Advertisement

ಇರಾನಿ ಕಪ್‌: ವಿದರ್ಭ ಚಾಂಪಿಯನ್‌

12:30 AM Feb 17, 2019 | Team Udayavani |

ನಾಗ್ಪುರ: ರಣಜಿ ಟ್ರೋಫಿಯನ್ನು ತನ್ನಲ್ಲಿ ಉಳಿಸಿಕೊಂಡಿರುವ ವಿದರ್ಭ ತಂಡ “ಇರಾನಿ ಕಪ್‌’ ಕೂಡ ಜಯಿಸಿ ಸಂಭ್ರಮಿಸಿದೆ. 
ಶೇಷ ಭಾರತ ಜಯದ ಕನಸನ್ನು ನುಚ್ಚು ನೂರು ಮಾಡಿದ ವಿದರ್ಭ ಪಂದ್ಯ ಡ್ರಾ ಆದರೂ ಮೊದಲ ಇನ್ನಿಂಗ್ಸ್‌ ಮುನ್ನಡೆ ಆಧಾರದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ. ವಿದರ್ಭ ತಂಡ ಎರಡು ಬಾರಿ ಇರಾನಿ ಕಪ್‌ ಗೆದ್ದ ಮೂರನೇ ತಂಡವಾಗಿದೆ. ಈ ಮೊದಲು ಮುಂಬಯಿ ಮತ್ತು ಕರ್ನಾಟಕ ಎರಡು ಬಾರಿ ಪ್ರಶಸ್ತಿ ಜಯಿಸಿತ್ತು. ಶೇಷ ಭಾರತ ಸತತ ಎರಡನೇ ಸಲ ಟ್ರೋಫಿ ಕಳೆದುಕೊಂಡು ನಿರಾಸೆ ಅನುಭವಿಸಿತು. ಗೆಲ್ಲಲು 280 ರನ್‌ ಗುರಿ ಹೊಂದಿದ್ದ ವಿದರ್ಭ ಕೊನೆಯ ದಿನ 5 ವಿಕೆಟಿಗೆ 269 ರನ್‌ ಮಾಡಿ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ. 

Advertisement

ವಿದರ್ಭ ಸಂಘಟಿತ ಬ್ಯಾಟಿಂಗ್‌
4ನೇ ದಿನದ ಅಂತ್ಯಕ್ಕೆ ವಿದರ್ಭ 2ನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟಿಗೆ 37 ರನ್‌ ಗಳಿಸಿತ್ತು. ಅಂತಿಮ ದಿನವಾದ ಶನಿವಾರ ಬ್ಯಾಟಿಂಗ್‌ ಮುಂದುವರಿಸಿದ ರಘುನಾಥ್‌ ಸಂಜಯ್‌ ಹಾಗೂ ಅಥರ್ವ ಟೈಡೆ ತಂಡವನ್ನು ಆಧರಿಸಿದರು. ಇವರಿಬ್ಬರು ಸೇರಿಕೊಂಡು 2ನೇ ವಿಕೆಟಿಗೆ 116 ರನ್‌ ಜತೆಯಾಟ ನಿರ್ವಹಿಸಿದರು. 131 ಎಸೆತ ಎದುರಿಸಿದ ರಘುನಾಥ್‌ ಸಂಜಯ್‌ 42 ರನ್‌ ಬಾರಿಸಿದರು. ಇದರಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ ಸೇರಿತ್ತು. ಅಥರ್ವ ಟೈಡೆ 185 ಎಸೆತಗಳಲ್ಲಿ 8 ಬೌಂಡರಿ ಹಾಗೂ 1 ಸಿಕ್ಸರ್‌ನಿಂದ 72 ದಾಖಲಿಸಿದರು. ಇವರಿಬ್ಬರು ಶೇಷ ಭಾರತ ಬೌಲರ್‌ಗಳನ್ನು ಅಳೆದು ತೂಗಿ ಚೆಂಡಾಡಿದರು. ಹೀಗಾಗಿ ವಿದರ್ಭ ಚೇತರಿಸಿಕೊಳ್ಳುತ್ತ ಸಾಗಿತು. ತಂಡದ ಮೊತ್ತ 116 ರನ್‌ ಆಗಿದ್ದಾಗ  ಅರ್ಧಶತಕದ ಹೊಸ್ತಿಲಲ್ಲಿದ್ದ ರಘುನಾಥ್‌ ಸಂಜಯ್‌ ಔಟಾದರು. 146 ರನ್‌ ಗಳಿಸಿದ್ದಾಗ ಅಥರ್ವ ಟೈಡೆ ಕೂಡ ಪೆವಿಲಿಯನ್‌ ಸೇರಿಕೊಂಡರು. ಈ ಎರಡೂ ವಿಕೆಟ್‌ ಅನ್ನು ರಾಹುಲ್‌ ಚಹರ್‌ ಉರುಳಿಸಿದರು.

ಎರಡು ವಿಕೆಟ್‌ ಪತನಗೊಳ್ಳುತ್ತಿದ್ದಂತೆ ಶೇಷ ಭಾರತದ ಗೆಲುವಿನ ಕನಸು ಚಿಗುರೊಡೆಯಿತು. 3ನೇ ವಿಕೆಟಿಗೆ ಬಂದ ಕನ್ನಡಿಗ ಗಣೇಶ್‌ ಸತೀಶ್‌ (87 ರನ್‌) ಹಾಗೂ ಮೋಹಿತ್‌ ಕಾಳೆ (37 ರನ್‌) ಸಂಕಷ್ಟದ ಸಮಯದಲ್ಲಿ ತಂಡಕ್ಕೆ ಬ್ಯಾಟಿಂಗ್‌ ಆಸರೆಯಾದರು. ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿ 87 ರನ್‌ ಕಲೆ ಹಾಕಿದರು. ಮೋಹಿತ್‌ ಕಾಳೆ ಧರ್ಮೇಂದ್ರ ಸಿನ್ಹ ಜಡೇಜ ಎಸೆತದಲ್ಲಿ ಔಟಾದರು. ಅರ್ಧಶತಕ ಗಳಿಸಿದ್ದ ಗಣೇಶ್‌ ಸತೀಶ್‌ ಕೂಡ ಔಟಾದರು. ಈ ಹಂತದಲ್ಲಿ ವಿದರ್ಭ ಗೆಲುವಿನ ಸನಿಹಕ್ಕೆ ಬಂದು ನಿಂತಿತ್ತು. ಆದರೆ ಕೊನೆ ನಿಮಿಷಗಳಲ್ಲಿ ಗೆಲುವಿಗಾಗಿ ಪ್ರಯತ್ನ ಪಡುವ ಎಲ್ಲ ಅವಕಾಶಗಳಿದ್ದರೂ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದುಕೊಂಡಿದ್ದರಿಂದ ವಿದರ್ಭ ಟ್ರೋಫಿ ಉಳಿಸಿಕೊಳ್ಳುವುದಕ್ಕಾಗಿ ಡ್ರಾ ಮಾಡಿಕೊಳ್ಳುವ ನಿರ್ಧಾರ ಮಾಡಿತು. ಕೇವಲ 11 ರನ್‌ ಅಂತರದಿಂದ ವಿದರ್ಭ ಗೆಲುವನ್ನು ಕಳೆದುಕೊಂಡಿತು. ಅಕ್ಷಯ್‌ ವಡ್ಕರ್‌ 10 ರನ್‌ ಗಳಿಸಿ ಅಜೇಯರಾಗಿ ಉಳಿದರು. ಶೇಷ ಭಾರತ ಪರ ರಾಹುಲ್‌ ಚಹರ್‌ (116ಕ್ಕೆ2) ವಿಕೆಟ್‌ ಕಬಳಿಸಿ ಶ್ರೇಷ್ಠ ಬೌಲರ್‌ ಎನಿಸಿಕೊಂಡರು. 

ಹುತಾತ್ಮರ ಕುಟುಂಬಕ್ಕೆ  ಪ್ರಶಸ್ತಿ ಹಣ ನೀಡಿದ ವಿದರ್ಭ
ನಾಗ್ಪುರ: ಇರಾನಿ ಕಪ್‌ ಪ್ರಶಸ್ತಿ ಸಮಾರಂಭದಲ್ಲಿ 2ನೇ ಬಾರಿಗೆ ಪ್ರಶಸ್ತಿ ಜಯಿಸಿದ ರಣಜಿ ಚಾಂಪಿಯನ್‌ ವಿದರ್ಭ ತಂಡ ಪ್ರಶಸ್ತಿಯ ಒಟ್ಟು ಮೊತ್ತವನ್ನು ಮೃತ ಯೋಧ ಕುಟುಂಬಕ್ಕೆ ನೀಡುವುದಾಗಿ ಹೇಳಿ ದೇಶಪ್ರೇಮ ಮೆರೆದಿದೆ. ವಿದರ್ಭಕ್ಕೆ ಒಟ್ಟು 10 ಲಕ್ಷ ರೂ. ಪ್ರಶಸ್ತಿ ಮೊತ್ತ ದೊರೆಯಲಿದೆ. ಅವಂತಿಪೋರಾದಲ್ಲಿ ಉಗ್ರರ ಕೃತ್ಯಕ್ಕೆ 42 ಸಿಆರ್‌ಸಿಎಫ್ ಯೋಧರು ಬಲಿಯಾಗಿದ್ದು, ಇಡಿ ದೇಶವೇ ಮೌನಕ್ಕೆ ಶರಣಾಗಿದೆ. ಫೆ. 15ರ ದಿನದಾಟದ ವೇಳೆ ಕೈಗೆ ಕಪ್ಪು ಪಟ್ಟಿ ಕಟ್ಟಿ ಆಡಿದ ವಿದರ್ಭ, ಶೇಷ ಭಾರತ ತಂಡಗಳೂ ಮೃತ ಯೋಧರಿಗೆ ಸಂತಾಪ ಸೂಚಿಸಿದ್ದವು. “ಪ್ರಶಸ್ತಿ ಮೊತ್ತವನ್ನು ಪುಲ್ವಾಮಾದಲ್ಲಿ ಹುತಾತ್ಮ ಯೋಧರ ಕುಟುಂಬಗಳಿಗೆ ದೇಣಿಗೆ ನೀಡುವುದಾಗಿ ತೀರ್ಮಾನಿಸಿದ್ದೇವೆ. ತಮ್ಮ ಕಡೆಯಿಂದ ಒಂದು ಚಿಕ್ಕ ಸಹಾಯ’ ಎಂದು ವಿದರ್ಭ ತಂಡದ ನಾಯಕ ಫೈಜ್‌ ಫ‌ಜಲ್‌ ಹೇಳಿದ್ದಾರೆ.

ಸಂಕ್ಷಿಪ್ತ ಸ್ಕೋರ್‌- ಶೇಷ ಭಾರತ 330 ಮತ್ತು 3 ವಿಕೆಟಿಗೆ 374 ಡಿಕ್ಲೇರ್‌ (ಹನುಮ ವಿಹಾರಿ ಔಟಾಗದೆ 180, ಶ್ರೇಯಸ್‌ ಅಯ್ಯರ್‌ ಔಟಾಗದೆ 61, ಸರ್ವಟೆ 141ಕ್ಕೆ 2), ವಿದರ್ಭ- 425 ಮತ್ತು 5 ವಿಕೆಟಿಗೆ 269 (ಗಣೇಶ್‌ ಸತೀಶ್‌ 87, ಅಥರ್ವ ಟೈಡೆ 72, ಸಂಜಯ್‌ ರಘುನಾಥ್‌ 42, ರಾಹುಲ್‌ ಚಹರ್‌ 116ಕ್ಕೆ 2).  
ಪಂದ್ಯ ಶ್ರೇಷ್ಠ: ಅಕ್ಷಯ್‌ ಕರ್ಣೇವಾರ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next