Advertisement

ಮುಂಬೈ ಮೇಲೆರಗಿ ಹೋದ ಚೆನ್ನೈ

12:26 AM May 02, 2021 | Team Udayavani |

ಹೊಸದಿಲ್ಲಿ: ಆರಂಭದಲ್ಲಿ ಮೊಯಿನ್‌ ಅಲಿ ಮತ್ತು ಡು ಪ್ಲೆಸಿಸ್‌, ಕೊನೆಯಲ್ಲಿ ಅಂಬಾಟಿ ರಾಯುಡು ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಸಾಹಸದಿಂದ ಮುಂಬೈ ಮೇಲೆರಗಿ ಹೋದ ಚೆನ್ನೈ ಸೂಪರ್‌ ಕಿಂಗ್ಸ್‌ 4 ವಿಕೆಟಿಗೆ 218 ರನ್‌ ರಾಶಿ ಹಾಕಿದೆ. ಈ ಮೂವರೂ ಅರ್ಧ ಶತಕ ಬಾರಿಸಿ ರಂಜಿಸಿದರು.

Advertisement

ಮೊದಲ 10 ಹಾಗೂ ಅಂತಿಮ 5 ಓವರ್‌ಗಳಲ್ಲಿ ಚೆನ್ನೈ ರನ್‌ ಪ್ರವಾಹವನ್ನೇ ಹರಿಸಿತು. ಕೊನೆಯ 5 ಓವರ್‌ಗಳಲ್ಲಿ ರಾಯುಡು-ಜಡೇಜ ಜೋಡಿ 82 ರನ್‌ ಪೇರಿಸಿತು. ಮುರಿಯದ 5ನೇ ವಿಕೆಟಿಗೆ 49 ಎಸೆತಗಳಲ್ಲಿ 102 ರಾಶಿ ಹಾಕಿದ ಹೆಗ್ಗಳಿಕೆ ಇವರದಾಯಿತು.

ಉತ್ತಮ ಫಾರ್ಮ್ನಲ್ಲಿದ್ದ ಋತುರಾಜ್‌ ಗಾಯಕ್ವಾಡ್‌ (4) ಇಲ್ಲಿ 4ನೇ ಎಸೆತದಲ್ಲೇ ಟ್ರೆಂಟ್‌ ಬೌಲ್ಟ್ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಆದರೆ ಇನ್‌ಫಾರ್ಮ್ ಓಪನರ್‌ ಫಾ ಡು ಪ್ಲೆಸಿಸ್‌ ಮತ್ತು 3ನೇ ಕ್ರಮಾಂಕದಲ್ಲಿ ಬಂದ ಮೊಯಿನ್‌ ಅಲಿ ಸೇರಿಕೊಂಡು ಮುಂಬೈ ಬೌಲರ್‌ಗಳನ್ನು ಭರ್ಜರಿಯಾಗಿ ದಂಡಿಸತೊಡಗಿದರು. ಅಲಿ ಅವರಂತೂ ಭಾರೀ ಜೋಶ್‌ನಲ್ಲಿದ್ದರು. ಬುಮ್ರಾ, ಚಹರ್‌, ನೀಶಮ್‌… ಯಾರಿಗೂ ರಿಯಾಯಿತಿ ತೋರಲಿಲ್ಲ. ಎಲ್ಲರಿಗೂ ಸಿಕ್ಸರ್‌ ರುಚಿ ತೋರಿಸಿದರು. ಅರ್ಧ ಶತಕ ಪೂರ್ತಿಗೊಳಿಸುವಷ್ಟರಲ್ಲಿ 5 ಸಿಕ್ಸರ್‌ ಸಿಡಿಸಿಯಾಗಿತ್ತು. 10 ಓವರ್‌ಗಳಲ್ಲಿ 95 ರನ್‌ ಹರಿದು ಬಂತು.

11ನೇ ಓವರ್‌ನಲ್ಲಿ ಬುಮ್ರಾ ಮೇಲೆರಗಿ ಹೋದ ಡು ಪ್ಲೆಸಿಸ್‌ ಸತತ ಸಿಕ್ಸರ್‌, ಬೌಂಡರಿ ಬಾರಿಸಿದರು. ಆದರೆ 5ನೇ ಎಸೆತದಲ್ಲಿ ಅಲಿ ವಿಕೆಟ್‌ ಕಿತ್ತು ದೊಡ್ಡದೊಂದು ಬ್ರೇಕ್‌ ಒದಗಿಸಿದರು. ಅಲಿ ಗಳಿಕೆ 36 ಎಸೆತಗಳಿಂದ 58 ರನ್‌. ಸಿಡಿಸಿದ್ದು 5 ಸಿಕ್ಸರ್‌ ಹಾಗೂ 5 ಫೋರ್‌. ಇವರಿಬ್ಬರ ದ್ವಿತೀಯ ವಿಕೆಟ್‌ ಜತೆಯಾಟದಲ್ಲಿ 61 ಎಸೆತಗಳಿಂದ 108 ರನ್‌ ಹರಿದು ಬಂತು.

ಡು ಪ್ಲೆಸಿಸ್‌ ಸತತ 4ನೇ ಫಿಫ್ಟಿ

Advertisement

ಡು ಪ್ಲೆಸಿಸ್‌ ಸತತ 4ನೇ ಅರ್ಧ ಶತಕದ ಮೂಲಕ ತಮ್ಮ ಪ್ರಚಂಡ ಫಾರ್ಮ್ ತೆರೆದಿಟ್ಟರು. ಆಫ್ರಿಕನ್‌ ಕ್ರಿಕೆಟಿಗನ ಕೊಡುಗೆ ಭರ್ತಿ 50 ರನ್‌. 28 ಎಸೆತ ಎದುರಿಸಿ 4 ಸಿಕ್ಸರ್‌, 2 ಬೌಂಡರಿ ಬಾರಿಸಿದರು. ತಮ್ಮ ಮೊದಲ ಹಾಗೂ ಪಂದ್ಯದ 12ನೇ ಓವರ್‌ನಲ್ಲಿ ಪೊಲಾರ್ಡ್‌ ಅವಳಿ ವಿಕೆಟ್‌ ಕಿತ್ತು ಚೆನ್ನೈಗೆ ಬ್ರೇಕ್‌ ಹಾಕಿದರು. ಸತತ ಎಸೆತಗಳಲ್ಲಿ ಡು ಪ್ಲೆಸಿಸ್‌ ಮತ್ತು ಸುರೇಶ್‌ ರೈನಾ (2) ಅವರನ್ನು ಪೆವಿಲಿಯನ್ನಿಗೆ ಓಡಿಸಿದರು. ಅಲ್ಲಿಗೆ ಚೆನ್ನೈ ರನ್‌ರೇಟ್‌ ಕುಸಿಯತೊಡಗಿತು.

ಆದರೆ ಡೆತ್‌ ಓವರ್‌ಗಳಲ್ಲಿ ಅಂಬಾಟಿ ರಾಯುಡು ಸಿಡಿದು ನಿಲ್ಲುವುದರೊಂದಿಗೆ ಚೆನ್ನೈ ಬ್ಯಾಟಿಂಗ್‌ ಮತ್ತೆ ಬಿರುಸುಪಡೆಯತೊಡಗಿತು. ಇವರ ಹೊಡೆತಗಳಿಗೆ ಸಿಲುಕಿದ ಬುಮ್ರಾ, ಬೌಲ್ಟ್ ಎಸೆತಗಳು ಆಕಾಶಕ್ಕೆ ನೆಗೆದವು. 20 ಎಸೆತಗಳಲ್ಲಿ ರಾಯುಡು ಫಿಫ್ಟಿ ಪೂರ್ತಿಗೊಳಿಸಿದರು. ಬುಮ್ರಾ ಅವರ 4 ಓವರ್‌ಗಳಲ್ಲಿ 56 ರನ್‌ ಸೋರಿ ಹೋಯಿತು. ಇದು ಐಪಿಎಲ್‌ನಲ್ಲಿ ಅವರ ದುಬಾರಿ ಸ್ಪೆಲ್‌ ಆಗಿದೆ. ರಾಯುಡು 27 ಎಸೆತಗಳಿಂದ ಅಜೇಯ 72 ರನ್‌ ಬಾರಿಸಿದರು. ಈ ಸ್ಫೋಟಕ ಬ್ಯಾಟಿಂಗ್‌ ವೇಳೆ 7 ಸಿಕ್ಸರ್‌, 4 ಫೋರ್‌ ಸಿಡಿಯಿತು.

ಜೇಮ್ಸ್‌ ನೀಶಮ್‌ ಪ್ರವೇಶ

ನ್ಯೂಜಿಲ್ಯಾಂಡಿನ ಆಲ್‌ರೌಂಡರ್‌ ಜೇಮ್ಸ್‌ ನೀಶಮ್‌ ಮುಂಬೈ ಪರ ಮೊದಲ ಐಪಿಎಲ್‌ ಪಂದ್ಯ ಆಡಲಿಳಿದರು. ಇದರೊಂದಿಗೆ ಮುಂಬೈ ತನ್ನ ಎಲ್ಲ 8 ಮಂದಿ ವಿದೇಶಿ ಆಟಗಾರರಿಗೆ ಅವಕಾಶ ನೀಡಿದಂತಾಯಿತು. ಇವರಿಗಾಗಿ ಸ್ಥಾನ ಬಿಟ್ಟವರು ಜಯಂತ್‌ ಯಾದವ್‌. ಹಾಗೆಯೇ ನಥನ್‌ ಕೋಲ್ಟರ್‌ ನೈಲ್‌ ಬದಲು ಧವಳ್‌ ಕುಲಕರ್ಣಿ ಆಡಲಿಳಿದರು.ಚೆನ್ನೈ ತಂಡದಲ್ಲಿ ಯಾವುದೇ ಬದಲಾವಣೆ ಸಂಭವಿಸಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next