Advertisement

Test Series: ಇಂದಿನಿಂದ ‘ಎ’ ತಂಡಗಳ ದ್ವಿತೀಯ ಟೆಸ್ಟ್: ಎಲ್ಲರ ಗಮನ ರಾಹುಲ್ ಮೇಲೆ

11:10 PM Nov 06, 2024 | Team Udayavani |

ಮೆಲ್ಬರ್ನ್: ಭಾರತ ಮತ್ತು ಆಸ್ಟ್ರೇಲಿಯಾದ “ಎ’ ತಂಡಗಳು ಗುರುವಾರ ದ್ವಿತೀಯ ಅನಧಿಕೃತ ಟೆಸ್ಟ್‌ ಪಂದ್ಯವನ್ನು ಆಡಲಿಳಿಯಲಿದ್ದು, ಎಲ್ಲರ ಗಮನ ಕೆ.ಎಲ್‌.ರಾಹುಲ್‌ ಮೇಲೆ ನೆಟ್ಟಿದೆ. ಪಂದ್ಯದ ತಾಣ ಐತಿಹಾಸಿಕ ಮೆಲ್ಬರ್ನ್ ಕ್ರಿಕೆಟ್‌ ಮೈದಾನ. ರಾಹುಲ್‌ ಹೊರತುಪಡಿಸಿ ಭಾರತ ಎ ತಂಡದ ಉಳಿದ ಯಾವುದೇ ಆಟಗಾರರು ಇಲ್ಲಿ ಈವರೆಗೆ ಆಡಿಲ್ಲ.

Advertisement

ಭಾರತ ಇಲ್ಲಿಯೇ ಬಾರ್ಡರ್‌-ಗಾವಸ್ಕರ್‌ ಸರಣಿಯ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯವನ್ನು ಆಡಲಿದೆ. ಆರಂಭಕಾರ ಅಭಿಮನ್ಯು ಈಶ್ವರನ್‌, ಮೀಸಲು ಕೀಪರ್‌ ಧ್ರುವ ಜುರೆಲ್‌ ಅವರೆಲ್ಲ ಟೆಸ್ಟ್‌ ತಂಡದ ಸದಸ್ಯರಾಗಿದ್ದು, ಇವರು ಯಾವ ಮಟ್ಟದ ಪ್ರದರ್ಶನ ನೀಡಬಹುದು ಎಂಬುದನ್ನು ಆಯ್ಕೆಗಾರರು ಸೂಕ್ಷ್ಮವಾಗಿ ಗಮನಿಸಲಿದ್ದಾರೆ. ಮೊದಲ ಪಂದ್ಯದಲ್ಲಿ ಸಾಯಿ ಸುದರ್ಶನ್‌, ದೇವದತ್ತ ಪಡಿಕ್ಕಲ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು.

ಭಾರತ ಎ ಮೊದಲ ಪಂದ್ಯದಲ್ಲಿ ಸೋಲನುಭವಿಸಿತ್ತು. ಈ ಫ‌ಲಿತಾಂಶದ ಬೆನ್ನಲ್ಲೇ ರಾಹುಲ್‌ ಮತ್ತು ಜುರೆಲ್‌ ಅವರನ್ನು ಆಸ್ಟ್ರೇಲಿಯಾಕ್ಕೆ ರವಾನಿಸಲಾಗಿತ್ತು. ಬೆಂಗಳೂರು ಟೆಸ್ಟ್‌ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫ‌ಲ್ಯ ಅನುಭವಿಸಿದ ರಾಹುಲ್‌, ಆಡುವ ಬಳಗದಿಂದ ಬೇರ್ಪಟ್ಟಿದ್ದರು. ಅತ್ಯಂತ ಮಹತ್ವದ ಬಾರ್ಡರ್‌-ಗಾವಸ್ಕರ್‌ ಟೆಸ್ಟ್‌ ಸರಣಿಯ ಹಿನ್ನೆಲೆಯಲ್ಲಿ ರಾಹುಲ್‌ ಅವರ ಫಾರ್ಮ್ ಭಾರತಕ್ಕೆ ಮಹತ್ವದ್ದಾಗಲಿದೆ. ರಾಹುಲ್‌ ಉತ್ತಮ ಪ್ರದರ್ಶನದೊಂದಿಗೆ ಟೆಸ್ಟ್‌ ತಂಡಕ್ಕೆ ಮರಳಿದರೆ ಅವರಿಗೆ ಯಾವ ಕ್ರಮಾಂಕ ಸೂಕ್ತ ಎಂಬುದನ್ನೂ ನಿರ್ಧರಿಸಬೇಕಾಗುತ್ತದೆ.

ರಾಹುಲ್‌ ಅವರ ಈವರೆಗಿನ ಅತ್ಯುತ್ತಮ ಟೆಸ್ಟ್‌ ಸಾಧನೆಗಳೆಲ್ಲ ಹೊರಹೊಮ್ಮಿದ್ದೇ ಲಾರ್ಡ್ಸ್‌, ಓವಲ್‌, ಸಿಡ್ನಿ, ಸೆಂಚುರಿಯನ್‌ನಂಥ ವಿದೇಶಿ ಟ್ರ್ಯಾಕ್‌ಗಳಲ್ಲಿ ಎಂಬುದನ್ನು ಮರೆಯುವಂತಿಲ್ಲ.

ಇಶಾನ್‌ ಬದಲು ಜುರೆಲ್‌: ಫೀಲ್ಡ್‌ ಅಂಪೈರ್‌ಗಳ ಜತೆ ಕಿರಿಕ್‌ ಮಾಡಿಕೊಂಡ ಇಶಾನ್‌ ಕಿಶನ್‌ ಈ ಪಂದ್ಯದಲ್ಲಿ ಆಡುವ ಸಾಧ್ಯತೆ ಇಲ್ಲ. ಹೀಗಾಗಿಯೇ ಧ್ರುವ ಜುರೆಲ್‌ ಅವರನ್ನು ಕರೆಸಿಕೊಳ್ಳಲಾಗಿದೆ. ಹಾಗೆಯೇ ನವದೀಪ್‌ ಸೈನಿ ಬದಲು ಖಲೀಲ್‌ ಅಹ್ಮದ್‌, ಮಾನವ್‌ ಸುತಾರ್‌ ಬದಲು ತನುಷ್‌ ಕೋಟ್ಯಾನ್‌ ಆಡಲಿದ್ದಾರೆ. ಗೆದ್ದು ಸರಣಿಯನ್ನು ಸಮಬಲಕ್ಕೆ ತರಬೇಕಾದ ಒತ್ತಡವೂ ಭಾರತ “ಎ’ ತಂಡದ ಮೇಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next