Advertisement

ಸ್ವಚ್ಛ ಸರ್ವೇಕ್ಷಣ್‌ ಉತ್ತಮ ರ್‍ಯಾಂಕ್‌ಗೆ ಅಡ್ಡದಾರಿ?

12:32 AM Jan 23, 2020 | Lakshmi GovindaRaj |

ಬೆಂಗಳೂರು: ನಗರದ ಮುಖ್ಯ ಭಾಗದಲ್ಲಿರುವ ಶೌಚಾಲಯಗಳಲ್ಲೇ ಸ್ವಚ್ಛತೆ ಕಾಪಾಡಿಕೊಂಡಿಲ್ಲ. ಹೀಗಿರುವಾಗ “ಪಾಲಿಕೆಯ ಎಲ್ಲ ಶೌಚಾಲಯಗಳು ಸ್ವಚ್ಛತೆ ಕಾಪಾಡಿಕೊಳ್ಳಲಾಗಿದ್ದು, ಸಾರ್ವಜನಿಕ ಮತ್ತು ಸಮುದಾಯ ಶೌಚಾಲಯಗಳು ಸುಸಜ್ಜಿತವಾಗಿದೆ’ ಎಂದು ಘೋಷಿಸಿಕೊಳ್ಳಲು ಪಾಲಿಕೆ ಮುಂದಾಗಿದೆ. ನಗರದ ಹೊರ ವಲಯಗಳಲ್ಲಿ ಇನ್ನೂ ಬಹಿರ್ದೆಸೆ ಮುಕ್ತವಾಗಿಲ್ಲ ಎನ್ನುವ ಆರೋಪಗಳಿರುವಾಗಲೇ ಪಾಲಿಕೆ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಿಕೊಂಡಿದೆ.

Advertisement

ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಒಡಿಎಫ್ ಪ್ಲಸ್‌ ಪ್ಲಸ್‌ಗೆ (ನಗರದ ಶೌಚಾಲಯಗಳು ಸುಸಜ್ಜಿತ) ಪ್ರಮಾ ಣೀಕರಿಸಿಕೊಳ್ಳಲು ಸಿದ್ಧವಾಗಿದೆ. ಬೆಂಗಳೂರು ಈ ಬಾರಿ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ರ್‍ಯಾಂಕ್‌ ಗಳಿಸಬೇಕಾದರೆ, ಬಯಲು ಬಹಿರ್ದೆಸೆ ಮುಕ್ತವಾಗಿರಬೇಕು (ಓಪನ್‌ ಡೆಫಿಕೇಶನ್‌ ಫ್ರೀ- ಒಡಿಎಫ್), ಇನ್ನೂ ಹೆಚ್ಚಿನ ರ್‍ಯಾಂಕ್‌ ಮತ್ತು ಅಂಕ ಗಳಿಸಬೇಕಾದರೆ ನಗರದ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳು ಸ್ವಚ್ಛವಾಗಿರುವುದರ ಜತೆಗೆ ಕೆಲವು ನಿರ್ದಿಷ್ಟ ಮಾನದಂಡಗಳಿರಬೇಕು.

ಆಯಾ ಶೌಚಾಲಯಗಳನ್ನು ಯಾರು ನಿರ್ವಹಣೆ ಮಾಡುತ್ತಿದ್ದಾರೆ ಎನ್ನುವ ವಿವರ ಶೌಚಾಲಯಗಳಲ್ಲಿ ಇರಬೇಕು ಎನ್ನುವುದು ಸೇರಿದಂತೆ 12 ಪ್ರಮುಖ ಮಾನದಂಡಗಳನ್ನು ಸ್ವಚ್ಛ ಸರ್ವೇಕ್ಷಣ್‌ನಲ್ಲಿ ನಿಗದಿ ಮಾಡಲಾಗಿದೆ. ಸ್ವಚ್ಛ ಸರ್ವೇಕ್ಷಣ್‌ನಲ್ಲಿ ನಿಗದಿ ಮಾಡಲಾಗಿರುವ ಬಹುತೇಕ ಮಾನದಂಡಗಳನ್ನು ಪಾಲಿಕೆ ಅನುಸರಿಸಿಲ್ಲ. ಪಾಲಿಕೆ ಒಡಿಎಫ್ ಎಂದು ಪ್ರಮಾಣೀಕರಿಸಿಕೊಳ್ಳಲು 2019ರ ಡಿ.15 ಕೊನೆಯ ದಿನವಾಗಿತ್ತು. ಅಲ್ಲಿಯವರೆಗೆ ಶೇ. 84 ಪ್ರಮಾಣ ಮಾತ್ರ ಒಡಿಎಫ್ ಆಗಿತ್ತು.

ಬೆರಳೆಣಿಕೆಯ ದಿನಗಳಲ್ಲೇ ಪಾಲಿಕೆ ಶೇ 90 ಪ್ರದೇಶಗಳು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಿಕೊಂಡಿದ್ದು, ಇಂದಿಗೂ ಚಿದಂಬರ ರಹಸ್ಯವಾಗಿ ಉಳಿದಿದೆ. ಈಗ ಪಾಲಿಕೆ ಏಕಾಏಕಿ ಒಡಿಎಫ್ ಪ್ಲಸ್‌ ಪ್ಲಸ್‌ ಎಂದು ಘೋಷಿಸಿಕೊಳ್ಳಲು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಅಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಕೋರಿದೆ. ಜ.14ರಂದು ಅಧಿಸೂಚನೆ ಹೊರಡಿಸಿದ್ದು, ಇದಕ್ಕೆ 15 ದಿನಗಳ ಕಾಲವಾಕಾಶವಿದೆ.  ನಗರದಲ್ಲಿ ಎಷ್ಟು ಶೌಚಾಲಯಗಳಿವೆ, ಇದರ ನಿರ್ವಹಣೆಯನ್ನು ಯಾರು ಮಾಡುತ್ತಿದ್ದಾರೆ ಎಂಬ ಮಾಹಿತಿ ಪಾಲಿಕೆ ಅಧಿಕಾರಿಗಳ ಬಳಿ ಇಲ್ಲ.

ನಗರದ ಬಹುತೇಕ ಶೌಚಾಲಯಗಳ ನಿರ್ವಹಣೆಯನ್ನು ಉತ್ತರ ಭಾರತೀಯರು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಯಾವುದೇ ಸುಧಾರಣಾ ಕ್ರಮಗಳನ್ನು ಅಳವಡಿಸಿಕೊಂಡಿಲ್ಲ. ಪಾಲಿಕೆ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಅನುಮಾನಕ್ಕೆ ಎಡೆಮಾಡಿ ಕೊಟ್ಟಿದ್ದು, ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಈ ಬಾರಿ ಉತ್ತಮ ರ್‍ಯಾಂಕ್‌ ಗಳಿಸಲು ಪಾಲಿಕೆ ಸುಲಭ ಮತ್ತು ಅಡ್ಡ ಮಾರ್ಗಗಳನ್ನು ತುಳಿ ಯುತ್ತಿರುವುದು ಸ್ಪಷ್ಟವಾಗಿದೆ.

Advertisement

ಏಕಾಏಕಿ ಒಡಿಎಫ್ ಪ್ಲಸ್‌ ಪ್ಲಸ್‌ ಏಕೆ?:ಪಾಲಿಕೆ ಒಡಿಎಫ್ ಪ್ಲಾಸ್‌ಗೆ ಪ್ರಯತ್ನಿಸದೆ. ಏಕಾಏಕಿ ಒಡಿಎಫ್ ಪ್ಲಸ್‌ ಪ್ಲಸ್‌ಗೆ ಮುಂದಾಗಿರುವುದರ ಹಿಂದೆಯೂ ಸ್ಟಾರ್‌ ಲೆಕ್ಕಾಚಾರವಿದೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಪಾಲಿಕೆಯ ಅಧಿಕಾರಿಗಳು. ಪಾಲಿಕೆ ಒಡಿಎಫ್ ಪ್ಲಸ್‌ ಪ್ರಮಾಣೀಕರಿಸಿಕೊಂಡರೆ 300 ಅಂಕ ಬರುತ್ತದೆ. ಒಡಿಎಫ್ ಪ್ಲಸ್‌ ಪ್ಲಸ್‌ 500 ಅಂಕ ನಿಗದಿ ಮಾಡಲಾಗಿದೆ. ಒಂದೊಮ್ಮೆ ಒಡಿಎಫ್ ಪ್ಲಸ್‌ ಪ್ಲಸ್‌ನಲ್ಲಿ ಪ್ರಾಣೀಕೃತವಾಗದಿದ್ದರೂ, ಪಾಲಿಕೆಗೆ ಸಾಮಾನ್ಯ ಅಂಕ (300 ಅಥವಾ ಅದಕ್ಕಿಂತ ಹೆಚ್ಚು) ಬರುವ ಸಾಧ್ಯತೆ ಇದೆ. ಹೀಗಾಗಿ, ಪಾಲಿಕೆ ನೇರವಾಗಿ ಒಡಿಎಫ್ ಪ್ಲಸ್‌ಪ್ಲಸ್‌ಗೆ ಗುರಿ ಇಟ್ಟಿದೆ ಎನ್ನುತ್ತಾರೆ ಅಧಿಕಾರಿಗಳು.

ಒಡಿಎಫ್ ಪ್ಲಸ್‌ ಪ್ಲಸ್‌ ಮಾನದಂಡವೇನು?: ನಗರದ ಸಾರ್ವಜನಿಕ ಹಾಗೂ ಸಮುದಾಯ ಶೌಚಾಲಯಗಳು ಸ್ವಚ್ಛವಾಗಿರಬೇಕು. ಏರ್‌ಪ್ರಷನರ್‌, ಟವೆಲ್‌, ಸಾಬೂನು, ಮಕ್ಕಳಿಗೆ ಅನುಕೂಲಕರ ಶೌಚಾಲಯ (ಎತ್ತರ), ನ್ಯಾಪ್‌ಕಿನ್‌, ಕೈ ಬಣಗಿಸುವ ಯಂತ್ರ (ಆ್ಯಂಡ್‌ಡ್ರೈ ಮಿಷಿನ್‌), ಶೌಚಾಲಯದ ಹೊರ ಪ್ರದೇಶ ರಾತ್ರಿ ವೇಳೆ ಕತ್ತಲಿನಿಂದ ಕೂಡಿರಬಾರದು. ಎಲ್ಲ ಶೌಚಾಲಯಗಳ ಕಟ್ಟಡಗಳು ಸುವ್ಯವಸ್ಥೆಯಲ್ಲಿದೆ ಎಂದು ಪ್ರಮಾಣೀಕರಿಸಿರಬೇಕು ಎನ್ನುವುದು ಸೇರಿದಂತೆ ಹಲವು ಪ್ರಮುಖ ಮಾನದಂಡಗಳ ಮೇಲೆ ಒಡಿಎಫ್ ಪ್ಲಸ್‌ ಪ್ಲಸ್‌ ಸಿಗುತ್ತದೆ. ಇದಕ್ಕೆ ನಗರದಲ್ಲಿ ಶೇ 25 ಶೌಚಾಲಯಗಳು ಮೇಲಿನ ಎಲ್ಲ ಮಾನದಂಡಗಳನ್ನು ಹೊಂದಿರಬೇಕು. ಒಡಿಎಫ್ ಪ್ಲಸ್‌ಗೆ ಶೇ 10ರಷ್ಟಾದರೂ ಶೌಚಾಲಯಗಳು ಸ್ವಚ್ಛವಾಗಿರಬೇಕು.

ಸ್ಟಾರ್‌ಗಳ ಮೇಲೆ ಪಾಲಿಕೆ ಕಣ್ಣು: ಯಾವುದೇ ನಗರ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಕಸ ಮುಕ್ತ ಹಾಗೂ ಬಯಲು ಬಹಿರ್ದೆಸೆ ಮುಕ್ತವಾಗಿದ್ದರೆ ಕೆಲವು ನಿರ್ದಿಷ್ಟ ಮಾನದಂಡಗಳ ಮೇಲೆ ಸ್ಟಾರ್‌ ರ್‍ಯಾಂಕಿಂಗ್‌ ನೀಡಲಾಗುತ್ತದೆ. ಈ ರ್‍ಯಾಂಕಿಂಗ್‌ ಮಾನದಂಡದ ಮೇಲೆ ಪಾಲಿಕೆಗೆ ಸ್ವಚ್ಛ ಸರ್ವೇಕ್ಷಣ್‌ನಲ್ಲಿ ಉತ್ತಮ ಅಂಕ ಬರುತ್ತದೆ. ಈ ಮೂಲಕ ರ್‍ಯಾಂಕಿಂಗ್‌ ಪಟ್ಟಿ ಉತ್ತಮ ಪಡಿಸಿಕೊಳ್ಳಲು ಸಹಾಯವಾಗುತ್ತದೆ. ಹೀಗಾಗಿ, ಪಾಲಿಕೆ ಸ್ಟಾರ್‌ಗಳ ಮೇಲೆ ಕಣ್ಣಿಟ್ಟಿದೆ. ಇದಕ್ಕೆ ಪೂರಕವಾಗಿ ಕೆಲಸ ಮಾಡಬೇಕಾದ ಪಾಲಿಕೆಯ ಅಧಿಕಾರಿಗಳು ಅದನ್ನು ಮಾಡದೆ, ಸರಳ ಮತ್ತು ವಾಮಮಾರ್ಗಗಳ ಮೂಲಕ ರ್‍ಯಾಂಕಿಂಗ್‌ ಅಭಿವೃದ್ಧಿಗೆ ಮುಂದಾಗಿರುವುದು ವಿಪರ್ಯಾಸವೇ ಸರಿ.

ಕಸ ಮುಕ್ತ ನಗರ ಸ್ಟಾರ್‌
ಸ್ಟಾರ್‌ ಅಂಕ
ಏಳು 1000 (ಶೌಚಾಲಯದ ನೀರು ಶುದ್ಧೀಕರಣವಾಗಿಬಳಸವಂತಿರಬೇಕು)
ಐದು ಸ್ಟಾರ್‌ 800 (ಒಡಿಎಫ್ ಪ್ಲಸ್‌ ಪ್ಲಸ್‌)
ಮೂರು ಸ್ಟಾರ್‌ 600 (ಒಡಿಎಫ್ ಪ್ಲಸ್‌)ಒಂದು ಸ್ಟಾರ್‌ 200(ಒಡಿಎಫ್)

ಬಯಲು ಬಹಿರ್ದೆಸೆ ಮುಕ್ತ
ಸ್ಟಾರ್‌ ಅಂಕ
ಒಡಿಎಫ್ ಪ್ಲಸ್‌ ಪ್ಲಸ್‌ ಪ್ರಮಾಣೀಕೃತ 500
ಒಡಿಎಫ್ ಪ್ಲಸ್‌ ಪ್ರಮಾಣೀಕೃತ 300
ಮರು ಪ್ರಮಾಣೀಕೃತ ಒಡಿಎಫ್ 200
ಒಡಿಎಫ್ ಪ್ರಮಾಣೀಕೃತ 100

ಶೌಚಾಲಯಗಳ ಶುಚಿತ್ವ ಕಾಪಾಡಿ ಕೊಳ್ಳಲು ಕಟ್ಟುನಿಟ್ಟಿನ ಕ್ರಮ ವಹಿಸ ಲಾಗಿದೆ. ಹಲವು ಸಾರ್ವಜನಿಕ ಶೌಚಾಲಯಗಳನ್ನು ಮೇಲ್ದಜೆಗೇರಿಸಲಾಗು ತ್ತಿದೆ. ವಲಯವಾರು ಶೌಚಾಲಯಗಳಲ್ಲಿನ ಲೋಪದೋಷಗಳನ್ನು ಸರಿಪಡಿಸುವುದಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
-ಸರ್ಫರಾಜ್‌ ಖಾನ್‌, ಜಂಟಿ ಆಯುಕ್ತ (ಘನತ್ಯಾಜ್ಯ ನಿರ್ವಹಣೆ)

* ಹಿತೇಶ್‌ ವೈ

Advertisement

Udayavani is now on Telegram. Click here to join our channel and stay updated with the latest news.

Next