ಒಟ್ಟಾವಾ: ಖಲಿಸ್ಥಾನ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರದಲ್ಲಿ ಭಾರತದ ಜತೆಗೆ ತಕರಾರು ತೆಗೆದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಸೋಮವಾರ ಪ್ರಧಾನಿ ಹುದ್ದೆ, ಲಿಬರಲ್ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಆಗ್ರಹಿಸಿ ಸ್ವಪಕ್ಷದಲ್ಲೇ ಭಿನ್ನಮತ ಸೃಷ್ಟಿಯಾಗಿದ್ದರಿಂದ ಈ ಬೆಳವಣಿಗೆ ನಡೆದಿದೆ.
ಒಟ್ಟಾವಾದಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆ ಸಿದ ಅವರು ರಾಜೀನಾಮೆ ಘೋಷಿಸಿದ್ದಾರೆ. “2015 ರಿಂದಲೂ ನಾನು ದೇಶಕ್ಕಾಗಿ ದುಡಿದಿದ್ದೇನೆ, ಸವಾಲು ಎದುರಿಸಿದ್ದೇನೆ. ಪಕ್ಷದಲ್ಲಿದ್ದ ಆಂತರಿಕ ಭಿನ್ನಾಭಿಪ್ರಾಯವು ನಾನು ರಾಜೀನಾಮೆ ನಿರ್ಧಾರ ಕೈಗೊಳ್ಳಲು ಕಾರಣ ವಾಗಿದೆ. ಪಕ್ಷ ಹೊಸ ನಾಯಕನನ್ನು ಆಯ್ಕೆ ಮಾಡಿದೆ’ ಎಂದು ಹೇಳಿದ್ದಾರೆ. ಮಾ.24ರ ವರೆಗೆ ಸಂಸತ್ತನ್ನು ವಿಸರ್ಜಿಸದಂತೆ ಗವರ್ನರ್ ಜನರಲ್ಗೆ ಮನವಿ ಮಾಡಿದ್ದಾರೆ.
ಭಾರತದ ಜತೆಗೆ ಹೊಂದಿರುವ ಬಾಂಧವ್ಯ ಸೇರಿದಂತೆ ಹಲವು ವಿಚಾರಗಳನ್ನು ನಿಭಾಯಿಸಲು ವಿಫಲರಾಗಿದ್ದರೆಂದು ಟ್ರುಡೋ ವಿರುದ್ಧ ಅವರ ಲಿಬರಲ್ ಪಕ್ಷದ 20ಕ್ಕೂ ಅಧಿಕ ಸಂಸರು, ನಾಯಕರೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದರೊಂದಿಗೆ ವಿಪಕ್ಷಗಳೂ ಕೂಡ ಟ್ರುಡೋ ತಮ್ಮ ಆಡಳಿತ ವೈಫಲ್ಯ ಮುಚ್ಚಿಡಲು ನಿಜ್ಜರ್ ವಿಚಾರದಲ್ಲಿ ಭಾರತವನ್ನು ಎಳೆದು ತಂದು ವಿಷಯಾಂತರ ಮಾಡಿದ್ದರೆಂದು ಮುಗಿಬಿದ್ದಿದ್ದವು.
ಇದಕ್ಕೆ ತಕ್ಕಂತೆ ಟ್ರುಡೋ ನಾಯಕತ್ವ ಪ್ರತಿಭಟಿಸಿ ಡಿಸೆಂಬರ್ನಲ್ಲಿ ವಿತ್ತ ಸಚಿವ ಕ್ರಿಸ್ಟಿಯಾ ಫ್ರೀಲ್ಯಾಂಡ್ ರಾಜೀನಾಮೆ ನೀಡಿದ್ದರು. ಅನಂತರ ಭಾರತೀಯ ಮೂಲದ ಸಂಸ ದರಾಗಿರುವ ಜಸ್ಪ್ರೀತ್ ಸಿಂಗ್ ನೇತೃತ್ವದ ನ್ಯೂ ಡೆಮಾ ಕ್ರಟಿಕ್ ಪಾರ್ಟಿ ಕೂಡ ಬೆಂಬಲ ಹಿಂಪಡೆದಿತ್ತು. ಇತ್ತೀಚೆಗೆ ನಡೆದ ಜನಾಭಿಪ್ರಾಯ ಸಂಗ್ರಹದಲ್ಲೂ ಟ್ರುಡೋಗೆ ಹಿನ್ನೆಡೆಯಾಗಿತ್ತು.
ಪಿಯೆರ್ಗೆ ಅಧಿಕಾರ ಬೇಡ: ಟ್ರುಡೋ
ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ ಟ್ರುಡೋ ಬೆನ್ನಲ್ಲೇ ದೇಶವನ್ನು ಮುನ್ನಡೆಸಲು ವಿಪಕ್ಷವಾದ ಕನ್ಸರ್ವೇಟಿವ್ನ ನಾಯಕ ಪಿಯೆರ್ ಪೊಲಿವರ್ ಸೂಕ್ತ ವ್ಯಕ್ತಿ ಅಲ್ಲ ಎಂದು ಟ್ರುಡೋ ಹೇಳಿದ್ದಾರೆ. ಆರ್ಥಿಕ ನೀತಿಗಳು ಹಾಗೂ ಹವಾಮಾನ ಬದಲಾವಣೆ ಕುರಿತಂತೆ ಅವರು ಹೊಂದಿರುವ ನಿಲುವುಗಳು ದೇಶದ ಹಿತಾಸಕ್ತಿಗೆ ಪೂರಕವಾಗಿಲ್ಲ ಎಂದು ಟೀಕಿಸಿದ್ದಾರೆ.