ಸಿಂಧನೂರು: ಅನಿವಾರ್ಯ ಸಂದರ್ಭ ಒದಗಿದಾಗ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳುವ ಬದಲು ಸದ್ಯ ನಡೆಯುತ್ತಿರುವ ಅತಿಕ್ರಮಣ ತಡೆಯುವ ಕೆಲಸ ನೀರಾವರಿ ಇಲಾಖೆಯಿಂದ ಆಗದ್ದರಿಂದ ನೀರಾವರಿ ಇಲಾಖೆ ಕಾಲುವೆಯೇ ಕಾಣೆಯಾಗುತ್ತಿದೆ.
ನಗರ ವ್ಯಾಪ್ತಿಯಲ್ಲಿ ಹಾದು ಹೋಗಿರುವ 40ನೇ ಉಪಕಾಲುವೆ ಒತ್ತುವರಿಗೆ ಹೇಳಿ ಮಾಡಿಸಿದ ತಾಣವಾಗಿದೆ. ವಾರಕ್ಕೆ ಒಂದೆರಡು ಹೊಸ ಟೆಂಟ್‌ಗಳನ್ನು ಹಾಕುವುದು ಸಾಮಾನ್ಯವಾಗಿದೆ. 40ನೇ ಉಪ ಕಾಲುವೆಯ ಎಡ-ಬಲಕ್ಕೆ ತಡೆಗೋಡೆ ನಿರ್ಮಿಸಿ ಗುಡಿಸಲು ಹಾಕಲಾಗುತ್ತಿದೆ. ಸಾಲದ್ದಕ್ಕೆ ಕಾಲುವೆಯನ್ನೇ ಕೆಲವು ಕಡೆ ಹೈಜಾಕ್ ಮಾಡಿ, ನೀರಿನ ಹರಿಯುವಿಕೆಗೆ ಒಳಚರಂಡಿ ಕಲ್ಪಿಸಲಾಗುತ್ತಿದೆ.
ಏನಿದು ಸಮಸ್ಯೆ?: ನಗರ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಸ್ತೆಗಳ ಪೈಕಿ ಅತಿ ದೊಡ್ಡ ರಸ್ತೆ ಎಂಬ ಹಿರಿಮೆ 40ನೇ ಉಪಕಾಲುವೆಯ ರಸ್ತೆಗಿದೆ. ಕಾಲುವೆಯ ಬಲಭಾಗದಲ್ಲಿ 66 ಅಡಿ, ಎಡಭಾಗದಲ್ಲಿ 33 ಅಡಿ ರಸ್ತೆಗಾಗಿ ಉಳಿಯಬೇಕಿದೆ. ಆದರೆ ಈಗ ಕಾಲುವೆ ಬಲಭಾಗದಲ್ಲಿ 30 ಅಡಿಯಷ್ಟು ರಸ್ತೆ ಮಾತ್ರ ಕೆಲವು ಕಡೆ ಉಳಿದಿದೆ. ಬಹುತೇಕ ಕಡೆಗಳಲ್ಲಿ ಅತಿಕ್ರಮಣ, ಒತ್ತುವರಿ ಸಾಮಾನ್ಯವಾಗಿದೆ. 1 ಕಿ.ಮೀ. ಉದ್ದಕ್ಕೂ ರಸ್ತೆಯನ್ನು ಅತಿಕ್ರಮಿಸಲಾಗಿದೆ. 40ನೇ ಉಪಕಾಲುವೆಯ ಮೇಲೂ ಪಿಲ್ಲರ್ ಹಾಕಿ ಟೆಂಟ್ ಹೊಡೆಯಲಾಗಿದೆ. ಸತ್ಯ ಗಾರ್ಡನ್ ಮಾರ್ಗದ ರಸ್ತೆ ರೈಲ್ವೆ ಸ್ಟೇಷನ್‌ಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದ್ದು, ಈ ಮಾರ್ಗದಲ್ಲಿ 100 ಅಡಿಯಷ್ಟು ರಸ್ತೆ ಬೇಕು ಎಂಬ ಬೇಡಿಕೆ ಇಡಲಾಗಿದೆ. ಇರುವ ರಸ್ತೆಯನ್ನೇ ದಿನದಿಂದ ದಿನಕ್ಕೆ ಒತ್ತುವರಿ ಮಾಡುತ್ತಿರುವುದರಿಂದ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾದ ಸ್ಥಿತಿಯನ್ನು ನೀರಾವರಿ ಇಲಾಖೆಯೇ ಆಹ್ವಾನ ಮಾಡಿಕೊಳ್ಳಲಾರಂಭಿಸಿದೆ.
3 ಕೋಟಿ ರೂ.ಅನುದಾನ: ಕಾಲುವೆಯ ಬಲಭಾಗ ದಲ್ಲಿನ ರಸ್ತೆ ನಾಲ್ಕೈದು ವಾರ್ಡ್‌ಗಳಿಗೆ ಸಂಪರ್ಕ ರಸ್ತೆಯಾಗಿದೆ. ಇದು ಸಿಂಧನೂರು ಬೈಪಾಸ್ ರೂಪದಲ್ಲೂ ಬಳಕೆಯಾಗುವ ಅವಕಾಶವಿದೆ. ಆದರೆ ಎಡ-ಬಲದಲ್ಲಿ ರಸ್ತೆ ಒತ್ತುವರಿ ಮಾಡಲು ಅವಕಾಶ ನೀಡಿದ್ದರಿಂದ ದಿನದಿಂದ ದಿನಕ್ಕೆ ರಸ್ತೆ ಕಿರಿದಾಗತೊಡಗಿದೆ. ಗಮನಾರ್ಹ ಎಂದರೆ ಇದೇ ರಸ್ತೆ ಅಭಿವೃದ್ಧಿಗೆ 3 ಕೋಟಿ ರೂ.ಅನುದಾನ ಮೀಸಲಿಡಲಾಗಿದೆ. ಕೆಲವು ಕಡೆ ಒತ್ತುವರಿ ತೆರವಿಗೆ ಸರ್ವೇ ಮಾಡಲಾಗಿದೆ. ರಸ್ತೆ ಕೆಲಸವನ್ನು ಮಾತ್ರ ಸುಗಮವಾಗಿ ಮುಗಿಸಲು ಪ್ರಯತ್ನಿಸುತ್ತಿರುವ ಅಧಿಕಾರಿಗಳು, ಪೂರ್ಣ ಪ್ರಮಾಣದಲ್ಲಿ ಒತ್ತುವರಿ ತಡೆಯುವಲ್ಲಿ ವಿಫಲರಾಗಿದ್ದಾರೆ. ಪ್ರಭಾವಿಗಳ ಒತ್ತಡಕ್ಕೆ ಬೆದರಿ ಟೆಂಟ್ ಹಾಕಿಸಲು ಅವಕಾಶ ನೀಡಲಾಗುತ್ತಿದ್ದು, ಉಪಗುತ್ತಿಗೆ ಮಾದರಿಯಲ್ಲಿ ಬಾಡಿಗೆ ಮೂರನೇ ವ್ಯಕ್ತಿಗಳ ಜೇಬು ಸೇರುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ.
ಸರ್ವೇ ಇಲಾಖೆಗೆ ಈಗ ಪತ್ರ ಬರೆಯಲಾಗಿದೆ. ಕಾಲುವೆ ಮಧ್ಯಭಾಗದಿಂದ ಎಡಕ್ಕೆ 33 ಅಡಿ, ಬಲಭಾಗದಲ್ಲಿ 66 ಅಡಿ ಇದೆ. ಇದು ನೀರಾವರಿ ನಿಗಮದ ಆಸ್ತಿ. ಇಲ್ಲಿ ಒತ್ತುವರಿಯಾಗಿರುವ ಬಗ್ಗೆ ಸಮೀಕ್ಷೆ ನಡೆಸಲು ಮುಂದಾಗಿದ್ದು, ನೀರಾವರಿ ನಿಗಮದ ವಕೀಲರನ್ನು ಸಂಪರ್ಕಿಸಲಾಗಿದೆ.
-ಹನುಮಂತಪ್ಪ, ಎಇಇ, ನೀರಾವರಿ ನಿಗಮ, ಸಿಂಧನೂರು
-ಯಮನಪ್ಪ ಪವಾರ