ಹೊಸದಿಲ್ಲಿ : ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವಿಟೋ ಹಕ್ಕು ನೀಡಬೇಕು ಎಂದು ಕರೆ ನೀಡಿರುವ ಇರಾನ್ ಅಧ್ಯಕ್ಷ ಹಸನ್ ರೊಹಾನಿ ಅವರು ಭಾರತವು ಶತಕೋಟಿಗೂ ಮಿಕ್ಕಿದ ಶಾಂತಿ ಪ್ರಿಯ ಜನರಿರುವ ದೇಶವಾಗಿದೆ ಎಂದು ವರ್ಣಿಸಿದರು. ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟವನ್ನು ಇರಾನ್ ಸಕಲ ರೀತಿಯಲ್ಲಿ ಬೆಂಬಲಿಸುವುದಾಗಿ ರೊಹಾನಿ ಹೇಳಿದರು.
ಪ್ರಕೃತ ಭಾರತ ಭೇಟಿಯಲ್ಲಿರುವ ಇರಾನ್ ಅಧ್ಯಕ್ಷ ರೊಹಾನಿ ಅವರು “ಒಂದು ಶತಕೋಟಿಗೂ ಮಿಕ್ಕಿದ ಜನಸಂಖ್ಯೆ ಇರುವ ಭಾರತಕ್ಕೆ ಇನ್ನೂ ಯಾಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವಿಟೋ ಹಕ್ಕಿಲ್ಲ’ ಎಂದು ಅಚ್ಚರಿ ಪಟ್ಟರು. ದಿಲ್ಲಿಯಲ್ಲಿಂದು ನಡೆದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.
ಅಣು ಬಾಂಬ್ ಹೊಂದಿರುವ ವಿಶ್ವದ ಐದು ದೊಡ್ಡ ದೇಶಗಳಿಗೆ ಮಾತ್ರವೇ ವಿಶ್ವಸಂಸ್ಥೆಯಲ್ಲಿ ವಿಟೋ ಹಕ್ಕು ನೀಡಲಾಗಿರುವುದು ಏಕೆ ಎಂದವರು ಪ್ರಶ್ನಿಸಿದರು.
ಇರಾನ್ ಜನರ ಭವಿಷ್ಯವನ್ನು ನಿಯಂತ್ರಿಸಲು ಯತ್ನಿಸುತ್ತಿರುವ ಅಮೆರಿಕವನ್ನು ಅವರು ಖಂಡಿಸಿದರು.
ರೊಹಾನಿ ಅವರ ಭೇಟಿಯ ಸಂದರ್ಭದಲ್ಲೇ ಭಾರತ ಮತ್ತು ಇರಾನ 9 ನಿರ್ಣಾಯಕ ಒಪ್ಪಂದಗಳಿಗೆ ಸಹಿ ಹಾಕಿವೆ. ಜತೆಗೆ ವ್ಯೂಹಾತ್ಮಕವಾಗಿ ಅತ್ಯಂತ ಮಹತ್ವದ್ದಾಗಿರುವ ಇರಾನಿನ ಚಬಹಾರ್ ಬಂದರಿಗೆ ಈ ಸಂದರ್ಭದಲ್ಲಿ ಹೆಚ್ಚಿನ ಮಹತ್ವ ನೀಡಲಾಗಿದೆ.