ಧರ್ಮಶಾಲಾ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 28 ರನ್‌ಗಳ ಜಯ ಸಾಧಿಸಿದೆ. ಜಯದೊಂದಿಗೆ ಚೆನ್ನೈ ಆಡಿದ 11ನೇ ಪಂದ್ಯದಲ್ಲಿ 6 ನೇ ಜಯ ತನ್ನದಾಗಿಸಿಕೊಂಡು ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪಂಜಾಬ್ 11 ನೇ ಪಂದ್ಯದಲ್ಲಿ 7 ನೇ ಸೋಲು ಅನುಭವಿಸಿ ಮುಂದಿನ ಹಾದಿ ಕಠಿನ ಮಾಡಿಕೊಂಡಿದೆ. ಪ್ಲೇ ಆಫ್ ಲೆಕ್ಕಾಚಾರ ಈಗ ಆರಂಭಗೊಂಡಿದೆ.
ಸೋಲಿನ ನಂತರ ಪಂಜಾಬ್ ಕಿಂಗ್ಸ್ ಭವಿಷ್ಯ ತಂಡದ ಕೈಯಲ್ಲಿಲ್ಲ. ಏತನ್ಮಧ್ಯೆ, ಕೆಕೆಆರ್ ವಿರುದ್ಧ ಲಕ್ನೋ ಮತ್ತೊಂದು ನಿರ್ಣಾಯಕ ಆಟ ನಡೆಯುತ್ತಿದೆ.
ಪಂಜಾಬ್ ಕಿಂಗ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಚೆನ್ನೈ 9 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ನಾಯಕ ರುತುರಾಜ್ ಗಾಯಕ್ವಾಡ್ 32, ಡೇರಿಲ್ ಮಿಚೆಲ್ 30, ಮೊಯಿನ್ ಅಲಿ 17, ರವೀಂದ್ರ ಜಡೇಜ 43, ಸ್ಯಾಂಟ್ನರ್ 11, ಶಾರ್ದೂಲ್ ಠಾಕೂರ್ 17 ರನ್ ಗಳಿಸಿದರು. ಕೊನೆಯಲ್ಲಿ ಬಂದ ಧೋನಿ ಶೂನ್ಯಕ್ಕೆ ಔಟಾದರು.
ರಾಹುಲ್ ಚಹಾರ್ ಮತ್ತು ಹರ್ಷಲ್ ಪಟೇಲ್ ತಲಾ ಮೂರು ವಿಕೆಟ್ ಕಿತ್ತರು. ಅರ್ಷದೀಪ್ ಸಿಂಗ್ 2 ವಿಕೆಟ್ ಪಡೆದರು. ನಾಯಕ ಸ್ಯಾಮ್ ಕರನ್ 1 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಪಂಜಾಬ್ ಜಡೇಜ ಮತ್ತು ಇತರ ಬೌಲರ್ ಗಳ ಬಿಗಿ ದಾಳಿಗೆ ನಲುಗಿ 9 ವಿಕೆಟ್ ನಷ್ಟಕ್ಕೆ 139 ರನ್ ಮಾತ್ರ ಗಳಿಸಿತು. ಪ್ರಭಸಿಮ್ರಾನ್ ಸಿಂಗ್ ಸಿ 30, ಶಶಾಂಕ್ ಸಿಂಗ್ 27 ರನ್ ಗರಿಷ್ಟ ಸ್ಕೋರ್ , ಪ್ರಮುಖ ಬ್ಯಾಟ್ಸ್ ಮ್ಯಾನ್ ಗಳು ವೈಫಲ್ಯ ಅನುಭವಿಸಿದರು. ಕೊನೆಯಲ್ಲಿ ಹರ್‌ಪ್ರೀತ್ ಬ್ರಾರ್ ಔಟಾಗದೆ 17, ಹರ್ಷಲ್ ಪಟೇಲ್ 12, ರಾಹುಲ್ ಚಹರ್ 16, ಕಗಿಸೊ ರಬಾಡ ಔಟಾಗದೆ 11 ರನ್ ಗಳಿಸಿದರೂ ಗೆಲುವು ಸಾಧ್ಯವಾಗಲಿಲ್ಲ.
ಜಡೇಜ 3 ವಿಕೆಟ್ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿ ಪಂದ್ಯ ಶ್ರೇಷ್ಠ ಎನಿಸಿಕೊಂಡರು. ಸಿಮರ್ಜೀತ್ ಸಿಂಗ್ ಮತ್ತು ತುಷಾರ್ ದೇಶಪಾಂಡೆ ತಲಾ 2, ಶಾರ್ದೂಲ್ ಠಾಕೂರ್ ಮತ್ತು ಮಿಚೆಲ್ ಸ್ಯಾಂಟ್ನರ್ ತಲಾ 1 ವಿಕೆಟ್ ಪಡೆದರು.