ಬೆಂಗಳೂರು: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ (Syed Mushtaq Ali Trophy) ಇದೀಗ ಅಂತಿಮ ಹಂತದತ್ತ ಸಾಗಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡವು ವಿದರ್ಭ ವಿರುದ್ದ ಗೆಲುವು ಸಾಧಿಸಿ ಸೆಮಿ ಫೈನಲ್ ಪ್ರವೇಶಿಸಿದೆ.
ಬೆಂಗಳೂರಿನ ಆಲೂರಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ಆರು ವಿಕೆಟ್ ನಷ್ಟಕ್ಕೆ 221 ರನ್ ಮಾಡಿದರೆ, ಮುಂಬೈ ತಂಡವು ಪೃಥ್ವಿ ಶಾ, ಅಜಿಂಕ್ಯ ರಹಾನೆ ಬ್ಯಾಟಿಂಗ್ ನೆರವಿನಿಂದ ಇನ್ನೂ ನಾಲ್ಕು ಎಸೆತ ಬಾಕಿ ಇರುವಂತೆ ಜಯ ಸಾಧಿಸಿತು.
ಶಾ 49 ರನ್ ಮಾಡಿದರೆ, ಅಜಿಂಕ್ಯ ರಹಾನೆ 45 ಎಸೆತಗಳಲ್ಲಿ 85 ರನ್ ಮಾಡಿದರು. ಮುಂಬೈ ಇನ್ನಿಂಗ್ಸ್ನಲ್ಲಿ ಎದ್ದುಕಾಣುವ ಇನ್ನೊಬ್ಬ ಬ್ಯಾಟರ್ ಎಂದರೆ 21 ವರ್ಷದ ಸೂರ್ಯಾಂಶ್ ಶೆಡ್ಗೆ. ಐಪಿಎಲ್ 2025 ಹರಾಜಿನಲ್ಲಿ 30 ಲಕ್ಷ ರೂ.ಗೆ ಈ ಬ್ಯಾಟಿಂಗ್ ಆಲ್ರೌಂಡರ್ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದರು.
ವಿದರ್ಭ ವಿರುದ್ದ ಕೊನೆಯ ಹಂತದಲ್ಲಿ ಬ್ಯಾಟ್ ಬೀಸಿದ ಶೆಡ್ಗೆ ಕೇವಲ 12 ಎಸೆತಗಳಲ್ಲಿ 36 ರನ್ ಗಳಿಸಿದರು. ಈ ವಿಸ್ಪೋಟಕ ಇನ್ನಿಂಗ್ಸ್ ನಲ್ಲಿ ಅವರು ನಾಲ್ಕು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು.
ಮುಂಬೈ ತಂಡವು ಸೆಮಿ ಫೈನಲ್ ಪ್ರವೇಶಿಸಲು ಕೊನೆಯ ನಾಲ್ಕು ಓವರ್ ಗಳಲ್ಲಿ 60 ರನ್ ಗಳಿಸಬೇಕಾದ ಅಗತ್ಯವಿತ್ತು. ಈ ವೇಳೆ ಜತೆಯಾದ ಶಿವಂ ದುಬೆ ಮತ್ತು ಸೂರ್ಯಾಂಶ್ ಶೆಡ್ಗೆ ನಾಲ್ಕು ಎಸೆತ ಬಾಕಿ ಇರುವಂತೆ ಗುರಿ ಮುಟ್ಟಿದರು. ಶಿವಂ ದುಬೆ 22 ಎಸೆತಗಳಲ್ಲಿ 37 ರನ್ ಬಾರಿಸಿದರು.