗಡೆ ಮಾಡಿದೆ, ಒಂದು ವಾರದಲ್ಲಿ ರೈತರ ಖಾತೆಗಳಿಗೆ ನೇರವಾಗಿ ಜಮೆ ಆಗುವುದು. ಹೀಗೆಂದು ಹೆಮ್ಮೆಯಿಂದ ಪತ್ರಿಕಾ ಹೇಳಿಕೆ ಕೊಟ್ಟಿದ್ದರು. ರೈತರು ಬ್ಯಾಂಕಿನ ಬಾಗಿಲಿಗೆ ಹೋಗಿ ನೋಡಿದರೆ ವಿಮೆ ಹಣ ಜಮಾ ಆಗಿಲ್ಲ ಎಂಬ ಉತ್ತರ ಕೇಳಿ ಹತಾಶೆಗೊಂಡು ಬರುತ್ತಿದ್ದಾರೆ. ಇದು 2016-17ನೆ ಸಾಲಿನ ಹಿಂಗಾರು ಹಂಗಾಮಿನ ಬೆಳೆ ವಿಮೆ ಪರಿಹಾರದ ಸುದ್ದಿ ಇನ್ನು 2017-18ನೆ ಸಾಲಿನ ಮುಂಗಾರು-ಹಿಂಗಾರು ಹಂಗಾಮಿನ ಸುದ್ದಿಯೇ ಇಲ್ಲ. ಇಂತಹುದರಲ್ಲಿ 2018-19ನೇ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆ ಯೋಜನೆ ಜಾರಿಗೆ ಬಂದಿದ್ದು, ಪ್ರೀಮಿಯಂ ಹಣ ಕಟ್ಟುವ ಕಾಲಾವಕಾಶವೂ ಮುಗಿದು ಹೋಗಿದೆ. ಹೀಗಾಗಿ ಪ್ರೀಮಿಯಂ ತುಂಬಿಸಿಕೊಳ್ಳಲು  ಮಾತ್ರ ಬೆಳೆವಿಮೆ ಯೋಜನೆ ಇದೆ ಎಂಬಂತಾಗಿದೆ.

ಒಂದು ಕಡೆ ಬೆಳೆ ನಷ್ಟವಾದ ಸಂಕಟ. ಬೆಳೆ ವಿಮೆ ಮೂಡಿಸಲು ಸಾಲ ಮಾಡಿ ಅದರ ಬಾಲ ಉದ್ದವಾಗುತ್ತಿರುವ ಸಂಕಟ ಇನ್ನೊಂದು ಕಡೆಗೆ ರೈತರು ಬೆಳೆವಿಮೆ ಪ್ರೀಮಿಯಂ ಹಣ ಕಟ್ಟೆ ವಿಮೆ ಪರಿಹಾರ ಇಂದು ಬಂದೀತು ನಾಳೆ ಬಂದೀತೆಂದು ಬಾರದ ಮಳೆಗೆ ಕಾದಂತೆ ಕಾಯುತ್ತಿರುವ ಸಂಕಟ ಮತ್ತೂಂದೆಡೆಗೆ. ವೈಜ್ಞಾನಿಕ ಕೃಷಿ ಮಾಡಬೇಕೆಂದು ಹೇಳಲಾಗುತ್ತಿದೆ. ಆದರೆ ರೈತರಿಗೆ ರೂಪಿಸುತ್ತಿರುವ ಯೋಜನೆಗಳು ಅವೈಜ್ಞಾನಿಕ ಆಗುತ್ತಿವೆ. ಒಂದು ಹಂಗಾಮಿನಲ್ಲಿ ಬೆಳೆ ಬಾರದೇ ಹೋದರೆ ಮತ್ತೂಂದು ಹಂಗಾಮಿನ ತನಕ ರೈತರು ಕಾಯುತ್ತ ಕೂಡ್ರಬೇಕು. ಅದೇ ರೀತಿ ಒಂದು ಹಂಗಾಮಿನಲ್ಲಿ ಕಾಯುತ್ತ ಕೂಡ್ರಬೇಕಿದೆ. ಇದ್ಯಾವ ನ್ಯಾಯ. ಇದ್ಯಾವ ವೈಜ್ಞಾನಿಕತೆ. ಇಂದಿನ ಡಿಜಿಟಲ್‌ ಇಂಡಿಯಾದ ಯುಗದಲ್ಲಿ ರೈತರು ಬೆಳೆ ವಿಮೆ ಪರಿಹಾರ ಪಡೆಯಲು ಕಾದು ಕಾದು ಸುಸ್ತಾಗುವದು. ರೈತರ ಹಕ್ಕನ್ನೇ ಕಸಿದುಕೊಂಡಿರುವುದು ಇದೆಂತಹ ಆಡಳಿತ? ರೈತರ ಕಲ್ಯಾಣದ ಕರಾಳ ಮುಖವೇ ಸರಿ!

ರೈತರು ಯಾರನ್ನು ಕೇಳಬೇಕು?: ವಿಮೆ ಪ್ರೀಮಿಯಂ ಹಣ ಕಟ್ಟಲು ಸಮೀಪದ ಬ್ಯಾಂಕಿಗೆ ರೈತರು ಹೋಗುತ್ತಾರೆ. ವಿಮೆ ಪ್ರೀಮಿಯಂ ಹಣ ಕಟ್ಟಲು ಅವಧಿಯನ್ನು ನಿಗದಿಗೊಳಿಸಲಾಗಿದೆ. ಅದೇ ವಿಮೆ ಪರಿಹಾರದ ಮೊತ್ತ ಬರದೇ ಇದ್ದಾಗ ರೈತರು ಬ್ಯಾಂಕಿಗೆ ಹೋಗಿ ಕೇಳಿದರೆ ವಿಮಾ ಕಂಪನಿಯನ್ನು ಕೇಳಬೇಕು ಎನ್ನುತ್ತಾರೆ. ಬೆಳೆವಿಮೆ ಪರಿಹಾರ ರೈತರ ಖಾತೆಗೆ ಜಮೆ ಮಾಡಲಾಗುವುದೆಂಬುದು ನಿಜ. ವಿಮೆ ಪರಿಹಾರದ ಮೊತ್ತ ಎರಡು ಮೂರು ವರ್ಷವಾದರೂ ರೈತರ ಖಾತೆಗೆ ಜಮೆ ಆಗಿಲ್ಲ. ಯಾಕೆಂದು ಯಾರನ್ನು ಕೇಳಬೇಕು. ಯಾರನ್ನು ದೂರಬೇಕು. ರೈತರ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರು?

ಬೆಳೆ ನಷ್ಟ ಹವಾಮಾನದ ವೈಪರೀತ್ಯದಿಂದಷ್ಟೇ ಆಗದು – ಅತಿವೃಷ್ಟಿ ಅನಾವೃಷ್ಟಿಯಿಂದ, ಕಳಪೆ ಬೀಜದಿಂದ, ಕೀಟದ ಕಾಟದಿಂದ, ರೋಗ ಬಾಧೆಯಿಂದ ಬೆಲೆ ಕುಸಿತದಿಂದ ಹಾಗೂ ಹೆಚ್ಚು ಉತ್ಪಾದನೆ ಮಾಡಿದ್ದರಿಂದಲೂ ರೈತರಿಗೆ ನಷ್ಟ ಆಗುತ್ತದೆ. ಆಲಿಕಲ್ಲು ಬೀಳುವುದರಿಂದ, ಕಾಡು ಪ್ರಾಣಿಗಳ ಹಾವಳಿಯಿಂದಲೂ ಬೆಳ ನಷ್ಟ ಆಗುವುದು ಸಕಾಲಿಕ ಬಿತ್ತನೆ ಮಾಡಲು ಸಾಧ್ಯವಿಲ್ಲದ ಸಂದರ್ಭದಲ್ಲೂ ಬೆಳೆನಷ್ಟ ಆಗುವುದು, ಮಳೆ, ಚಳಿ, ಬಿಸಿಲು ಆಯಾ ಬೆಳೆಗಳ ಸಂದಿಗ್ಧ ಹಂತಗಳಲ್ಲಿ ಪೂರಕ ಆಗಿರಬೇಕು. ಬೆಳೆ ನಷ್ಟಕ್ಕೆ ಇನ್ನೂ ಹಲವಾರು ಕಾರಣ ಇವೆ. ಒಂದು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೆಳೆದ ಬೆಳೆಯನ್ನು ಒಂದು ಘಟಕ ಎಂದು ಪರಿಗಣಿಸುವುದು ವೈಜ್ಞಾನಿಕ ಕ್ರಮ ಆಗಲಾರದು.

Advertisement

ರೈತನ ಪ್ರತಿಯೊಂದು ಹೊಲವೂ ಒಂದು ಘಟಕ ಎಂದು ಪರಿಗಣಿಸಬೇಕು. ಈಗ ಹೋಬಳಿ ಮಟ್ಟದಲ್ಲಿ ಮತ್ತು ಗ್ರಾಮ ಪಂಚಾಯತಿ ಮಟ್ಟದಲ್ಲಿ ಘಟಕ ಎಂದು ಪರಿಗಣಿಸಲಾಗುತ್ತಿದೆ. ಇಂದಿನ ಮಳೆಗಾಲ ವ್ಯಾಪಕ ಆಗಿರುವುದಿಲ್ಲ. ಒಂದು ಹೊಲಕ್ಕೆ ಆದ ಮಳೆ ಇನ್ನೊಂದು ಹೊಲಕ್ಕೆ ಆಗುವುದಿಲ್ಲ. ಒಂದೇ ಊರಿನಲ್ಲಿ ಪೂರ್ವ ಭಾಗದಲ್ಲಿ ಆಗುವ ಮಳೆ ಪಶ್ಚಿಮ ಭಾಗದಲ್ಲಿ ಆಗಿರಲಾರದು. ಒಂದು ಹೊಲದ ಫ‌ಲವತ್ತತೆಯಂತೆ ಇನ್ನೊಂದು ಹೊಲದ ಫ‌ಲವತ್ತತೆ ಇರಲಾರದು. ಒಬ್ಬ ರೈತ ಮಾಡುವ ಬೆಳೆಗಳ ಆರೈಕೆ, ಸಕಾಲಿಕ ಅಂದರೆ ಹಂಗಾಮಿಗೆ ತಕ್ಕಂತೆ ಬೆಳೆ ಮಾಡಿದಂತೆ ಮತ್ತೂಬ್ಬ ರೈತನಿಗೆ ಬೆಳೆ ಮಾಡಲು ಸಾಧ್ಯವಾಗದು. ಕಂದಾಯ ಇಲಾಖೆ ಹೋಬಳಿ ಅಥವಾ ಗ್ರಾಮ ಪಂಚಾಯತಿ ಮಟ್ಟದಲ್ಲಿ ಒಂದೆರಡು ಹೊಲಗಳನ್ನು ಬೆಳೆ ಮಾದರಿಗೆಂದು ಆಯ್ಕೆ ಮಾಡುತ್ತಾರೆ. ಆಯ್ಕೆ ಮಾಡಿದ ಮಾದರಿ ಹೊಲ(ಪ್ಲಾಟ್‌)ನಲ್ಲಿ ಸರಿಯಾಗಿ ಬೆಳೆ ಬಂದಿದ್ದು, ಬೇರೆ ಗ್ರಾಮದಲ್ಲಿರುವ ಹೊಲಗಳಲ್ಲಿ ಬೆಳೆ ಹಾನಿ ಆಗಿರುತ್ತದೆ ಅಥವಾ ಮಾದರಿ ಪ್ಲಾಟ್‌ನಲ್ಲಿ ಬೆಳೆ ಬಾರದೆ ಇನ್ನುಳಿದ ಗ್ರಾಮದ ಹೊಲಗಳಲ್ಲಿ ಬೆಳೆ ಚೆನ್ನಾಗಿ ಬಂದಿರುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರತಿ ರೈತನ ಹೊಲವೂ ಒಂದು ಘಟಕ ಎಂದು ಪರಿಗಣಿಸಬೇಕಿದೆ. ಯಾವ ವ್ಯಕ್ತಿ ಜೀವವಿಮೆ ಮಾಡಿಸಿರುತ್ತಾನೋ ಆತನಿಗೆ ಅಪಘಾತ ಅಥವಾ ಸಾವು ಸಂಭವಿಸಿದಾಗ ಜೀವವಿಮೆ ಪರಿಹಾರ ಸಿಗುವ ವ್ಯವಸ್ಥೆ ಜೀವವಿಮೆ ಯೋಜನೆಯಲ್ಲಿ ಇರುವುದೋ ಹಾಗೆಯೇ ಬೆಳೆವಿಮೆಯನ್ನು ಸಹಿತ ಆಯಾ ರೈತನ ಆಯಾ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಿದ ರೈತನಿಗೆ ಬೆಳೆನಷ್ಟವಾದಾಗ ವಿಮೆ ಪರಿಹಾರ ಸಿಗುವಂತಾಗಬೇಕು. ಸುಮ್ಮನೆ  ವಿಮೆ ಯೋಜನೆಯ ಬಗ್ಗೆ ಜಾಹೀರಾತುಗಳಲ್ಲಿ ಪ್ರಚಾರ ಮಾಡಿದರೆ ಬೋರ್ಗಲ್ಲ ಮೇಲೆ ಮಳೆ ಸುರಿಸಿದಂತಾಗುವುದು.

ಬೆಳೆನಷ್ಟದ ಅಂದಾಜು ಅವೈಜ್ಞಾನಿಕ: ಬೆಳೆನಷ್ಟದ ಅಂದಾಜು ಆಯಾ ವರ್ಷದ ಬೆಳೆನಷ್ಟಕ್ಕೆ ಸೀಮಿತ ಆಗಿರಬೇಕು. ಹೊರತು ಈಗ ಮಾಡಲಾಗುತ್ತಿರುವ ಏಳು ವರ್ಷಗಳ ಬೆಳೆಯ ಇಳುವರಿಯ ಸರಾಸರಿ ನಷ್ಟ ಪರಿಗಣನೆ ಅವೈಜ್ಞಾನಿಕ ಮತ್ತು ಅನ್ಯಾಯ ಹಾಗೂ ಮೋಸದ ಸಂಗತಿ ಆಗಿದೆ. ಇಂದಿನ ಡಿಜಿಟಲ್‌ ತಂತ್ರಜ್ಞಾನದ ಯುಗದಲ್ಲಿ ಬೆಳೆವಿಮೆ ಮಾಡಿಸಿದ ಪ್ರತಿ ರೈತನ ಹೊಲದ ಬೆಳೆಯ ಸ್ಥಿತಿಗತಿ ನಷ್ಟ ಹಾಗೂ ಸಮೃದ್ಧ ಫ‌ಸಲಿನ ಅಂದಾಜು ಮಾಡಲು ತೊಂದರೆ ಇರಲಾರದು. ಗೂಗಲ್‌ ಸರ್ಚ್‌, ಡ್ರೋನ್‌ ಮತ್ತು ಜಿಪಿಎಸ್‌ ತಂತ್ರಜ್ಞಾನ ಬೆಳೆ ವಿಮೆಯ ಯೋಜನೆಯಲ್ಲಿ ಅಳವಡಿಸುವುದು ಸುಲಭ ಸಾಧ್ಯವಾಗಬೇಕಿದೆ ಅಥವಾ ಗ್ರಾಮಪಂಚಾಯತಿ ಅಧಿಕಾರಿಗಳು ಗ್ರಾಮ ಲೆಕ್ಕಾಧಿಕಾರಿಗಳು ಮೊಬೈಲ್‌ ಆ್ಯಪ್‌ ಮೂಲಕವೂ ಬೆಳೆಯ ಸ್ಥಿತಿಗತಿ ಚಿತ್ರಣ ಕಂಡುಕೊಳ್ಳಬಹುದಾಗಿದೆ.

2017ರ ಹಂಗಾಮಿನಲ್ಲಿ ರಾಜ್ಯದ ರೈತರು ಬೆಳೆವಿಮೆ ಪ್ರೀಮಿಯಂ ಕಟ್ಟಿದ ಮೊತ್ತ 18ಸಾವಿರ ಕೋಟಿ ಆದರೆ ಬೆಳೆವಿಮೆ ಪರಿಹಾರ ಕೊಡಮಾಡಿದ್ದು ಕೇವಲ 6 ಸಾವಿರಕೋಟಿ. ಏನಿಲ್ಲೆಂದರೂ 10 ಸಾವಿರ ಕೋಟಿ ರೈತರೇ ಭರಿಸಿದ ಪ್ರೀಮಿಯಂ, ಮೊತ್ತವನ್ನು ವಿಮಾ ಕಂಪನಿಗೆ ಲಾಭ ಮಾಡಿಕೊಟ್ಟಂತಾಗಿದೆ. ಇಷ್ಟೆಲ್ಲಾ ಭರವಸೆ ಇರಿಸಿಕೊಂಡು, ಬೆಳೆ ನಷ್ಟ ಆಗಿದ್ದೂ ಬೆಳೆವಿಮೆ ಪರಿಹಾರ ರೈತರಿಗೆ ಬರುವುದೊತ್ತಟ್ಟಿಗಿರಲಿ, ಸಾಲ ಮಾಡಿ ಪ್ರೀಮಿಯಂ ಕಟ್ಟಿದ ರೈತರಿಗೆ ಪ್ರೀಮಿಯಂ ಮೊತ್ತವೂ ಸಿಕ್ಕಿಲ್ಲ. ಇದೆಂಥ ವೈಜ್ಞಾನಿಕ ಲೆಕ್ಕಾಚಾರ? ಬೆಳೆಸಾಲ ಮಾಡಿದ ರೈತರ ಖಾತೆಯಿಂದ ಬ್ಯಾಂಕಿನವರೇ ಹಣ ತೆಗೆದು ಸಾಲದ ಖಾತೆಗೆ ಜಮೆ ಮಾಡಿ ರೈತರ ಹೆಸರಿನಲ್ಲಿ ಪ್ರೀಮಿಯಂ ಕಟ್ಟಿರುತ್ತಾರೆ. ಹೀಗಿರುವಾಗ ರೈತರ ಸಾಲದ ಬಾಲ ಬಡ್ಡಿಯ ಮೊತ್ತ ಸೇರಿ ಉದ್ದ ಆಗುತ್ತದೆ ಹೊರತು ಫ‌ಸಲ್‌ ಬೀಮಾ ಪ್ರಚಾರ ಹಾಸ್ಯಾಸ್ಪದ ಆಗದೆ ಇರದು. ಬೆಳೆವಿಮೆ ಯೋಜನೆ ಕಂಪನಿ ಕೈಗೆ ಕೊಡದೆ ಸರಕಾರವೇ ನಿರ್ವಹಿಸಬೇಕು.

ಕಾಲಮಿತಿ ಬೇಕು: ಬೆಳೆ ವಿಮೆ ಪ್ರೀಮಿಯಂ ತುಂಬಲು ಸರಕಾರ ಕಾಲಮಿತಿ ನಿಗದಿಪಡಿಸಿದಂತೆ, ಬೆಳೆವಿಮೆ ಪರಿಹಾರ ನಿಗದಿ, ಬೆಳೆ ಇಳುವರಿ ಅಥವಾ ನಷ್ಟದಂದಾಜು ಹಾಗೂ ಪರಿಹಾರದ ಮೊತ್ತ ರೈತರ ಕೈಗೆ ಕೊಡಲು ಕಾಲಮಿತಿಯ ಕ್ಯಾಲೆಂಡರ್‌ ಅಗತ್ಯವಿದೆ. ಒಟ್ಟಾರೆ ಒಂದು ಹಂಗಾಮಿನ ಬೆಳೆವಿಮೆ ಪರಿಹಾರ ಪ್ರಕ್ರಿಯೆ ಆರುತಿಂಗಳೊಳಗೆ ಮುಗಿಯೇಕು. ಬೆಳೆವಿಮೆ ಪರಿಹಾರಕ್ಕಾಗಿ ವರ್ಷಗಟ್ಟಲೆ ರೈತರು ಕಾಯುವಂತಾಗಬಾರದು. ಬೆಳೆನಷ್ಟದ ಅಂದಾಜು ಪಾರದರ್ಶಕವಾಗಿರಬೇಕು. ವಿಮೆ ಮಾಡಿಸಿದ ಪ್ರತಿ ರೈತನಿಗೂ ಮೊಬೈಲ್‌ ಮೂಲಕ ಬೆಳೆನಷ್ಟದ ಸರಾಸರಿ ಅಂದಾಜಿನ ಮಾಹಿತಿ ಸಿಗಬೇಕು. ಇಂದಿನ ಮಾಹಿತಿ ತಂತ್ರಜ್ಞಾನದ ಯುಗದಲ್ಲಿ ತಂತ್ರಜ್ಞಾನ ಮತ್ತು ವೈಜ್ಞಾನಿಕತೆಯ ಫ‌ಲ ರೈತರಿಗೆ ದೊರಕುವಂತೆ ಮಾಡಿದಾಗ ರೈತರ ಕಲ್ಯಾಣ ಆದೀತು.

ಈರಯ್ಯ ಕಿಲ್ಲೇದಾರ

Advertisement

Udayavani is now on Telegram. Click here to join our channel and stay updated with the latest news.

Next